Friday 8 July 2016

CJ : ಹೆಲ್ಮೆಟ್, ಪೊಲೀಸ್ ಮತ್ತು ಸಂಚಾರ ನಿಯಮ….!

 ಮೈಸೂರು, :  ಕರ್ನಾಟಕ ಮೋಟಾರು ವಾಹನ (ತಿದ್ದುಪಡಿ) ನಿಯಮ 2015 ರ ಅನ್ವಯ ರಾಜ್ಯದಲ್ಲಿ ಎಲ್ಲಾ ರೀತಿಯ ದ್ವಿಚಕ್ರವಾಹನ ಸವಾರರಿಗೆ(ಹಿಂಬದಿ ಸವಾರರಿಗೂ ಸೇರಿದಂತೆ) ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ಇಂತಹ ನಿಯಮ ರೂಪಿಸಲಾಗಿದೆ ಎನ್ನುವುದು ರಾಜ್ಯಸರಕಾರದ ಸಮರ್ಥನೆ!ಸುಪ್ರೀಂ ಕೋರ್ಟ್ ನೀಡುವ ಎಲ್ಲಾ ನಿರ್ದೇಶನಗಳನ್ನೂ ರಾಜ್ಯ ಸರಕಾರ ಪಾಲಿಸುತ್ತಿದೆಯೇ?ರಸ್ತೆಗಳಲ್ಲಿ ಇರುವ ಮಾರಣಾಂತಿಕ ಗುಂಡಿಗಳನ್ನು
ಮುಚ್ಚುವಂತೆ ಕೋರ್ಟ್ ಆದೇಶಿಸಿಲ್ಲವೇ?
ರಸ್ತೆಗಳಲ್ಲಿ ಇರುವ ಗುಂಡಿಗಳ ವಿಚಾರವಾಗಿ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯನ್ವಯ ಪಾಲಿಕೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿಲ್ಲವೇಕೆ?

ಮದ್ಯಪಾನ ಮಾಡಿ ವಾಹನ ಸವಾರಿ/ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ಸರಕ್ಕಾರಕ್ಕಿಲ್ಲವೇ?ಹಾಗಿದ್ದೂ ಸಹ ಬಾರ್ ಮತ್ತು ರೆಸ್ಟೋರೆಂಟ್ ಬಳಿ ತಪಾಸಣೆ ನಡೆಸಿ ಕುಡುಕ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇಕೆ?ಕುಡುಕರ ವಿರುದ್ಧ ಕ್ರಮ ಕೈಗೊಂಡರೆ ಕುಡುಕರ ಸಂಖ್ಯೆ ಇಳಿಮುಖವಾಗಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಬಹುದೆಂಬ ಭಯವೇ?
ಸುಪ್ರೀಂ ಕೋರ್ಟ್ ನಿರ್ದೇಶನದ ನೆಪದಲ್ಲಿ ದ್ವಿಚಕ್ರ ವಾಹನ ಸವಾರರ ತಲೆಗೆ ಹೆಲ್ಮೆಟ್ ತೊಡಿಸಲು ಪಣತೊಟ್ಟ ಸರಕಾರದ ಪ್ರತಿಜ್ಞೆಯ ಹಿಂದೆ ಯಾವುದೇ ಕಾಳಜಿ ಇಲ್ಲ.ಸರಕಾರಕ್ಕೆ ಬೇಕಾಗಿರುವುದು ಹಣ!
ವಿಧವಿಧವಾದ ಭಾಗ್ಯಗಳಿಗೆ ಬೇಕಾದ ಹಣವನ್ನು ಜನರಿಂದಲೇ ವಸೂಲು ಮಾಡುವ ಹುನ್ನಾರ ಸರಕಾರದ್ದು.

ಮೈಸೂರಿನಲ್ಲಿ ನಗರ ಪಾಲಿಕೆಯ ಕೃಪಾಪೋಷಿತ ನೂರಾರು ಡಕೋಟಾ ಲಾರಿಗಳು,ಆಟೋ ರಿಕ್ಷಾಗಳು,ಟ್ರಾಕ್ಟರ್ ಗಳು ನಗರದಾದ್ಯಂತ ಸಂಚರಿಸುತ್ತಿವೆ.

ಈ ಲಾರಿಗಳಿಗೆ,ಟ್ರಾಕ್ಟರ್ ಗಳಿಗೆ ಮತ್ತು ಆಟೋ ರಿಕ್ಷಾಗಳಿಗೆ ಸಂಖ್ಯಾಫಲಕಗಳಿಲ್ಲ.ಲೈಟ್ ಇಲ್ಲ.ಹಾರನ್ ಇಲ್ಲ.ಇಂಡಿಕೇಟರ್ ಇಲ್ಲ. ಎಫ್ ಸಿ ಇಲ್ಲ. ಆರ್ ಸಿ ಇಲ್ಲ. ಪರ್ಮಿಟ್ ಇಲ್ಲ. ವಿಮೆ ಇಲ್ಲ.ಇವುಗಳ ಚಾಲಕರಿಗೆ ಡಿ ಎಲ್ ಇಲ್ಲ.
ಆದರೂ ಇಂತಹ ವಾಹನಗಳು ಮೈಸೂರು ನಗರದೆಲ್ಲೆಡೆ ಸಂಚರಿಸಲು ಅಡ್ಡಿ ಇಲ್ಲ. ಇಂತಹ ವಾಹನಗಳ ಚಕ್ರಕ್ಕೆ ಸಿಕ್ಕಿದರೆ ಹೆಲ್ಮೆಟ್ ಧರಿಸಿದ ವಾಹನ ಸವಾರರು ಬುದುಕಿ ಉಳಿಯಲು ಸಾಧ್ಯವೇ?

ಹೆಲ್ಮೆಟ್ ಧರಿಸದ ವಾಹನ ಸವಾರರನ್ನು ಬೇಟೆಯಾಡುವ ಮೈಸೂರಿನ ಪೊಲೀಸರ ಕಣ್ಣಿಗೆ ಇಂತಹ ವಾಹನಗಳು ಗೋಚರಿಸುವುದಿಲ್ಲವೇ?ದ್ವಿಚಕ್ರ ವಾಹನ ಸವಾರರ ಪ್ರಾಣದ ಮೇಲೆ ಸರಕಾರಕ್ಕೆ/ಪೊಲೀಸರಿಗೆ ಕಾಳಜಿ ಇದ್ದಿದ್ದರೆ ಪಾಲಿಕೆಯ ವಿರುದ್ಧ ಕ್ರಮ ಜರುಗಿಸಬೇಕಾಗಿತ್ತಲ್ಲವೇ?
ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬಾರದೆಂದು ಸುಪ್ರೀಂ ಕೋರ್ಟ್ ಪೊಲೀಸರಿಗೆ ನಿರ್ದೇಶಿಸಿದೆಯೇ?

ಮೈಸೂರಿನಲ್ಲಿ 90%ಕಾರು,ಲಾರಿ,ಆಟೋ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಚಾಲಕರು ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನಿನಲ್ಲಿ ಸಂಭಾಷಣೆ ಮಾಡುತ್ತಿರುತ್ತಾರೆ.ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಾರೆ.ಏಕೆಂದರೆ ಪೊಲೀಸರೂ ಕೂಡ ಮೊಬೈಲ್ ಬಳಸಿಕೊಂಡೇ ವಾಹನ ಚಲಾಯಿಸುವ ದುರಭ್ಯಾಸ ಹೊಂದಿರುತ್ತಾರೆ.ಇನ್ನು ಮೈಸೂರಿನ 50%ಪೊಲೀಸರಿಗೆ ಹೆಲ್ಮೆಟ್ ಎಂದರೆ ಅಲರ್ಜಿ.ಹೆಲ್ಮೆಟ್ ಧರಿಸದೆ ವಾಹನ  ಸವಾರಿ ಮಾಡುವವರ ವಿರುದ್ಧ ಕ್ರ ಕೈಗೊಳ್ಳುವ ಮೊದಲು ಸಂಚಾರ ನಿಯಮ ಉಲ್ಲಂಘಿಸುವ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕಾಗುತ್ತದೆ!

ಕಾನ್ವೆಂಟ್ ವಿದ್ಯಾರ್ಥಿಗಳಿಗೆ ಸೂಟು,ಬೂಟು,ಕೋಟು,ಟೈ ಇತ್ಯಾದಿಗಳನ್ನು ಕಡ್ಡಾಯಗೊಳಿಸುವುದಕ್ಕೂ ದ್ವಿಚಕ್ರ ವಾಹನ ಸವಾರರ ತಲೆಗೆ ಹೆಲ್ಮೆಟ್ ಕಡ್ಡಾಯಗೊಳಿಸುವುದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ.
ಕಾರು,ಹೆಲಿಕಾಪ್ಟರ್, ವಿಮಾನ ಮುಂತಾದ ಐಷಾರಾಮಿ ವಾಹನಗಳಲ್ಲಿ ಸಂಚರಿಸುವರಿಗೆ ದ್ವಿಚಕ್ರ ವಾಹನ ಸವಾರರ ಕಷ್ಟ ಅರ್ಥವಾಗದು.ಆದುದರಿಂದಲೇ ಇಂತಹಾ ನಿಯಮಗಳು ರೂಪುಗೊಳ್ಳುತ್ತಿರುವುದು.
ವಾಹನ ಸವಾರರ ತಲೆಯ ಮೇಲೆ ಸರಕಾರಕ್ಕೆ ಕಾಳಜಿ ಇದ್ದರೆ ದಂಡ ವಸೂಲಿ ಮಾಡುತ್ತಾ ಬೀಗುವುದರ ಬದಲಾಗಿ ಸರಿಯಾಗಿ ವಾಹನ ಸಂಚಾರ ನಿಯಂತ್ರಣ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಲಿ!

ಅಂತೆಯೇ ಮೈಸೂರಿನಲ್ಲಿ ಸುಮಾರು 200-250 ಸಂಚಾರಿ ಪೊಲೀಸರಿದ್ದಾರೆ.ಹಾಗೆಯೇ ಮೈಸೂರು ನಗರದಾದ್ಯಂತ ನೂರಾರು ವೃತ್ತಗಳಿವೆ.ಯಾವುದೇ ವೃತ್ತದಲ್ಲೂ ಸಂಚಾರ ನಿಯಂತ್ರಣ ಮಾಡುವ ಸಂಚಾರ ಪೊಲೀಸರು ಕಾಣಿಸುತ್ತಿಲ್ಲ.ಸಂಚಾರ ಪೊಲೀಸರ ಜಾಗದಲ್ಲಿ ಟ್ರಾಫಿಕ್ ವಾರ್ಡನ್ ಅಥವಾ ಗೃಹರಕ್ಷಕ-ರಕ್ಷಕಿಯರು ಪ್ರತಿಷ್ಠಾಪಿಸಲ್ಪಟ್ಟಿದ್ದಾರೆ.

ಈ ಗೃಹರಕ್ಷಕ ದಳದವರು ಹಲ್ಲಿಲ್ಲದ ಹಾವು ಮಾತ್ರವಲ್ಲದೆ ಬುಸುಗುಡುವ ಅಧಿಕಾರವೂ ಇಲ್ಲದ ಹಾವುಗಳಾಗಿದ್ದಾರೆ.
ಸಂಚಾರ ನಿಯಂತ್ರಣ ಮಾಡಬೇಕಾದ ನಮ್ಮ ಸಂಚಾರಿ ಪೊಲೀಸರು ರಸ್ತೆಗಿಳಿಯುವುದು ದಂಡ ವಸೂಲಿ ಮಾಡಲು ಮಾತ್ರ.
ದಂಡ ವಸೂಲಿ ಮಾಡಲು ರಸ್ತೆಗಿಳಿಯುವ ನಕ್ಷತ್ರಧಾರಿ ಪೊಲೀಸ್ ಅಧಿಕಾರಿಯ ಜೊತೆ ಹತ್ತಾರು ಸಂಚಾರಿ ಪೊಲೀಸರಲ್ಲದೆ ಸಮವಸ್ತ್ರಧರಿಸದ(ಕರ್ತವ್ಯದಲ್ಲಿಲ್ಲದ) ಪೊಲೀಸರೂ ಸೇರಿಕೊಂಡು ಸೈನಿಕರಂತೆ ಕಾರ್ಯಾಚರಣೆ ನಡೆಸುತ್ತಾರೆ,ನಂತರ ಮತ್ತೆ ನಾಪತ್ತೆಯಾಗುತ್ತಾರೆ.

ದಂಡ ವಸೂಲಿಯೊಂದೇ ಸಂಚಾರ ಪೊಲೀಸರ ಕರ್ತವ್ಯವೇ?
ಸಂಚಾರ ನಿಯಂತ್ರಣ ಮಾಡುವುದು ಸಂಚಾರಿ ಪೊಲೀಸರ ಕರ್ತವ್ಯವಲ್ಲವೇ?
ದಂಡ ವಸೂಲಿ ಮಾಡುವ ಕಾರ್ಯಾಚರಣೆ ಮುಗಿದ ನಂತರ ಈ ಸಂಚಾರಿ ಪೊಲೀಸರೆಲ್ಲಾ ಎಲ್ಲಿ ಹೋಗುತ್ತಾರೆ?ಏನು ಮಾಡುತ್ತಾರೆ? ಸಂಚಾರ ನಿಯಂತ್ರಣ ಮಾಡದ ಪೊಲೀಸರಿಗೆ ದಂಡ ವಸೂಲು ಮಾಡುವ ನೈತಿಕ ಅಧಿಕಾರ ಇದೆಯೇ?
ದಂಡ ವಸೂಲಿ ಮಾಡುವ ಕಾರ್ಯಾಚರಣೆ ಮುಗಿದ ನಂತರ ನಮ್ಮ ಸಂಚಾರಿ ಪೊಲೀಸರು ಮತ್ತೆ ರಸ್ತೆಗಿಳಿಯುವುದು ಮುಖ್ಯಮಂತ್ರಿಗಳು ಮೈಸೂರಿಗೆ ಬಂದಾಗಲೇ!

ಮೈಸೂರು ನಗರದ ಯಾವುದಾದರೂ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಶಿಸ್ತಿನಿಂದ ನಿಂತು ಸಂಚಾರ ನಿಯಂತ್ರಣ ಮಾಡುತ್ತಿದ್ದಾರೆಂದರೆ ಮುಖ್ಯಮಂತ್ರಿಗಳು ನಗರದಲ್ಲಿದ್ದಾರೆಂದರ್ಥ.

ಮುಖ್ಯಮಂತ್ರಿಗಳು ಮೈಸೂರಿಗೆ ಆಗಮಿಸಿದೊಡನೆ ನಮ್ಮ ಸಂಚಾರಿ ಪೊಲೀಸರು ಶಿಸ್ತಿನ ಸಿಪಾಯಿಗಳಂತೆ ರಸ್ತೆಯ ಹೆಜ್ಜೆ ಹಜ್ಜೆಗೂ ನಿಂತು ಮುಖ್ಯಮಂತ್ರಿಗಳು ಮತ್ತು ಅವರ ಹಿಂಬಾಲಕರು ಹಾಗೂ ಮುಂಬಾಲಕರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ. ಮುಖ್ಯಮಂತ್ರಿಗಳು ಅಲ್ಲಿಂದ ತೆರಳಿದೊಡನೆ ಜಂಬೂಸವಾರಿ ಮುಗಿದ ತಕ್ಷಣ ಮೈಸೂರು ನಗರದಲ್ಲಿ ಸಂಚಾರ ವ್ಯವಸ್ಥೆ ಹೇಗೆ ಹದಗೆಡುತ್ತದೆಯೋ ಅದೇ ಅನುಭವ ಆಗುತ್ತದೆ.

ಮೈಸೂರು ನಗರದಲ್ಲಿರುವ ನೂರಾರು ವೃತ್ತದಲ್ಲೂ ಖಾಯಂ ಆಗಿ ಒಬ್ಬಬ್ಬ ಸಂಚಾರಿ ಪೊಲೀಸರನ್ನು ನೇಮಿಸಿದರೆ ಸಂಚಾರ ನಿಯಂತ್ರಣ ಮಾಡಿದಂತಾಗುತ್ತದೆ.ಜೊತೆಗೆ ದಂಡ ವಿಧಿಸುವ ಪ್ರಮೇಯವೇ ಇರುವುದಿಲ್ಲ. ನಮ್ಮ ಪೊಲೀಸರೇಕೆ ಹೀಗೆ ಮಾಡುವುದಿಲ್ಲ?

ಅಷ್ಟೇ ಅಲ್ಲದೆ ಮೈಸೂರಿನ ನ್ಯಾಯಾಲಯದ ಪ್ರವೇಶ ದ್ವಾರದಲ್ಲಿಯೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.ಈ ನ್ಯಾಯಾಲಯದ ಎದುರು ಓಡಾಡುವ ವಾಹನಗಳು ತಬ್ಬಿಬ್ಬಾಗುತ್ತವೆ.

ಕಾರಣ… ನ್ಯಾಯಾಲಯದೆದುರು ಸಂಚರಿಸುವ ವಾಹನಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲದೆ ಈ ವೃತ್ತ ಅನಾಥವಾಗಿದೆ. ಪಾದಚಾರಿಗಳನ್ನಂತೂ ಆ ದೇವರೇ ಕಾಪಾಡಬೇಕು.
ನ್ಯಾಯಾಲಯದ ಎದುರು ಇರುವ ನಾಲ್ಕೂ ರಸ್ತೆಗಳಲ್ಲಿ ನಿರ್ಮಿಸಿದ್ದ ರಸ್ತೆ ಡುಬ್ಬಗಳು ಮಾಯವಾಗಿವೆ.ರಸ್ತೆ ಎತ್ತರಕ್ಕೆ ಏರುತ್ತಿದ್ದಂತೆಲ್ಲಾ ಈ ಡುಬ್ಬಗಳು ಕುಬ್ಜವಾಗಿ ರಸ್ತೆಯ ಸಮಕ್ಕೆ ಬಂದು ನಿಂತಿದೆ.ಹಾಗಾಗಿ ನಾಲ್ಕೂ ರಸ್ತೆಗಳಿಂದ ಬರುವ ವಾಹನಗಳ ವೇಗಕ್ಕೆ ಬ್ರೇಕ್ ಇಲ್ಲದಂತಾಗಿದೆ.
ಗಾಯದ ಮೇಲೆ ಬರೆ ಎನ್ನುವಂತೆ ಸಂಚಾರ ಪೊಲೀಸರು ನ್ಯಾಯಾಲಯದ ಎದುರು ಬ್ಯಾರಿಕೇಡುಗಳನ್ನು ಅವೈಜ್ಞಾನಿಕವಾಗಿ ಜೋಡಿಸಿ ನ್ಯಾಯಾಲಯಕ್ಕೆ ಬರುವ ಮಾರ್ಗವನ್ನು ಬಂದ್ ಮಾಡುವುದರಿಂದ ವಾಣಿವಿಲಾಸ ರಸ್ತೆಯಿಂದ ಬರುವ ವಾಹನಗಳು ಅಪ್ರದಕ್ಷಿಣೆಯಾಗಿ ಚಲಿಸಿ ಮೂರೂ ಕಡೆಯಿಂದ ಬರುವ ವಾಹನಗಳಿಗೆ ಅಡ್ಡ ಬರುತ್ತವೆ.ಅದಾವ ಪುರುಷಾರ್ಥಕ್ಕಾಗಿ ಈ ಪೊಲೀಸರು ಈ ಬ್ಯಾರಿಕೇಡುಗಳನ್ನು ರಸ್ತೆಯಲ್ಲಿ ಜೋಡಿಸಿದ್ದಾರೋ ಆ ದೇವನೇ ಬಲ್ಲ.

ಅದೇನೋ ‘ಎಂ ಟ್ರಾಕ್’ ಎಂಬ ಯೋಜನೆ ಇದೆಯಂತಲ್ಲಾ,?ಅದಕ್ಲಾಗಿ ಕೋಟಿ ಕೋಟಿ ರುಪಾಯಿ ಮೀಸಲಿದೆಯಂತಲ್ಲಾ? ಆ ಯೋಜನೆಯನ್ವಯ ನ್ಯಾಯಾಲಯದ ಎದುರು ಇರುವ ವೃತ್ತದ ನಾಲ್ಕೂ ರಸ್ತೆಗಳಲ್ಲಿ ರಸ್ತೆ ಡುಬ್ಬ ನಿರ್ಮಿಸಲು ಏನು ತೊಂದರೆ?
ಅಲ್ಲದೆ ಈ ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ಯಾವುದೇ ಸಂಚಾರ ಪೊಲೀಸರು ಕಾರ್ಯ ನಿರ್ವಹಿಸುವುದಿಲ್ಲ.

ಸಂಚಾರಿ ಪೊಲೀಸರು ಬಂದರೂ ಸಹ ಅವರು ಸಂಚಾರ ನಿಯಂತ್ರಣ ಮಾಡುವ ಬದಲು ಒಂದೆರಡು ಫೋಟೋ ಕ್ಲಿಕ್ಕಿಸಿ ಅಲ್ಲಿಂದ ತೆರಳುತ್ತಾರೆ!
ನ್ಯಾಯಾಲಯದ ಪ್ರವೇಶ ದ್ವಾರದ ಬಳಿ ರುವ ನೋ ಪಾರ್ಕಿಂಗ್ ಫಲಕದ ಬಳಿಯೇ ಆಟೋ ರಿಕ್ಷಾಗಳು,ಕಾರುಗಳು ಹಾಗೂ ಪೊಲೀಸ್ ವಾಹನಗಳು ನಿಂತಿರುತ್ತವೆ. ನ್ಯಾಯಾಲಯದೆದುರೇ ಸಂಚಾರ ನಿಯಮಗಳಿಗೆ ಕಿಮ್ಮತ್ತಿಲ್ಲವೆಂದಮೇಲೆ ಬೇರೆಡೆ ಹೇಗಿರಬಹುದು?
ನ್ಯಾಯಾಲಯದ  ಪ್ರವೇಶ ದ್ವಾರದಲ್ಲಿರುವ ಪೊಲೀಸ್ ಚೌಕಿಯಲ್ಲಿ ನಾಲ್ಕೈದು ಪೊಲೀಸರು ಸದಾ ವಿಶ್ರಾಂತಿ ಪಡೆಯುತ್ತಿರುತ್ತಾರೆ.ಪ್ರಧಾನ ಜಿಲ್ಲಾ ನ್ಯಾಯಾಧೀಶರು ನ್ಯಾಯಾಲಯದೊಳಕ್ಕೆ ಬರುವಾಗ ಮಾತ್ರ ಹೊರಬರುವ ಈ ಪೊಲೀಸರು ನಂತರ ಪುನಃ ಒಳಗೆ ಹೋಗಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಪೊಲೀಸರು ಈ ಪೊಲೀಸ್ ಚೌಕಿಯೊಳಗೆ ವಿಶ್ರಾಂತಿ ಪಡೆಯುವ ಬದಲು ಪ್ರವೇಶ ದ್ವಾರದ ಬಳಿ ನಿಂತು ಸಂಚಾರ ನಿಯಂತ್ರಣ ಮಾಡಿದರೆ ನ್ಯಾಯಾಲಯಕ್ಕೆ ಬರುವ ಲಕ್ಷಾಂತರ ಜನರಿಗೆ ದಾರಿ ತೋರಿಸಿದಂತಾಗುತ್ತದೆ.

ನ್ಯಾಯಾಲಯದ ಪ್ರವೇಶ ದ್ವಾರದಲ್ಲೇ ಪೊಲೀಸರಿಲ್ಲದೆ ಸಂಚಾರಿ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವಾಗ ಉಳಿದೆಡೆ ಹೇಗಿರಬಹುದು?
ಸಂಚಾರೀ ನಿಯಮಗಳನ್ನು ಅರೆದು ಕುಡಿದು ಪರಿಣಿತರಾಗಿರುವ ಪೊಲೀಸ್ ಆಯುಕ್ತರು ಈ ಕೂಡಲೇ ಈ ವೃತ್ತದಲ್ಲಿ ಓರ್ವ ದಕ್ಷ ಪೋಲೀಸರನ್ನು ನೇಮಿಸಿ(ಫೋಟೋ ಕ್ಲಿಕ್ಕಿಸುವ ಪೊಲೀಸರನ್ನಲ್ಲ) ನ್ಯಾಯಾಲಯಕ್ಕೆ ನ್ಯಾಯ ಕೋರಿ ಬರುವ ಸಾರ್ವಜನಿಕರಿಗೆ ನ್ಯಾಯ ನೀಡಲಿ.
ಅಲ್ಲದೆ ಸಂಚಾರ ಪೊಲೀಸರ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಟ್ರಾಫಿಕ್ ವಾರ್ಡನ್ ಅಥವಾ ಗೃಹ ರಕ್ಷಕ ದಳದವರನ್ನು ಕಂಡರೆ ಬೇಜವಾಬ್ದಾರಿ ಚಾಲಕರಿಗೆ ಮತ್ತು ಸವಾರರಿಗೆ ಭಯವಿಲ್ಲ.ಹಾಗಾಗಿ ಈ ಗೃಹರಕ್ಷಕರಿಗೆ ಬೆಲೆಯಿಲ್ಲದಂತಾಗಿದೆ.ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಇವರು ಕ್ರಮ ತೆಗೆದುಕೊಳ್ಳುವಂತಿಲ್ಲ.ಆ ವಾಹನಗಳ ನಂಬರನ್ನು ಬರೆದುಕೊಳ್ಳಲು ಇವರ ಬಳಿ ಪೆನ್ನೂ ಇಲ್ಲ,ಪುಸ್ತಕವೂ ಇಲ್ಲ.ಹಾಗಾದರೆ ಈ ಟ್ರಾಫಿಕ್ ವಾರ್ಡನುಗಳಾಗಲೀ,ಗೃಹ ರಕ್ಷಕ ದಳದವರಾಗಲೀ ಇರುವುದಾದರೂ ಏಕೆ?

ಸಂಚಾರ ನಿಯಂತ್ರಿಸಲು ಇರುವ ಸಂಚಾರ ಪೊಲೀಸರು ಈಗ ಕ್ಯಾಮರಾ ಹಿಡಿದು ಫೋಟೋಗ್ರಾಫರುಗಳಾಗಿದ್ದಾರೆ.
ಅದರ ಬದಲು ಟ್ರಾಫಿಕ್ ಪೊಲೀಸರೇ ಎಲ್ಲಾ ವೃತ್ತದಲ್ಲಿ ಸಂಚಾರ ನಿಯಂತ್ರಣ ಮಾಡಲಿ. ಟ್ರಾಫಿಕ್ ವಾರ್ಡನ್ ಮತ್ತು ಗ್ರಹರಕ್ಷಕ ದಳದವರು ಕ್ಯಾಮರಾ ಹಿಡಿದು ನಗರದಾದ್ಯಂತ ಓಡಾಡುತ್ತಾ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ಕ್ಲಿಕ್ಕಿಸಿ ಪೊಲೀಸ್ ಇಲಾಖೆಗೆ ನೀಡಲಿ.

No comments:

Post a Comment