Saturday 9 July 2016

ಪ್ರಸಕ್ತ ವಿತ್ತ ವರ್ಷದಿಂದ ಶೇ. 7ರ ಬಡ್ಡಿಯಲ್ಲಿ ಬೆಳೆ ಸಾಲ



ನವದೆಹಲಿ: ರೈತರ ಆರ್ಥಿಕ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರ ಶೇ.7ರ ಕಡಿಮೆ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡಲು ಮುಂದಾಗಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಈ ಯೋಜನೆ ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರಲಿದೆ. ಇದರಡಿ ರೈತರು ಒಂದು ವರ್ಷದ ಅವಧಿಗೆ 3 ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆಯಬಹುದಾಗಿದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ ಬಡ್ಡಿಯಲ್ಲಿ ಶೇ. 3 ವಿನಾಯಿತಿ ನೀಡುವ, ಅಂದರೆ ಶೇ.4ರ ಬಡ್ಡಿ ವಿಧಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ
ನೀಡಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು. 2015-16ನೇ ಸಾಲಿನಲ್ಲಿ ಸರ್ಕಾರ 8.5 ಲಕ್ಷ ಕೋಟಿ ರೂ. ಕೃಷಿ ಸಾಲದ ಗುರಿ ನಿಗದಿಪಡಿಸಿತ್ತು. ಪ್ರಸಕ್ತ ವಿತ್ತ ವರ್ಷದಲ್ಲಿ ಇದನ್ನು 9 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಏತನ್ಮಧ್ಯೆ, ರಾಷ್ಟ್ರೀಯ ಕೌಶಲಾಭಿವೃದ್ಧಿ ಯೋಜನೆಗೆ 10 ಸಾವಿರ ಕೋಟಿ ರೂ. ಒದಗಿಸುವ ಪ್ರಸ್ತಾವನೆಯನ್ನೂ ಸಂಪುಟ ಅನುಮೋದಿಸಿದೆ. 2019-20ರ ವೇಳೆಗೆ 50 ಲಕ್ಷ ಮಂದಿಯ ಕೌಶಲಾಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಧಾನ್ಯಗಳ ಬೆಲೆ ನಿಯಂತ್ರಿಸುವ ಸಲುವಾಗಿ ಮೊಜಾಂಬಿಕ್​ನಿಂದ ತೊಗರಿ ಬೇಳೆ ಮತ್ತು ಇತರ ಧಾನ್ಯಗಳ ಆಮದು ಪ್ರಮಾಣವನ್ನು ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕ 2 ಲಕ್ಷ ಟನ್​ಗೆ ಹೆಚ್ಚಿಸುವ ಪ್ರಸ್ತಾವನೆಯನ್ನೂ ಸಂಪುಟ ಅನುಮೋದಿಸಿದೆ.

ಬಿಎಸ್​ಎನ್​ಎಲ್ ಪಿಂಚಣಿ ಶೇ.9 ಹೆಚ್ಚಳ: 2007ರಿಂದ 2013ರ ಅವಧಿಯಲ್ಲಿ ನಿವೃತ್ತಿಗೊಂಡ 1.88 ಲಕ್ಷ ಬಿಎಸ್​ಎನ್​ಎಲ್ ನೌಕರರ ಪಿಂಚಣಿಯನ್ನು ಶೇ. 9 ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 239.92 ಕೋಟಿ ರೂ. ಹೆಚ್ಚುವರಿ ಹೊರೆಬೀಳಲಿದೆ. ‘ಪಿಂಚಣಿದಾರರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ನಾವು ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ. ಹೊಸ ಸಂಸ್ಥೆಯಾಗಿ ಬಿಎಸ್​ಎನ್​ಎಲ್ ಅನ್ನು ರೂಪಿಸಿದ್ದಾಗ ನೌಕರರಿಗೆ ವೇತನ ನೀಡುವ ಹೊಣೆಯನ್ನು ಅದಕ್ಕೆ ವಹಿಸಲಾಗಿತ್ತು. ಪಿಂಚಣಿಯನ್ನು ಸರ್ಕಾರವೇ ನೀಡುತ್ತಿದೆ ಎಂದು ರವಿಶಂಕರ್ ತಿಳಿಸಿದರು. 

No comments:

Post a Comment