Wednesday, 13 July 2016

ಭಾರತದ ಮೂಲಸವಲತ್ತು ಕ್ಷೇತ್ರ, ಬಂಡವಾಳ ಹೂಡಿಕೆಗೆ ಗಡ್ಕರಿ ಆಹ್ವಾನ


ವಾಷಿಂಗ್ಟನ್: ಭಾರತದ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ಸಹಸ್ರ ಕೋಟಿ ರೂ. ಬಂಡವಾಳದ ಅಗತ್ಯವಿದ್ದು, ಉದ್ಯಮಿಗಳು ಹೂಡಿಕೆ ಮಾಡಲು ಇದು ಸುವರ್ಣ ಅವಕಾಶ ಎಂದು ಸಾರಿಗೆ, ಹೆದ್ದಾರಿ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
ಅಮೆರಿಕ-ಭಾರತ ವಹಿವಾಟು ಮಂಡಳಿ (ಯುಎಸ್​ಐಬಿಎಸ್) ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕದ ಉದ್ಯಮಿಗಳಿಗೆ
ಭಾರತದ ಮೂಲ ಸವಲತ್ತು ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಆಹ್ವಾನವಿತ್ತರು.

ಪ್ರಧಾನಿ ಮೋದಿ ಭಾರತವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿ, ಅದರ ಅನುಷ್ಠಾನಕ್ಕಾಗಿ ವಿಶೇಷ ಮಹತ್ವವನ್ನೂ ನೀಡಿದ್ದಾರೆ. ರಸ್ತೆ ಸಾರಿಗೆ, ಜಲಸಾರಿಗೆ ಮಾರ್ಗ, ಬಂದರು ನವೀಕರಣ ಮತ್ತು ಇ ಗವರ್ನೆನ್ಸ್ ಗೆ ಪ್ರಥಮ ಆದ್ಯತೆ ನೀಡಲಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನಮ್ಮ ಸರ್ಕಾರದ ಗುರಿ ಎಂದು ಅವರು ನುಡಿದರು.

ವರ್ಷಕ್ಕೆ 5 ಲಕ್ಷ ಕ್ಕೂಹೆಚ್ಚು ಅಪಘಾತಗಳಾಗುತ್ತಿವೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಇದರಿಂದ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಹೆದ್ದಾರಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ಟ್ರಾನ್ಸ್ ಏಷ್ಯಾ, ಊಬರ್, ಬೆಂಟ್ಲಿ ಸಿಸ್ಟಮ್ ಟಾಟಾ, ಡಿಎಲ್​ಜೆಡ್ ಕಾಪೋರೇಷನ್ ಮತ್ತು ಟೆಕ್ಸಾಸ್ ಕಂಪೆನಿ ಹಿರಿಯ ಕಾರ್ಯನಿರ್ವಾಹಕರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ಅಮೆರಿಕ ಉದ್ಯಮಿಗಳು ಮತ್ತು ಸರ್ಕಾರ ಭಾರತದ ಸಮಗ್ರ ಅಭಿವೃದ್ಧಿಗೆ ಹೇಗೆ ಸಹಕರಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಿತು.

No comments:

Post a Comment