Friday 8 July 2016

ನಾಳೆಯಿಂದ ಎಲೆಕ್ಟ್ರಾನಿಕ್ಸ್‌ ಶೃಂಗಸಭೆ

ಬೆಂಗಳೂರು:  ಭಾರತೀಯ ಎಲೆಕ್ಟ್ರಾನಿಕ್ಸ್‌ ಉದ್ಯಮ ಸಂಘಟನೆ ‘ಎಲ್ಸಿನಾ’ ಜುಲೈ 7ಮತ್ತು 8ರಂದು ಬೆಂಗಳೂರು  ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಏಳನೇ ಎಲೆಕ್ಟ್ರಾನಿಕ್ಸ್‌ ಶೃಂಗಸಭೆ (ಎಸ್‌ಇಎಸ್‌ 2016) ಹಮ್ಮಿಕೊಂಡಿದೆ. ಸೈಯೆಂಟ್‌, ಬಿಇಎಲ್‌, ಸಿ–ಡಾಟ್‌ , ಎಚ್‌ಎಎಲ್‌ ಮತ್ತು ಸೆಂಟ್ರಂ ಎಲೆಕ್ಟ್ರಾನಿಕ್ಸ್‌ ಸಹಯೋಗದಲ್ಲಿ ನಡೆಯುವ ಎರಡು ದಿನಗಳ ಶೃಂಗಸಭೆಯಲ್ಲಿ 47ಕ್ಕೂ ಹೆಚ್ಚು  ದೇಶೀಯ ರಕ್ಷಣಾ ಸಾಮಗ್ರಿಗಳ ತಯಾರಿಕಾ ತಂತ್ರಜ್ಞಾನ ಉದ್ಯಮಗಳು
 ಭಾಗವಹಿಸಲಿವೆ.ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಶೃಂಗಸಭೆ ಉದ್ಘಾಟಿಸಲಿದ್ದು,  ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ (ಡಿಇಐಟಿ) ಹೆಚ್ಚುವರಿ ಕಾರ್ಯದರ್ಶಿ ಡಾ. ಅಜಯ್‌ ಕುಮಾರ್‌ ಮತ್ತು ಎಚ್‌ಎಎಲ್‌–ಬಿಇಎಲ್‌ ಸಿಎಂಡಿ ಡಾ. ಜಿ. ಸತೀಶ್‌ ರೆಡ್ಡಿ ಭಾಗವಹಿಸಲಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಹಿವಾಟು ಹೆಚ್ಚಳಕ್ಕೆ ಈ ಶೃಂಗಸಭೆ ವೇದಿಕೆ ಒದಗಿಸಲಿದೆ. ಈ ಸಂದರ್ಭದಲ್ಲಿ ಅನೇಕ ಒಪ್ಪಂದಗಳಾಗುವ ನಿರೀಕ್ಷೆ ಇದೆ ಎಂದು ಎಲ್ಸಿನಾ ಅಧ್ಯಕ್ಷ ವಿಕ್ರಂ ದೇಸಾಯಿ  ಅವರು  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭಾರತದ ಮಾರುಕಟ್ಟೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಎಲೆಕ್ಟ್ರಾನ್‌ ತಂತ್ರಜ್ಞಾನ ಆಧಾರಿತ ಯಂತ್ರೋಪಕರಣ ಮತ್ತು ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದು, 2020ರ ವೇಳೆಗೆ ಈ ವಹಿವಾಟು ₹ 27 ಲಕ್ಷ ಕೋಟಿಗೆ (400 ಶತಕೋಟಿ ಡಾಲರ್‌) ಹೆಚ್ಚಲಿದೆ. ಈ ಬೆಳವಣಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತಮ ಅವಕಾಶ ಒದಗಿಸಲಿದೆ’ ಎಂದು ಎಲ್ಸಿನಾ ಮಾಜಿ ಅಧ್ಯಕ್ಷ ಸುಭಾಷ್‌ ಗೋಯೆಲ್‌ ತಿಳಿಸಿದರು.

‘ವಿದ್ಯುತ್‌ ಶಕ್ತಿ ಕೊರತೆ, ದುರ್ಬಲ ಸರಕು ಸಾಗಣೆ ವ್ಯವಸ್ಥೆ, ಹೆಚ್ಚಿದ ವೆಚ್ಚ, ಮೂಲಸೌಕರ್ಯ ಕೊರತೆಗಳು ಎಲೆಕ್ಟ್ರಾನಿಕ್ಸ್‌ ವಲಯ, ಸಂಶೋಧನೆ ಮತ್ತು ಅಭಿವೃದ್ಧಿ   ಕ್ಷೇತ್ರದ (ಆರ್‌ಆ್ಯಂಡ್‌ಡಿ)  ಬೆಳವಣಿಗೆಗೆ ಅಡ್ಡಿಯಾಗಿವೆ. ಈ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಎಲ್ಸಿನಾ ಶ್ರಮಿಸುತ್ತಿದೆ’ ಎಂದು ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ರಾಜು ಗೋಯೆಲ್‌ ತಿಳಿಸಿದರು.

‘ದೇಶದ ರಕ್ಷಣಾ ಸಾಮಗ್ರಿ ತಯಾರಿಕೆಯಲ್ಲಿ ಸ್ವಾವಲಂಬನೆ, ರಕ್ಷಣಾ ಸಾಮರ್ಥ್ಯ ಹೆಚ್ಚಳಕ್ಕೆ ಎಲ್ಸಿನಾ ಆಯೋಜಿಸಿರುವ ಶೃಂಗಸಭೆ ವೇದಿಕೆಯಾಗಲಿದೆ’ ಎಂದು ಸೈಯೆಂಟ್‌ ಸಿಇಒ ಡಾ. ವೆಂಕಟೇಶ್‌ ಪದ್ಮನಾಭನ್‌ ಅಭಿಪ್ರಾಯಪಟ್ಟರು.

ಎಲ್ಸಿನಾ ಪದಾಧಿಕಾರಿಗಳು ಮತ್ತು  ಉದ್ಯಮದ ಮುಖ್ಯಸ್ಥರಾದ ಎಂ. ಅನಿಲ್‌ ಕುಮಾರ್‌, ಶೋಭನಾ ಪ್ರಕಾಶ್‌, ವಿನೋದ್‌ ಚಿಪ್ಪಲಕಟ್ಟಿ, ಕೆ.ಎಸ್‌. ದೇಸಿಕನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

No comments:

Post a Comment