Sunday, 17 July 2016

ಅರುಣಾಚಲ ಸಿಎಂ ಆಗಿ ಪೆಮಾ ಖಂಡು ಪ್ರಮಾಣ ವಚನ
ಇಟಾನಗರ: ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಪೆಮಾ ಖಂಡು ಭಾನುವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಪೆಮಾ ಖಂಡು ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಚೌನಾ ಮೇನ್ ಪ್ರಮಾಣ ವಚನ ಸ್ವೀಕರಿಸಿದರು.37 ವರ್ಷದ ಪೆಮಾ ಖಂಡು ದೇಶದ ಅತಿ ಕಿರಿಯ
ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ ರಾಯ್ ಅವರು ಪೆಮಾ ಖಂಡು ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಸುಪ್ರೀಂ ಕೋರ್ಟ್ ಅರುಣಾಲ ಪ್ರದೇಶದಲ್ಲಿ ನಬಮ್ ತುಕಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮರುಸ್ಥಾಪಿಸಿ ಆದೇಶಿಸಿತ್ತು. ಆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ನಬಮ್ ತುಕಿ ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಬೇಕಿತ್ತು. ಆದರೆ ವಿಶ್ವಾಸಮತ ಯಾಚನೆಗೂ ಕೆಲ ಗಂಟೆಗಳ ಮುನ್ನ ನಡೆದ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಪೆಮಾ ಖಂಡು ಅವರನ್ನು ಆಯ್ಕೆ ಮಾಡಲಾಗಿತ್ತು. ಪೆಮಾ ಖಂಡು ಆ ನಂತರ 45 ಶಾಸಕರ ಬಲದೊಂದಿಗೆ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

ಕಾಂಗ್ರೆಸ್​ನ ಪದಚ್ಯುತ ಸಿಎಂ ಖಲಿಕೋ ಪೌಲ್ 30 ಭಿನ್ನಮತೀಯ ಶಾಸಕರೊಂದಿಗೆ ಪೆಮಾ ಖಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ. 60 ಸದಸ್ಯ ಬಲದ ಅರುಣಾಲ ವಿಧಾನ ಸಭೆಯಲ್ಲಿ ಪ್ರಸ್ತುತ 58 ಶಾಸಕರಿದ್ದು, ಕಾಂಗ್ರೆಸ್ ಪಕ್ಷಕ್ಕೆ ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 47 ಶಾಸಕರ ಬೆಂಬಲ ಇರುವುದಾಗಿ ತಿಳಿಸಲಾಗಿದೆ.

No comments:

Post a Comment