Wednesday, 13 July 2016

ಕೇಂದ್ರ ಸಚಿವರಾದ ಸಿದ್ದೇಶ್ವರ, ನಜ್ಮಾ ರಾಜೀನಾಮೆ


ನವದೆಹಲಿ: ಸಂಪುಟ ಪುನಾರಚನೆಯಾದ ಒಂದೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಂತ್ರಿಮಂಡಲದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಹೊಣೆ ಹೊತ್ತಿದ್ದ ಹಿರಿಯ ಸಚಿವೆ ನಜ್ಮಾ ಹೆಪು¤ಲ್ಲಾ ಮತ್ತು ಕರ್ನಾಟಕದ ದಾವಣಗೆರೆ ಸಂಸದರಾದ ಭಾರಿ ಕೈಗಾರಿಕಾ ಖಾತೆ ರಾಜ್ಯ ಮಂತ್ರಿ ಜಿ.ಎಂ. ಸಿದ್ದೇಶ್ವರ
ಅವರನ್ನು ಮಂಗಳವಾರ ಕೈಬಿಟ್ಟಿದ್ದಾರೆ.

ಈ ಇಬ್ಬರ ರಾಜೀನಾಮೆಯನ್ನು ಮಂಗಳವಾರ ಸಂಜೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಂಗೀಕರಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ನಜ್ಮಾ ಅವರ ಖಾತೆಯ ಹೊಣೆಯನ್ನು ರಾಜ್ಯ ಸಚಿವರಾಗಿದ್ದ ಮುಖಾ¤ರ್‌ ಅಬ್ಟಾಸ್‌ ನಖೀÌ ಅವರಿಗೆ ನೀಡಲಾಗಿದ್ದು, ಸ್ವತಂತ್ರವಾಗಿ ಖಾತೆ ನಿರ್ವಹಿಸಲು ಬಡ್ತಿ ನೀಡಲಾಗಿದೆ. ಸಿದ್ದೇಶ್ವರ ಅವರ ಖಾತೆಯನ್ನು ಈವರೆಗೆ ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿದ್ದ ಬಾಬುಲ್‌ ಸುಪ್ರಿಯೋ ಅವರಿಗೆ ನೀಡಲಾಗಿದೆ.

ನಜ್ಮಾ  ವಯಸ್ಸು 75 ದಾಟಿದ್ದು, "75 ಮೀರಿದವರಿಗೆ ಸಂಪುಟದಲ್ಲಿ ಸ್ಥಾನವಿಲ್ಲ' ನೀತಿಯನ್ವಯ ಕೈಬಿಡಲಾಗಿದೆ. ಇನ್ನು ಸಿದ್ದೇಶ್ವರ ಅವರ ಕರ್ನಾಟಕ ಕೋಟಾದಲ್ಲಿ ರಮೇಶ ಜಿಗಜಿಣಗಿ ಅವರನ್ನು ಸೇರ್ಪಡೆ ಮಾಡಲಾಗಿತ್ತು.

ಸಿದ್ದೇಶ್ವರ ಕಳೆದ ಮಂಗಳವಾರದ ಪುನಾರಚನೆ ದಿನದಂದೇ ರಾಜೀನಾಮೆ ನೀಡಬೇಕಿತ್ತಾದರೂ, ಮರುದಿನ ಅವರ ಜನ್ಮದಿನ ಇದ್ದ ಕಾರಣ ರಾಜೀನಾಮೆ ಸಲ್ಲಿಕೆ ದಿನಾಂಕವನ್ನು ವರಿಷ್ಠರ ಅನುಮತಿ ಮೇರೆಗೆ ವಿಸ್ತರಿಸಿಕೊಂಡಿದ್ದರು. ಆ ಪ್ರಕಾರ 2 ದಿವಸದ ಹಿಂದೆ ರಾಜೀನಾಮೆ ಸಲ್ಲಿಸಿದ್ದರು. ಸಿದ್ದೇಶ್ವರ ರಾಜೀನಾಮೆಯಿಂದ ಕೇಂದ್ರ ಮಂತ್ರಿಮಂಡಲದಲ್ಲಿ ಕರ್ನಾಟಕದ ಪ್ರಾತಿನಿಧ್ಯ 4ಕ್ಕೆ ಕುಸಿದಿದೆ. ಮೋದಿ ಮಂತ್ರಿಮಂಡಲದ ಬಲ 76ಕ್ಕಿಳಿದಿದೆ.

ಕ್ಷೇತ್ರದ ಕೆಲಸಕ್ಕಾಗಿ ರಾಜೀನಾಮೆ: ಸಿದ್ದೇಶ್ವರ
ನವದೆಹಲಿ: "ನನ್ನ ಕ್ಷೇತ್ರದಲ್ಲಿ 2 ವರ್ಷದಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಮಂತ್ರಿಯಾಗಿದ್ದರಿಂದ ಕೇವಲ ಖಾತೆಯತ್ತ ಮಾತ್ರ ಗಮನ ಹರಿಸಬೇಕಿದ್ದ ಕಾರಣ, ಕ್ಷೇತ್ರದತ್ತ ಗಮನ ಹರಿಸಲು ಆಗುತ್ತಲೇ ಇರಲಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ' ಎಂದು ಕೇಂದ್ರ ಭಾರಿ ಕೈಗಾರಿಕಾ ರಾಜ್ಯ ಸಚಿವ ಖಾತೆಗೆ ರಾಜೀನಾಮೆ ನೀಡಿದ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ರಾಜೀನಾಮೆ ಸುದ್ದಿ ಹೊರಬಿದ್ದ ಬಳಿಕ "ಉದಯವಾಣಿ'ಯೊಂದಿಗೆ ದೂರವಾ ಣಿಯಲ್ಲಿ ಮಾತನಾಡಿದ ಸಿದ್ದೇಶ್ವರ ಅವರು, "ನನ್ನ ಕಾರ್ಯಸಾಧನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಅಸಮಾಧಾನ ಇರಲಿಲ್ಲ. ಕ್ಷೇತ್ರದ ಕಡೆ ಗಮನ ಹರಿಸುವ ಉದ್ದೇಶದಿಂದ ರಾಜೀನಾಮೆ ನೀಡುವ ಬಗ್ಗೆ ಮೊದಲೇ ನಿರ್ಧಾರವಾಗಿತ್ತು. ನನ್ನ ಹುಟ್ಟುಹಬ್ಬದ ದಿನದಂದೇ ಇನ್ನು ಕೆಲವೇ ದಿನದಲ್ಲಿ ನಾನು ರಾಜೀನಾಮೆ ನೀಡಲಿದ್ದೇನೆ ಎಂದು ತಿಳಿಸಿದ್ದೆ. ಆ ಪ್ರಕಾರ ತ್ಯಾಗಪತ್ರ ನೀಡಿದ್ದೇನೆ' ಎಂದು ತಿಳಿಸಿದರು.

ಆದರೆ, ಕರ್ನಾಟಕ ಕೋಟಾದಲ್ಲಿ ದಲಿತರೊಬ್ಬರಿಗೆ (ರಮೇಶ ಜಿಗಜಿಣಗಿ) ಸಚಿವ ಹುದ್ದೆ ನೀಡಬೇಕಿದ್ದ ಹಿನ್ನೆಲೆಯಲ್ಲೂ ತಮ್ಮ ಮಂತ್ರಿ ಗಿರಿಗೆ ಕೊಂಚ ಭಂಗ ಬಂದಿರಬಹುದು ಎಂದವರು   ಹೇಳಿದರು.

ಪಕ್ಷದ ಜವಾಬ್ದಾರಿಯೇನಾದರೂ ತಮಗೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ "ನನಗೆ ಯಾವುದೇ ಮಾಹಿತಿ ಇಲ್ಲ' ಎಂದವರು ಉತ್ತರಿಸಿದರು.

No comments:

Post a Comment