Saturday 9 July 2016

ಭಾರತಕ್ಕೆ ಪ್ರಶಸ್ತಿ

ಬೆಂಗಳೂರು: ಬಾಂಗ್ಲಾದೇಶ ತಂಡವನ್ನು ಸುಲಭವಾಗಿ ಮಣಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಭಾರತ ತಂಡ ಸಾಬಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.ಜೊತೆಗೆ ಇದೇ ವರ್ಷದ ಸೆಪ್ಟೆಂಬರ್‌ 9ರಿಂದ 18ರ ವರೆಗೆ ಇರಾನ್‌ನ ಟೆಹರಾನ್‌ನಲ್ಲಿ ನಡೆಯಲಿರುವ ಫಿಬಾ ಏಷ್ಯಾ ಚಾಲೆಂಜ್‌ ಟೂರ್ನಿಗೂ ಅರ್ಹತೆ ಪಡೆದುಕೊಂಡಿತು. ಸಾಬಾ ಟೂರ್ನಿಯಲ್ಲಿ ಭಾರತ ಹೋದ ವರ್ಷವೂ ಪ್ರಶಸ್ತಿ ಗೆದ್ದಿತ್ತು.ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಲೀಗ್‌ ಪಂದ್ಯದಲ್ಲಿ ಭಾರತ 95–35
ಪಾಯಿಂಟ್‌ಗಳಿಂದ ಜಯಭೇರಿ ಮೊಳಗಿಸಿತು. ಆತಿಥೇಯ ತಂಡ ಹಿಂದಿನ ಪಂದ್ಯಗಳಲ್ಲಿ ನೇಪಾಳ ಮತ್ತು ಮಾಲ್ಡೀವ್ಸ್ ಎದುರು ಜಯ ಪಡೆದು ಭಾರಿ ವಿಶ್ವಾಸದಲ್ಲಿತ್ತು. ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.

ಆತಿಥೇಯ ತಂಡದ ಈ ಗೆಲುವಿಗೆ ವಿಶೇಷ್‌ ಭೃಗುವಂಶಿ, ಎ. ಅರವಿಂದ್ ಮತ್ತು ಆಮೃತಪಾಲ್‌ ಸಿಂಗ್ ಕಾರಣರಾದರು. ಚೆಂಡಿನ ಮೇಲೆ ಸತತವಾಗಿ ನಿಯಂತ್ರಣ ಸಾಧಿಸಿ, ಎದುರಾಳಿ ಆಟಗಾರರಿಂದ ತಪ್ಪಿಸಿ ಕೊಂಡು ಚುರುಕಾಗಿ ಆಡಿದ ವಿಶೇಷ್‌ ಒಟ್ಟು 16 ಪಾಯಿಂಟ್ಸ್‌ ಕಲೆ ಹಾಕಿದರು. ಅರವಿಂದ್‌ 15 ಮತ್ತು ಅಮೃತಪಾಲ್ 14 ಪಾಯಿಂಟ್‌ ಗಳಿಸಿದರು.

ಮೊದಲ ಕ್ವಾರ್ಟರ್‌ನ ಆಟ ಮುಗಿದಾಗ ಭಾರತ 36–13ರಲ್ಲಿ ಮುನ್ನಡೆ ಹೊಂದಿತ್ತು. ಎರಡನೇ ಕ್ವಾರ್ಟರ್‌ನಲ್ಲಿ 24 ಪಾಯಿಂಟ್ಸ್ ಕಲೆ ಹಾಕಿತು. ಆದ್ದರಿಂದ ಮೊದಲರ್ಧದ ಆಟ ಮುಗಿದಾಗ ತಂಡದ ಖಾತೆಯಲ್ಲಿ ಇದ್ದಿದ್ದು  50 ಪಾಯಿಂಟ್ಸ್‌.

ಆರಂಭದ ಎರಡು ಕ್ವಾರ್ಟರ್‌ಗಳಲ್ಲಿ ಮುನ್ನಡೆ ಗಳಿಸಿದ್ದರಿಂದ ಬಾಂಗ್ಲಾ ತಂಡ ಒತ್ತಡಕ್ಕೆ ಒಳಗಾಯಿತು. ಈ ತಂಡದ ಮಿಥುನ್‌ ಕುಮಾರ್ ಎಂಟು ಪಾಯಿಂಟ್ಸ್ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದ ಆಟಗಾರರಿಗೆ ಚುರುಕಿನ ಹೋರಾಟ ಕಂಡು ಬರಲಿಲ್ಲ. ಕಠಿಣ ಪೈಪೋಟಿ ಕಂಡು ಬಂದ ದಿನದ ಇನ್ನೊಂದು ಪಂದ್ಯದಲ್ಲಿ  ನೇಪಾಳ 62–54ರಲ್ಲಿ ಮಾಲ್ಡೀವ್ಸ್‌ ವಿರುದ್ಧ ಜಯ ಸಾಧಿಸಿತು.


No comments:

Post a Comment