Saturday 9 July 2016

ಝಕೀರ್ ವಿರುದ್ಧ ಕ್ರಮ: ಪೀಸ್‌ ಟಿ.ವಿ ಪ್ರಸಾರ ಸ್ಥಗಿತ?

ನವದೆಹಲಿ : ಅನಧಿಕೃತ ವಾಹಿನಿಗಳ ಪ್ರಸಾರ ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಇಂತಹ ವಾಹಿನಿಗಳನ್ನು ಕೇಬಲ್‌ ಮೂಲಕ ಪ್ರಸಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಬಲ್‌ ಆಪರೇಟರ್‌ಗಳಿಗೆ ಎಚ್ಚರಿಕೆ ನೀಡಿದೆ.ಧರ್ಮ ಪ್ರಚಾರಕ ಝಕೀರ್‌ ನಾಯ್ಕ್‌ ಅವರು ‘ಪೀಸ್‌ ಟಿ.ವಿ’ಯಲ್ಲಿ ಮಾಡಿರುವ ಭಾಷಣಗಳು ವಿವಾದ ಸೃಷ್ಟಿಸಿರುವ ಕಾರಣ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಪೀಸ್‌ ಟಿ.ವಿಗೆ ಪರವಾನಗಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾರ್ತಾ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಶುಕ್ರವಾರ ಸಭೆ ನಡೆಸಿ, ಪೀಸ್‌ ಟಿ.ವಿ ಸೇರಿದಂತೆ ಇತರ ಪರವಾನಗಿ ರಹಿತ ವಾಹಿನಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಭೆಯ ನಂತರ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್‌, ಪರವಾನಗಿ ಇಲ್ಲದ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ವರದಿಗಳಿವೆ ಎಂದು ತಿಳಿಸಿದ್ದಾರೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪರವಾನಗಿ ನೀಡಿರುವ ವಾಹಿನಿಗಳ ಪ್ರಸಾರಕ್ಕೆ ಮಾತ್ರ ಅವಕಾಶ ಇದೆ. ಇತರ ವಾಹಿನಿಗಳನ್ನು ಕೇಬಲ್‌ ಆಪರೇಟರ್‌ಗಳು ಪ್ರಸಾರ ಮಾಡುವಂತಿಲ್ಲ. ಈ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದ ನಿಗಾ ಸಮಿತಿಗೆ ಸೂಚನೆ ನೀಡಲಾಗುವುದು ಎಂದು ರಾಥೋಡ್  ಹೇಳಿದ್ದಾರೆ.

ಅನಧಿಕೃತ ವಾಹಿನಿಗಳ ಮೇಲೆ ನಿಗಾ ಇರಿಸಲು ಗೃಹ ಸಚಿವಾಲಯ ಸೂಚನೆ ನೀಡಿದೆ. ಅನಧಿಕೃತ ವಾಹಿನಿಗಳ ವಿರುದ್ಧ ಸಾಮಾಜಿಕ ಜಾಲ ತಾಣಗಳ ಮೂಲಕವೂ ದೂರು ನೀಡುವುದಕ್ಕೆ ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

ಝಕೀರ್‌ ನಾಯ್ಕ್‌ ಅವರ ವಿವಾದಾತ್ಮಕ ಭಾಷಣಗಳು ಪ್ರಸಾರವಾಗುವ ಪೀಸ್ ಟಿ.ವಿಗೆ ಪರವಾನಗಿ ಇಲ್ಲ ಎಂದು ಮೂಲಗಳು ತಿಳಿಸಿವೆ.
2008–09ರಲ್ಲಿ ಪರವಾನಗಿಗೆ ಪೀಸ್‌ ಟಿ.ವಿ ಅರ್ಜಿ ಸಲ್ಲಿಸಿತ್ತು. ಆದರೆ ಆಗ ಪರವಾನಗಿ ನಿರಾಕರಿಸಲಾಗಿತ್ತು.

ಆದರೆ ಈ ವಾಹಿನಿ ಈಗಲೂ ಪ್ರಸಾರ ಆಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಾದಾತ್ಮಕ ಇಸ್ಲಾಂ ಧರ್ಮ ಪ್ರಚಾರಕ ಝಕೀರ್‌ ನಾಯ್ಕ್‌ ವಿರುದ್ಧ ಇನ್ನಷ್ಟು ತನಿಖೆಗಳು ನಡೆಯುವುದು ಖಚಿತ ವಾಗಿದೆ. ನಾಯ್ಕ್‌ ಅವರು ಸ್ಥಾಪಿಸಿರುವ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಶನ್‌ (ಐಆರ್‌ಎಫ್‌) ಎಂಬ ಸಂಸ್ಥೆಗೆ ಬರುವ ದೇಣಿಗೆಗಳ ಬಗ್ಗೆ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.

ಐಆರ್‌ಎಫ್‌ ವಿರುದ್ಧ ತನಿಖೆ: ಇತ್ತೀಚೆಗೆ ಢಾಕಾದಲ್ಲಿ ಹತ್ಯಾಕಾಂಡ ನಡೆಸಿದ ಉಗ್ರರು ನಾಯ್ಕ್‌ ಭಾಷಣಗಳಿಂದ ಪ್ರೇರಿತರಾಗಿದ್ದರು ಎಂಬ ವರದಿಗಳ ಕಾರಣದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾಯ್ಕ್‌ ಅವರ ಭಾಷಣಗಳ ಧ್ವನಿ ಮುದ್ರಿಕೆಯ ಸಿ.ಡಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಐಆರ್‌ಎಫ್‌ಗೆ ವಿದೇಶಗಳಿಂದ ಬರುವ ದೇಣಿಗೆಯನ್ನು ರಾಜಕೀಯ ಚಟುವಟಿಕೆಗಳಿಗೆ ಮತ್ತು ಮೂಲಭೂತವಾದಿ ನಿಲುವುಗಳ ಪ್ರತಿಪಾದನೆಗೆ ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಹಾಗಾಗಿ ಐಆರ್‌ಎಫ್‌ ಕಾರ್ಯಕರ್ತರ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿದು ಬಂದಿದೆ.  ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿ ನೋಂದಣಿಯಾಗಿರುವ ಐಆರ್‌ಎಫ್‌ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವಕರನ್ನು ಭಯೋತ್ಪಾದನಾ ಚಟುವಟಿಕೆಯತ್ತ ಆಕರ್ಷಿಸುವುದಕ್ಕೂ ವಿದೇಶಿ ದೇಣಿಗೆ ಬಳಸಿಕೊಳ್ಳಲಾಗಿದೆ ಎಂಬ ಅನುಮಾನವನ್ನು ಆ ಅಧಿಕಾರಿ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಅಂಶಗಳನ್ನು ವಿವರಿಸಿ ಆನ್‌ಲೈನ್‌ ಮೂಲಕ ಗೃಹ ಸಚಿವಾಲಯಕ್ಕೆ ದೂರೊಂದು ಕೂಡ ಸಲ್ಲಿಕೆಯಾಗಿದೆ.

 


No comments:

Post a Comment