Saturday 9 July 2016

ಏಕರೂಪ ನಾಗರಿಕ ಸಂಹಿತೆ, ಸುಪ್ರೀಂಕೋರ್ಟ್ ಮಧ್ಯ ಪ್ರವೇಶವಿಲ್ಲ


ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದು ಸಂಸತ್​ಗೆ ಬಿಟ್ಟ ವಿಚಾರವಾಗಿದ್ದು, ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ.


ಸಂಸತ್ ನಿರ್ಧಾರ ತೆಗೆದುಕೊಳ್ಳಲಿ ಎಂದ ನ್ಯಾಯಾಲಯ

ಪ್ರಕರಣ ಏನು?: ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ವೈಯಕ್ತಿಕ ಕಾನೂನಿನಿಂದ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅನ್ಯಾಯವಾಗುತ್ತದೆ. ಏಕರೂಪ ನಾಗರಿಕ ಸಂಹಿತೆಯಿಂದ ಧರ್ಮ, ಜಾತಿ, ವರ್ಣ ಆಧಾರಿತ ತಾರತಮ್ಯ ನಿವಾರಣೆಯಾಗುತ್ತದೆ ಎಂದು ಹಿರಿಯ ವಕೀಲ ಗೋಪಾಲ ಸುಬ್ರಮಣಿ ಯಮ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ಅನ್ಯಾಯಕ್ಕೆ ಒಳಗಾಗಿರುವ ಯಾವ ಮಹಿಳೆಯೂ ವೈಯಕ್ತಿಕ ಕಾನೂನು ವಿರುದ್ಧ ದೂರು ನೀಡಿಲ್ಲ. ಸಂತ್ರಸ್ತ ಮಹಿಳೆಯರು ದೂರು ನೀಡಿದಲ್ಲಿ ಪರಿಶೀಲಿಸಲಾಗುವುದು. ಆದರೆ ಕಾನೂನು ವ್ಯಾಪ್ತಿಗೆ ಹೊರತಾದ ವಿಷಯಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾ. ಠಾಕೂರ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಏನಿದು ಸಂಹಿತೆ?

ಸಂವಿಧಾನದ ಪರಿಚ್ಛೇದ 44ರ ಪ್ರಕಾರ, ಎಲ್ಲ ರಾಜ್ಯಗಳಲ್ಲೂ ಸಮಾನ ನಾಗರಿಕ ಸಂಹಿತೆಯ ಮೂಲಕ ಪ್ರಜೆಗಳ ರಕ್ಷಣೆ ಮಾಡುವುದು ಆಯಾ ಸರ್ಕಾರಗಳ ಹೊಣೆ. ಸಮಾನ ನಾಗರಿಕ ಸಂಹಿತೆ ಪ್ರಕಾರ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳು, ವಿವಾಹ, ವಿಚ್ಛೇದನ, ದತ್ತು, ಕುಟುಂಬ ನಿರ್ವಹಣೆ ಮತ್ತಿತರ ಅಂಶಗಳಿಗೆ ಸಮಾನ ಮಾನದಂಡ ಅನುಸರಿಸಬೇಕು. ಪರಿಚ್ಛೇದ 37ರ ಪ್ರಕಾರ, ಈ ವಿಚಾರಗಳನ್ನು ಯಾವುದೇ ಕೋರ್ಟ್ ಅನುಷ್ಠಾನಕ್ಕೆ ತರಲಾಗದು. ಆದರೆ ಸರ್ಕಾರಕ್ಕೆ ನಿರ್ದೇಶನ ಹಾಗೂ ಸಲಹೆಗಳನ್ನು ನೀಡಬಹುದು. ಭಾರತದಲ್ಲಿ ವಿವಿಧ ಧರ್ಮ ಹಾಗೂ ಸಮುದಾಯಗಳ ವೈಯಕ್ತಿಕ ಕಾನೂನುಗಳು ಜಾರಿಯಲ್ಲಿದ್ದು, ಅವುಗಳ ಪ್ರಕಾರವೇ ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ದತ್ತು ಸ್ವೀಕಾರ, ನಿರ್ವಹಣೆ ಮತ್ತಿತರ ಕಾರ್ಯಗಳು ನಡೆಯುತ್ತಿವೆ. ಇವುಗಳಲ್ಲಿ ಅನುಸರಿಸುತ್ತಿರುವ ಮಾನದಂಡವೂ ವಿಭಿನ್ನವಾಗಿದ್ದು, ಯಾವ ವಿಷಯದಲ್ಲೂ ಏಕರೂಪತೆ ಇಲ್ಲ. ಸಂವಿಧಾನದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಆದರೆ ಕಾನೂನು ಜಾರಿ ವಿಚಾರದಲ್ಲಿ ತಾರತಮ್ಯ ಕಂಡುಬರುತ್ತದೆ.

ಏಕೆ ಅಗತ್ಯ?

ಭಾರತದಲ್ಲಿ ಅನೇಕ ಧರ್ಮದ ಜನರು ವಾಸವಾಗಿದ್ದಾರೆ. ಭಾರತವನ್ನು ನೈಜ ಜಾತ್ಯತೀತ ರಾಷ್ಟ್ರವನ್ನಾಗಿ ರೂಪಿಸಲು ಸಮಾನ ನಾಗರಿಕ ಸಂಹಿತೆ ಅವಶ್ಯ. ಎಲ್ಲರಿಗೂ ಸಂವಿಧಾನದ ಅಡಿ ಸಮಾನ ಹಕ್ಕುಗಳನ್ನು ಒದಗಿಸಲು ಇದು ಸಹಕಾರಿ. ಭಾರತದ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಭಾವನೆ ಬಂದರೆ, ಇಡೀ ದೇಶದ ಜನರಲ್ಲಿ ಸಮಾನತೆ ಹಾಗೂ ಐಕ್ಯತೆ ಭಾವ ಮೂಡುತ್ತದೆ. ಅಲ್ಲದೆ, ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಲ್ಲಿ ಸಮಾನ ನಾಗರಿಕ ಸಂಹಿತೆ ಮಹತ್ವದ ಪಾತ್ರ ವಹಿಸುತ್ತದೆ

No comments:

Post a Comment