Wednesday, 13 July 2016

ಬ್ಯಾಂಕ್‌ ವಹಿವಾಟು ನಡೆಸುವ ಕಿರಾಣಿ ಅಂಗಡಿ


 -ನನಗೆ ತುರ್ತಾಗಿ ಹಣ ಬೇಕಾಗಿದೆ. ಹೆಂಡತಿಯನ್ನು ಹೆರಿಗೆ ಆಸ್ಪತ್ರೆಗೆ ಸೇರಿಸಿದ್ದೇನೆ. ಆಸ್ಪತ್ರೆಯವರು ಹಣ ಕೇಳುತ್ತಿದ್ದಾರೆ. ಹೇಗಾದರೂ ಹಣ ಹೊಂದಿಸಿ’ ಎನ್ನುವ ಮೊಬೈಲ್‌ ಕರೆಯೊಂದು  ಮಧ್ಯರಾತ್ರಿ 12 ಗಂಟೆ ಸುಮಾರಿಗೆ   ಬರುತ್ತಿದ್ದಂತೆ, ‘ಆಯ್ತು, ಚಿಂತಿತರಾಗಬೇಡಿ. ಮೊಬೈಲ್‌, ಆಧಾರ್‌ ಸ್ಕ್ಯಾನರ್‌ (ಬಯೊಮೆಟ್ರಿಕ್ಸ್‌ ಸಾಧನ) ಮತ್ತು  ನಗದು ತೆಗೆದುಕೊಂಡು ಆಸ್ಪತ್ರೆಗೇ
ಬರುವೆ’ ಎಂದು  ಬೆಂಗಳೂರಿನ ಅಲ್‌ಮದೀನಾ ಸ್ಟೋರ್ಸ್‌ ಮಾಲೀಕ ಅಭಯ ನೀಡಿ ಆಸ್ಪತ್ರೆಗೆ ಧಾವಿಸುತ್ತಾರೆ.

– ಇಲ್ಲಿ ಬ್ಯಾಂಕರ್‌ನೆ ಗ್ರಾಹಕನ ಹತ್ತಿರ ಹೋಗಿ ಸೇವೆ ಸಲ್ಲಿಸುತ್ತಾನೆ. ಇದರಿಂದ ಸಂಪ್ರೀತಗೊಳ್ಳುವ ಗ್ರಾಹಕ ತನ್ನ 30 ಜನ ಸ್ನೇಹಿತರನ್ನು ಅಲ್‌ಮದೀನಾ ಸ್ಟೋರ್ಸ್‌ಗೆ ಕಳಿಸಿ ನೋವೊಪೇದ ಚಂದಾದಾರರನ್ನಾಗಿ ಮಾಡುತ್ತಾರೆ.

ಅಶಿಕ್ಷಿತ ರಿಟೇಲ್‌ ವಹಿವಾಟುದಾರನೂ ಈಗ ನೋವೊಪೇ ಆ್ಯಪ್‌ ನೆರನಿಂದ ಬ್ಯಾಂಕರ್‌ ಆಗಿ ಬಿಟ್ಟಿದ್ದಾನೆ. ಆತ ತನಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೇ ತಪ್ಪು ಮಾಡಿ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಎಡವಟ್ಟು ಮಾಡಿದರೆ,  ಆತನಿಗೆ ಬೆಂಗಳೂರಿನ ಕಚೇರಿಯಿಂದಲೇ  ಫೋನ್‌ ಕರೆ ಬರುತ್ತದೆ. ಆತನ ತಪ್ಪನ್ನು ಮನವರಿಕೆ ಮಾಡಿಕೊಟ್ಟು ಸಮರ್ಪಕವಾಗಿ ವಹಿವಾಟು ನಡೆಸಿ ಗ್ರಾಹಕರ ಅಗತ್ಯಕ್ಕೆ ಸ್ಪಂದಿಸಲು ಮಾರ್ಗದರ್ಶನ ನೀಡಲಾಗುತ್ತಿದೆ.

ವಹಿವಾಟಿನ ಮೇಲೆ ನಿಗಾ ಇಟ್ಟಿರುವ ಸ್ವಯಂ ನಿರ್ವಹಣಾ ಕಂಪ್ಯೂಟರ್‌ ವ್ಯವಸ್ಥೆಯು ಬ್ಯಾಂಕರ್‌ (ಕಿರಾಣಿ ಅಂಗಡಿ ಮಾಲೀಕ) ಎಸಗುವ ತಪ್ಪನ್ನು ಗುರುತಿಸಿ, ಅದನ್ನು ತಕ್ಷಣ ಸಂಬಂಧಿಸಿದ ಸಿಬ್ಬಂದಿಯ ಗಮನಕ್ಕೆ  ತರುತ್ತದೆ. ತಂತ್ರಜ್ಞರು ಬ್ಯಾಂಕರ್‌ಗೆ ಕರೆ ಮಾಡಿ, ‘ನಿಮ್ಮಿಂದ ಇಂತಿಂತಹ ತಪ್ಪುಗಳಾಗಿವೆ. ಅವುಗಳನ್ನು ಪುನರಾವರ್ತಿಸಬೇಡಿ. ತಪ್ಪನ್ನು ಸರಿಪಡಿಸಿಕೊಂಡು ಗ್ರಾಹಕರಿಗೆ ಸರಿಯಾದ ಸೇವೆ ಸಲ್ಲಿಸಿ’ ಎಂದು ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

ನೋವೊಪೇ ಕಚೇರಿಗೆ ಭೇಟಿಕೊಟ್ಟು ಸಿಇಒ ಶ್ರೀಕಾಂತ್‌ ನಾಧಮುನಿ ಅವರನ್ನು ಸಂದರ್ಶಿಸುತ್ತಿದ್ದ ಸಂದರ್ಭದಲ್ಲಿ, ಇಂತಹದೊಂದು  ಕಿರಾಣಿ ಅಂಗಡಿ  ಅಂದು ಬೆಳಗಿನ 6.30ಕ್ಕೇನೆ ಗ್ರಾಹಕರೊಬ್ಬರಿಗೆ ಬ್ಯಾಂಕಿಂಗ್‌ ಸೇವೆ ಸಲ್ಲಿಸಿದ್ದು ದಾಖಲಾಗಿತ್ತು. ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೆ ಕಾರ್ಯನಿರ್ವಹಿಸುವುದೂ ಇವುಗಳ ವೈಶಿಷ್ಟ್ಯಗಳಾಗಿವೆ. 

‘100  ಕೋಟಿ ಜನರ ಬ್ಯಾಂಕ್‌ ಖಾತೆಗಳನ್ನು ಕೇವಲ  100 ಮಂದಿ ತಂತ್ರಜ್ಞರು ನಿರ್ವಹಿಸಲು ಸಾಧ್ಯವೇ’ ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ್‌ ನಿಲೇಕಣಿ ಅವರು ಕೇಳಿದ್ದ ಪ್ರಶ್ನೆಯನ್ನು, ಆಧಾರ್‌ದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಶ್ರೀಕಾಂತ್‌ ನಾಧಮುನಿ ಅವರು ಸವಾಲಾಗಿ ಸ್ವೀಕರಿಸಿದ್ದರು.  ತಮ್ಮ ಕೆಲ ಸಮಾನಮನಸ್ಕ ಸ್ನೇಹಿತರ ಜತೆ ಸೇರಿಕೊಂಡು ನೋವೊಪೇ ಸ್ಟಾರ್ಟ್‌ಅಪ್‌ ಮೂಲಕ ಅದನ್ನು ನನಸಾಗಿಸಲು  ಪ್ರಯತ್ನಿಸಿ ಸಫಲರಾಗಿದ್ದಾರೆ.

ಮೊಬೈಲ್‌, ಆಧಾರ್‌ ಮತ್ತು ತಂತ್ರಜ್ಞಾನ ನೆರವಿನಿಂದ ಹಳ್ಳಿಗಾಡಿನ ಮೂಲೆ ಮೂಲೆಯಲ್ಲಿಯೂ ಬ್ಯಾಂಕಿಂಗ್‌ ವಹಿವಾಟನ್ನು ಸುಲಭವಾಗಿ  ತಲುಪಿಸುವ ಹಣಕಾಸು ಸೇವೆ ಸಲ್ಲಿಸುವ  ನೋವೋಪೇ ಸ್ಟಾರ್ಟ್‌ಅಪ್‌ 2014ರಲ್ಲಿ ಕಾರ್ಯಾರಂಭ ಮಾಡಿದೆ. ಅಲ್ಪಾವಧಿಯಲ್ಲಿಯೇ ಅಸಂಖ್ಯ ಗ್ರಾಹಕರ ಮನ ಗೆದ್ದಿದೆ.  ಮೈಸೂರಿನವರಾದ ಶ್ರೀಕಾಂತ್‌ ನಾಧಮುನಿ ಅವರು ಗೌತಮ್‌ ಬಂದೋಪಾಧ್ಯಾಯ ಮತ್ತು ಶ್ರೀಧರ್‌ ರಾವ್‌ ಅವರ ನೆರವಿನಿಂದ ಈ ಸ್ಟಾರ್ಟ್‌ಅಪ್‌ ಅಭಿವೃದ್ಧಿಪಡಿಸಿದ್ದಾರೆ.

ಈ ಸ್ಟಾರ್ಟ್‌ಅಪ್‌ನ ಕಾರ್ಯನಿರ್ವಹಣೆ ತುಂಬ ಸರಳ.  ಇಲ್ಲಿ, ಆಧಾರ್‌ ಆಧಾರಿತ ವಿಶಿಷ್ಟ ಗುರುತು ಸಂಖ್ಯೆಯ ದತ್ತಾಂತವನ್ನು ವ್ಯಕ್ತಿಯ ದೃಢೀಕರಣಕ್ಕೆ ಬಳಸಲಾಗುತ್ತಿದೆ. ಕಿರಾಣಿ ಅಂಗಡಿಗಳಿಗೆ ಬೆರಳ ಗುರುತು ಸ್ಕ್ಯಾನರ್‌ ಸಾಧನವನ್ನು ಒದಗಿಸಲಾಗಿರುತ್ತದೆ. ಸ್ಕ್ಯಾನರ್‌, ಮೊಬೈಲ್‌, 2ಜಿ ತಂತ್ರಜ್ಞಾನ ಬಳಸಿ ಗ್ರಾಮೀಣ ಪ್ರದೇಶ
ಗಳಲ್ಲೂ ಹಣ ಠೇವಣಿ ಮತ್ತು ವರ್ಗಾವಣೆಯನ್ನು  ಅತ್ಯಂತ ತ್ವರಿತವಾಗಿ ನಡೆ ಸಲಾಗುತ್ತಿದೆ.

ವಲಸೆ ಕಾರ್ಮಿಕರು ದೂರದ ಕುಗ್ರಾಮದಲ್ಲಿನ ತಮ್ಮ ಕುಟುಂಬದ ಸದಸ್ಯರಿಗೆ ಹಣವನ್ನು ಅತ್ಯಂತ ಸುಲಭವಾಗಿ ತಲುಪಿಸಲೂ ಇದರಿಂದ ಸಾಧ್ಯವಾಗಿದೆ. ಕುಟುಂಬದ ಸದಸ್ಯರ ಯಾವುದೇ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ಇಲ್ಲವೇ ನಗದು ರೂಪದಲ್ಲಿ ಕಿರಾಣಿ ಅಂಗಡಿಯಲ್ಲಿಯೇ ಹಣ ಪಡೆಯುವ ಸೌಲಭ್ಯವೂ ಇದರಲ್ಲಿ ಇದೆ. ಎಸ್‌ಎಂಎಸ್‌ ಆಧಾರಿತ ದೃಢೀಕರಣ ಮೂಲಕ ತಮಗೆ ಬಂದ ಹಣವನ್ನು ಸುಲಭವಾಗಿ ಹಣ ಪಡೆದುಕೊಳ್ಳಬಹುದು.

ದೇಶದಾದ್ಯಂತ ಇಂತಹ 45 ಸಾವಿರ ಕಿರಾಣಿ ಅಂಗಡಿಗಳು ಈಗ ಬ್ಯಾಂಕಿಂಗ್‌ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಮಾರ್ಟ್‌ಫೋನ್‌, ಮೊಬೈಲ್‌ ವಾಲೆಟ್‌ ಮೂಲಕ ನಾಗರಿಕ ಸೇವೆಗಳ ಶುಲ್ಕ ಪಾವತಿ, ಖಾತೆಯಿಂದ ಖಾತೆಗೆ ಹಣ ವರ್ಗಾವಣೆ, ಮೊಬೈಲ್‌, ವಿದ್ಯುತ್‌ ಶುಲ್ಕ ಪಾವತಿ, ಡಿಟಿಎಚ್‌ ರೀಚಾರ್ಜ್‌ನಂತಹ ಸೇವೆಗಳನ್ನು ಬಳಸುವ ಸುಶಿಕ್ಷಿತರಂತೆ, ಓದುಬರಹ ಗೊತ್ತಿಲ್ಲದವರೂ, ಈ ನೋವೊಪೇ ಸೌಲಭ್ಯ ಒದಗಿಸುವ ಕಿರಾಣಿ ಅಂಗಡಿಗಳ ಮೂಲಕ ಸುಲಭವಾಗಿ ವ್ಯವಹರಿಸುವ ಸೌಲಭ್ಯ ಇದಾಗಿದೆ.

ಆ್ಯಪ್‌ ಮೂಲಕ ಸೇವೆ ಒದಗಿಸಲು ಸಂಸ್ಥೆಯು ಆರ್‌ಬಿಎಲ್‌, ಎಕ್ಸಿಸ್‌ ಬ್ಯಾಂಕ್‌, ಐಡಿಎಫ್‌ಸಿ ಮತ್ತು ಬ್ಯಾಂಕ್‌ ಆಫ್‌ ಇಂಡಿಯಾ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಪಾಲು
ದಾರ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯನ್ನೂ ಕಿರಾಣಿ ಅಂಗಡಿ ಮೂಲಕವೇ ತೆರೆಯಬಹುದು. ಹಣಕಾಸು ವ್ಯವಹಾರ, ಕನಿಷ್ಠ ₹ 10ಗಳ ಮೊಬೈಲ್‌ ರೀಚಾರ್ಜ್‌ಗೂ ಬರುವವರು ಸರಕುಗಳನ್ನು ಖರೀದಿಸುವುದರಿಂದಲೂ ಅವರ ವ್ಯಾಪಾರವೂ ಹೆಚ್ಚುತ್ತಿದೆ.

ಎರಡೂವರೆ ವರ್ಷಗಳಲ್ಲಿ ನೋವೊಪೇ, 20 ರಾಜ್ಯಗಳಲ್ಲಿ ಅಸಂಖ್ಯ ಜನರಿಗೆ ಬ್ಯಾಂಕಿಂಗ್‌ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿದೆ. ನಗರ ಪ್ರದೇಶಗಳಲ್ಲಿ ಇದರ ಪ್ರಭಾವ ಅಷ್ಟೇನೂ ಕಂಡುಬಂದಿರಲಿಕ್ಕಿಲ್ಲ. ಆದರೆ ನಗರದ ಹೊರ ವಲಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದರ ಕಾರ್ಯವ್ಯಾಪ್ತಿ ವ್ಯಾಪಕವಾಗಿ ಪಸರಿಸುತ್ತಿದೆ. ‘ಆಧಾರ್‌’ ಅಭಿವೃದ್ಧಿಪಡಿಸುವ ಹಂತದಲ್ಲಿಯೇ ಆರ್ಥಿಕ ಸೇರ್ಪಡೆ ಅಂದರೆ, ಎಲ್ಲರಿಗೂ ಬ್ಯಾಂಕಿಂಗ್‌  ಸೇವೆಯನ್ನು ಅತ್ಯಂತ ಸುಲಭವಾಗಿ ಮತ್ತು  ಅಗ್ಗದ ದರದಲ್ಲಿ  ಒದಗಿಸುವ ಪರಿಕಲ್ಪನೆ  ಮೂರ್ತ ರೂಪ ಪಡೆದಿತ್ತು. ‘ಆಧಾರ್‌’ ಕಾರ್ಯ ಪೂರ್ಣಗೊಂಡು ಅದನ್ನು  ಬೇರೆ ಸಂಸ್ಥೆಗೆ ಹಸ್ತಾಂತರ ಮಾಡಿದ ನಂತರ, ನೋವೊಪೇ ಅಭಿವೃದ್ಧಿಪಡಿಸುವ ಬಗ್ಗೆ ಗಮನ ಕೇಂದ್ರೀಕರಿಸಲಾಗಿತ್ತು’ ಎಂದು ಶ್ರೀಕಾಂತ್‌  ಹೇಳುತ್ತಾರೆ.

‘ದೇಶದ ಜನಸಂಖ್ಯೆಯಲ್ಲಿ ಬ್ಯಾಂಕಿಂಗ್‌ ಸೌಲಭ್ಯ ವಂಚಿತರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇದೆ. ಜನಧನ ಯೋಜನೆಯಡಿ ಲಕ್ಷಾಂತರ ಜನರು ಹೊಸದಾಗಿ ಬ್ಯಾಂಕ್‌ ಖಾತೆ ಹೊಂದಿದರೂ, ಅದರ ಬಳಕೆ ಮಾತ್ರ ನಿರೀಕ್ಷಿಸಿದ ಪ್ರಮಾಣದಲ್ಲಿ ಇಲ್ಲ. ಅಂದರೆ ದೇಶದಲ್ಲಿ ಬ್ಯಾಂಕ್‌ ಖಾತೆ ಇಲ್ಲದವರು ಮತ್ತು ಬ್ಯಾಂಕ್‌ ಖಾತೆ ಹೊಂದಿದ್ದರೂ ಅದರ ಪ್ರಯೋಜನ ಪಡೆದುಕೊಳ್ಳದವರ ಸಂಖ್ಯೆ ಈಗಲೂ ಗಮನಾರ್ಹವಾಗಿಯೇ ಇದೆ.  ಜೀವನ ನಿರ್ವಹಣೆಗೆ ದಿನಗೂಲಿಯನ್ನೇ ಹೆಚ್ಚಾಗಿ ಅವಲಂಬಿಸಿದವರು ಹಣ ಪಡೆಯಲು,  ಠೇವಣಿ ಇಡಲು  ಬ್ಯಾಂಕಿಗೆ ತೆರಳಿದರೆ ಅಂದಿನ ಆದಾಯದಲ್ಲಿ ಖೋತಾ ಬಿದ್ದಂತೆಯೇ ಸರಿ.

ಹಣಕಾಸು ಸೇರ್ಪಡೆ  ಯೋಜನೆಯಲ್ಲಿ ಇಂತಹ ಸಾಕಷ್ಟು ಸಮಸ್ಯೆಗಳು ಇರುವುದು ಶ್ರೀಕಾಂತ್‌ ಅವರ  ಅನುಭವಕ್ಕೆ ಬಂದಿತ್ತು. ಅಂತಹ ಸಮಸ್ಯೆಗಳನ್ನು ಗುರುತಿಸಿ, ತಂತ್ರಜ್ಞಾನ ನೆರವಿನಿಂದ ಅವರ ಹಣಕಾಸಿನ ವಹಿವಾಟನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಫಲರಾಗಿದ್ದಾರೆ. ದೇಶದಲ್ಲಿ ವರ್ಷಕ್ಕೆ  ಅಂದಾಜು ₹ 40 ಲಕ್ಷ ಕೋಟಿಗಳ ರಿಟೇಲ್‌ ವಹಿವಾಟು ನಡೆಯುತ್ತಿದೆ. ಈಗ ಇದರಲ್ಲಿ ಬಹುಭಾಗವು ಆನ್‌ಲೈನ್‌ಗೆ ವರ್ಗಾವಣೆಗೊಂಡಾಗ ವಹಿವಾಟು ತ್ವರಿತವಾಗಿ ನಡೆಯುತ್ತಿದೆ.

ನಗದುರಹಿತ ಆರ್ಥಿಕತೆಯ ಯಶಸ್ಸಿಗೆ ...
1. ಮೊಬೈಲ್‌ ಸಂಪರ್ಕ ಜಾಲ, ಸ್ಮಾರ್ಟ್‌ಫೋನ್‌. 

2. ವ್ಯಕ್ತಿಯ ಗುರುತನ್ನು ದೃಢಿಕರಿಸಲು ನೆರವಾಗುವ ಆಧಾರ್‌   ಮತ್ತು ಮೂರನೇಯದು  ಮರ್ಚಂಟ್‌ ಪೇಮೆಂಟ್ಸ್‌ (ವ್ಯಾಪಾರಿಗಳ  ಹಣ ಪಾವತಿ) ಈ ಸ್ಟಾರ್ಟ್‌ಅಪ್‌ನ ಪ್ರಮುಖ ಆಧಾರಸ್ತಂಭಗಳಾಗಿವೆ.

 ಸ್ನೇಹಿತರು, ಕುಟುಂಬದ ಸದಸ್ಯರ ಖಾತೆಗಳಿಗೆ ನಗದನ್ನು   ನೇರವಾಗಿ ವರ್ಗಾಯಿಸಬಹುದು. ಡಿಟಿಎಚ್‌ ಸೇವೆಗಳ ಶುಲ್ಕ ಪಾವತಿಗೆ ಒಂದು ಬಾರಿ ಮಾಹಿತಿ ಭರ್ತಿ ಮಾಡಿದ್ದರೆ ಪ್ರತಿಬಾರಿ ಶುಲ್ಕ ಪಾವತಿಯು ಚಿಟಿಕೆ ಹೊಡೆದಷ್ಟು ಸುಲಭವಾಗಿರುತ್ತದೆ ಎಂದು ಶ್ರೀಕಾಂತ್‌ ಹೇಳುತ್ತಾರೆ.

ಮೊಬೈಲ್ ಸಂಪರ್ಕದಲ್ಲಿ ಇರುವವರಿಗೆಲ್ಲ ಖಾತೆಗೂ ಹಣ ರವಾನಿಸುವ ಸುಲಭ ಸೌಲಭ್ಯ ಇಲ್ಲಿದೆ. ಆ್ಯಪ್‌ನಲ್ಲಿ ಫಲಾನುಭವಿಗಳ ವಿವರಗಳು ಇಲ್ಲದಿದ್ದರೂ ಅವರಿಗೆ ಹಣ ಕಳಿಸಿದಾಗ, ಎಸ್‌ಎಂಎಸ್‌ ಮೂಲಕ ಅವರಿಗೆ ಸಂದೇಶ ರವಾನೆಯಾಗುತ್ತದೆ. ‘ಇಂತಹವರು ನಿಮಗೆ ಹಣ ರವಾನಿಸುತ್ತಿದ್ದಾರೆ. ಅಗತ್ಯ ಮಾಹಿತಿ  ನೀಡಿ’ ಎನ್ನುವ ಸಂದೇಶ ಮೊಬೈಲ್‌, ಇ–ಮೇಲ್‌, ಸಾಮಾಜಿಕ ಜಾಲ ತಾಣಗಳಾದ   ಫೇಸ್‌ಬುಕ್‌, ಟ್ವಿಟರ್‌ ಮೂಲಕವೂ ಫಲಾನುಭವಿಗಳನ್ನು ತಲುಪುವ ವ್ಯವಸ್ಥೆ  ಇಲ್ಲಿದೆ. ಹಣ ಬರುತ್ತದೆ ಎಂದರೆ ಎಲ್ಲರೂ ಉತ್ಸಾಹದಿಂದಲೇ ಅಗತ್ಯವಾದ ಮಾಹಿತಿ  ನೀಡುತ್ತಾರೆ.

ಸದ್ಯಕ್ಕೆ ಆಯ್ದ ಕಿರಾಣಿ ಅಂಗಡಿಗಳಲ್ಲಿ  ಖರೀದಿಸುವ ಸರಕುಗಳಿಗೆ ಈ ಆ್ಯಪ್‌ ನೆರವಿನಿಂದಲೇ ಹಣ ಪಾವತಿಸಬಹುದು. ಹಣ ವರ್ಗಾವಣೆ, ನಗದು ನಿರ್ವಹಣೆ, ಸೇವಾ ಶುಲ್ಕ ಪಾವತಿ ಮತ್ತಿತರ ವ್ಯವಹಾರಗಳಿಗೆ ಅತಿ ಕಡಿಮೆ ಪ್ರಮಾಣದ ಸೇವಾ ಶುಲ್ಕ ಇಲ್ಲಿರುವುದರಿಂದ ಈ ಡಿಜಿಟಲ್‌ ಸೇವಾ ಸೌಲಭ್ಯ ಹೆಚ್ಚು ಜನಪ್ರಿಯವಾಗುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನ (financial technology) ಆಧರಿಸಿ ಶಾಖೆ ರಹಿತ, ಖಾತೆರಹಿತ, ನಗದುರಹಿತ ಬ್ಯಾಂಕಿಂಗ್‌ ಸೇವೆ ಅಭಿವೃದ್ಧಿಪಡಿಸಿರುವುದು ಇದರ ವಿಶೇಷತೆ
ಯಾಗಿದೆ. ಪೇಟಿಎಂ, ಮೊಬಿವಿಕ್‌ ಮತ್ತಿತರ ಮೊಬೈಲ್‌ ವಾಲೆಟ್‌ಗಳು  ಸ್ಮಾರ್ಟ್‌ಫೋನ್‌ ಇದ್ದವರಿಗೆ ಅನುಕೂಲತೆ ಕಲ್ಪಿಸಿದ್ದರೆ, ನೋವೊಪೇ ಅಶಿಕ್ಷಿತರೂ ಇಂತಹ ಡಿಜಿಟಲ್‌ ವಾಲೆಟ್‌ ಸೌಲಭ್ಯವನ್ನು  ಸುಲಭವಾಗಿ ಬಳಸಿಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಿದೆ. ನೋವೊಪೇ ಮತ್ತು ಸ್ಯಾಮ್ಸಂಗ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಟ್ಯಾಬ್ಲೆಟ್‌ ಹಿಂದೆ ಅಳವಡಿಸಿರುವ ಕ್ಯಾಮೆರಾ ಮೂಲಕ ಕಣ್ಣು ಪರೀಕ್ಷಿಸಿ  ಆಧಾರ್‌ ಸರ್ವರ್‌ ಜತೆ ಸಂಪರ್ಕ ಸಾಧಿಸಿ ವ್ಯಕ್ತಿಯ ಗುರುತನ್ನು ಕ್ಷಣಾರ್ಧದಲ್ಲಿ ದೃಢಪಡಿಸುತ್ತದೆ.

ರಿಟೇಲರ್‌ ಆ್ಯಪ್‌ ಬಳಸುವವರು, ಬಯೊಮೆಟ್ರಿಕ್ಸ್‌ ಸ್ಕ್ಯಾನರ್‌ಗೆ ₹ 15 ಸಾವಿರದವರೆಗೆ ವೆಚ್ಚ ಮಾಡಬೇಕಾಗುತ್ತದೆ. ಆರು ತಿಂಗಳಿನಿಂದ  ಒಂದು ವರ್ಷದಲ್ಲಿ ಈ ಹಣ ಮರಳಿ ಬರಲಿದೆ.

ಈ ಸೇವೆಗಳಿಗೆ ಈಗ ಜೀವ ವಿಮೆ ಸಾಲ, ಸೇರಿದಂತೆ ಹಲವಾರು ಹೊಸ ಹಣಕಾಸು  ಸೇವೆ ಸೇರ್ಪಡೆ ಮಾಡಲು ಅನೇಕ ಸಂಸ್ಥೆಗಳು ಮುಂದೆ ಬಂದಿವೆ.

ಶ್ರೀಕಾಂತ್‌ ನಾಧಮುನಿ
ಮೈಸೂರಿನ ಶ್ರೀಕಾಂತ್‌ ನಾಧಮುನಿ  ಅವರು ಅಮೆರಿಕದ ಸಿಲಿಕಾನ್‌ಸಿಟಿಯಲ್ಲಿ  ಇಂಟೆಲ್‌, ಸನ್‌ ಸಂಸ್ಥೆಗಳಲ್ಲಿ ಚಿಪ್‌ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ 16 ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.  ನಂದನ್‌ ನಿಲೇಕಣಿ ಅವರ ಜತೆ ಸೇರಿ ಆಧಾರ್‌ ಯೋಜನೆಯಲ್ಲಿ ತಂತ್ರಜ್ಞಾನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಈಗ ನೋವೊಪೇದ ಸಿಇಒ ಆಗಿ ಕಾರ್ಯನಿರ್ವಹಿಸುತ್ತ ಅದರ ವಹಿವಾಟನ್ನು ವಿಸ್ತರಿಸುವ ಹೊಣೆಗಾರಿಕೆ   ನಿಭಾಯಿಸುತ್ತಿದ್ದಾರೆ.

ಪರದೆ ಮೇಲೆ ವಹಿವಾಟಿನ ಸಮಗ್ರ ಚಿತ್ರಣ
ಸಾಫ್ಟ್‌ವೇರ್ ದೈತ್ಯ ಸಂಸ್ಥೆಗಳು ತಮ್ಮ ವಹಿವಾಟಿನ ಅಗಾಧ ಪ್ರಮಾಣದ ಕ್ಷಣ ಕ್ಷಣದ ಮಾಹಿತಿ ಪಡೆಯಲು (ದತ್ತಾಂಶ)  ಮತ್ತು ವಹಿವಾಟಿನ ಸ್ವರೂಪದ ಮೇಲೆ ನಿಗಾವಹಿಸಲು ಅಗತ್ಯವಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿರುತ್ತವೆ. ಈ ಮಾಹಿತಿ ಸಂಗ್ರಹ ಮತ್ತು ಅದರ ವಿಶ್ಲೇಷಣೆಯನ್ನು ವಹಿವಾಟು ವಿಸ್ತರಣೆಗೆ ಸಮರ್ಪಕವಾಗಿ ಬಳಸಿಕೊಳ್ಳುತ್ತವೆ. ಇಂತಹ ವಿಶಿಷ್ಟ ಸೌಲಭ್ಯವನ್ನು (network operations center –NOC) ನೋವೊಪೇ ಸ್ಟಾರ್ಟ್‌ಅಪ್‌ ಕೂಡ ಅಭಿವೃದ್ಧಿಪಡಿಸಿರುವುದು ಇದರ ಹೆಚ್ಚುಗಾರಿಕೆಯಾಗಿದೆ.

ಬೃಹತ್‌ ಪರದೆ ಮೇಲೆ ರಿಟೇಲ್‌ ವರ್ತಕರ ವಹಿವಾಟಿನ ಕ್ಷಣ ಕ್ಷಣದ ಮಾಹಿತಿ ಡಿಜಿಟಲ್‌ ರೂಪದಲ್ಲಿ ದೊರೆಯುವ ವ್ಯವಸ್ಥೆ ಇಲ್ಲಿದೆ. ಒಟ್ಟಾರೆ ವಹಿವಾಟಿನ ಸಮಗ್ರ ಮಾಹಿತಿಯ ಚಿತ್ರಣ ಇಲ್ಲಿ ದೊರೆಯುತ್ತದೆ.


No comments:

Post a Comment