Friday, 8 July 2016

ಗಂಗಾ ಕಾಯ್ದೆ ರಚನೆಗೆ ಕೇಂದ್ರ ಚಿಂತನೆ

 ಹರಿದ್ವಾರ ; ನಮಾಮಿ ಗಂಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ಸಂಬಂಧ ಗಂಗಾ ಕಾಯ್ದೆ ರಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಮತ್ತು ಗಂಗಾನದಿ ಪುನಶ್ಚೇತನ ಖಾತೆ ಸಚಿವೆ ಉಮಾ ಭಾರತಿ ತಿಳಿಸಿದರು.₹250 ಕೋಟಿ ವೆಚ್ಚದಲ್ಲಿ ನಮಾಮಿ ಗಂಗೆ ಯೋಜನೆಯಡಿ ಕೈಗೆತ್ತಿಕೊಂಡಿ ರುವ 43 ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು,   ‘ಕೈಗಾರಿಕೆಗಳು ತ್ಯಾಜ್ಯವನ್ನು  ನದಿಗೆ ಬಿಡುವಂತಿಲ್ಲ.  ಕೈಗಾರಿಕೆಗಳ
ಶುದ್ಧೀಕರಿಸಿದ ನೀರನ್ನು ನೀರಾವರಿ ಉದ್ದೇಶಕ್ಕಾಗಿ ಬಳಸುವುದನ್ನು  ಕಡ್ಡಾಯ ಮಾಡುವ ಬಗ್ಗೆ ಕಾಯ್ದೆಯಲ್ಲಿ ನಿಯಮ ರೂಪಿಸಲಾಗುವುದು’ ಎಂದರು.

‘ಕಾಯ್ದೆಯ ಕರಡು ರೂಪಿಸಿ ಅಭಿಪ್ರಾಯ ಸಂಗ್ರಹಕ್ಕಾಗಿ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಅದರ ಆಧಾರದ ಮೇಲೆ ಅಂತಿಮ ಕಾಯ್ದೆ ರಚಿಸಲಾಗುತ್ತದೆ’  ಎಂದು ತಿಳಿಸಿದರು.

‘ಕೈಗಾರಿಕಾ ತ್ಯಾಜ್ಯವನ್ನು ಗಂಗಾ ನದಿಗೆ ಬಿಟ್ಟರೆ ಜೈಲಿಗೆ ಕಳುಹಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹತ್ವಾಕಾಂಕ್ಷೆಯ ಗಂಗಾನದಿ ಶುದ್ಧೀಕರಣಕ್ಕೆ  ಮುಂದಾಗಿದೆ. ಕೆಲ ವರ್ಷಗಳಿಂದ  ಮಲಿನಗೊಂಡಿರುವ ನದಿ ಶುದ್ಧೀಕರಣಕ್ಕಾಗಿ ನಮಾಮಿ ಗಂಗೆ ಯೋಜನೆಯಡಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು. 

‘ಈ ಯೋಜನೆಯಡಿ ನದಿ ಶುದ್ಧೀಕರಣ ಅಷ್ಟೆ ಅಲ್ಲದೆ ಅದರ ನಿರ್ವಹಣೆಯನ್ನೂ ಮಾಡಲಾಗುತ್ತದೆ. ಇದರ ಜೊತೆಗೆ 1985ರಿಂದ 2014ರವರೆಗೆ ಖರ್ಚಾಗಿರುವ ₹4 ಸಾವಿರ ಕೋಟಿ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಅಕ್ಟೋಬರ್‌ ತಿಂಗಳಲ್ಲಿ ಗಂಗಾ ಪಾದಯಾತ್ರೆಯನ್ನು ಆರಂಭಿಸಿ ಗಂಗಾ ಶುದ್ಧೀಕರಣದ ಪ್ರಯೋಜನಗಳು ಹಾಗೂ ಅದಕ್ಕೆ ಜನರು ಹೇಗೆ ಸಹಕರಿಸಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ’ ಎಂದರು.

‘ನದಿ ತೀರದಲ್ಲಿ ಸ್ಮಶಾನಗಳ ವಿಸ್ತರಣೆ, ಮರ ನೆಡುವುದು, ಕೊಳಚೆ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ನಾಗರಿಕ ಸೌಲಭ್ಯಗಳ ಅಭಿವೃದ್ಧಿ ಯೋಜನೆಗಳನ್ನು ಇದು ಒಳಗೊಂಡಿದೆ’ ಎಂದು ನಮಾಮಿ ಯೋಜನೆಯ ನಿರ್ದೇಶಕ ರಜತ್‌ ಭಾರ್ಗವ್‌ ಹೇಳಿದರು.No comments:

Post a Comment