Friday, 8 July 2016

ಹಿರಿದಾಗಬೇಕಿದೆ ತೆರಿಗೆ ವರ್ತುಲ

 ಇದುವರೆಗೆ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಬಾರದ, ಕೊಂಚ ತೆರಿಗೆ ನೀಡಲು ಕಷ್ಟವೇನೂ ಆಗದ ದೊಡ್ಡ ವರ್ಗವೊಂದು ನಮ್ಮ ಮಹಾನಗರಗಳಲ್ಲಷ್ಟೇ ಅಲ್ಲ, ಸಣ್ಣ ಪಟ್ಟಣಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಇದೆ. ಆ ಕುರಿತು ಅವರನ್ನು ಶಿಕ್ಷಿತರನ್ನಾಗಿಸುವ, ಪ್ರೇರೇಪಿಸುವ ಕೆಲಸವಾಗಬೇಕಾಗಿದೆ.ಬತ್ತರ ದಶಕದಲ್ಲಿ ದೇಶದಲ್ಲಿ ಉದಾರೀಕರಣದ ಗಾಳಿ ಬೀಸುವ ಮೊದಲು ಲೈಸೆ… ರಾಜ್‌ ಹಾವಳಿಯಿಂದ ಉದ್ದಿಮೆಗಳನ್ನು ಸ್ಥಾಪಿಸಲಿಚ್ಛಿಸುವವರು ಸರಕಾರದ ಒಂದು ಕಚೇರಿಯಿಂದ
ಇನ್ನೊಂದು ಕಚೇರಿಗೆ ಎಂಬಂತೆ ಸುತ್ತಬೇಕಿತ್ತು. ಎಂಬತ್ತರ ದಶಕದಲ್ಲಿ ಇನ್ಫೋಸಿಸ್‌ ಸ್ಥಾಪನೆಯ ಸಮಯದಲ್ಲಿ ಒಂದು ಲ್ಯಾಂಡ್‌ ಟೆಲಿಫೋನ್‌ ಕನೆಕ್ಷನ್‌ಗಾಗಿ ತಾವು ಎದುರಿಸಬೇಕಾದ ಕಟು ಅನುಭವವನ್ನು ಒಂದೆಡೆ ಇನ್ಫೋಸಿಸ್‌ ಸ್ಥಾಪಕರÇÉೊಬ್ಬರು ಅನಂತರದ ದಿನಗಳಲ್ಲಿ ವಿಷಾದಪೂರ್ವಕವಾಗಿ ನೆನಪಿಸಿಕೊಂಡಿದ್ದರು. ಹೀಗೆ ವ್ಯಾಪಾರಿಗಳಿಗೆ, ಕೈಗಾರಿಕೆಗಳನ್ನು ಸ್ಥಾಪಿಸಲಿಚ್ಛಿಸುವ ಉದ್ದಿಮೆದಾರರಿಗೆ ಕಿರಿಕಿರಿ ಮತ್ತು ಭಯದ ವಾತಾವರಣ ಉಂಟುಮಾಡಿದ್ದ ಇಲಾಖೆಗಳಲ್ಲಿ ಆದಾಯ ತೆರಿಗೆ ಇಲಾಖೆಯೂ ಒಂದಾಗಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯಾಗಿದೆಯಾದರೂ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ಅಗತ್ಯವಿದೆ ಎಂದರೆ ತಪ್ಪಾಗದು. ಆ ಕಾರಣದಿಂದಲೇ ಕೆಲವು ದಿನಗಳ ಹಿಂದೆ ನಡೆದ ರಾಜಸ್ವ ಅಧಿಕಾರಿಗಳ ಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿಯವರು "ಉಳ್ಳವರ ಮನೆ ಕದ ತಟ್ಟಿ, ಆದರೆ ವಿನಮ್ರತೆಯಿಂದ' ಎನ್ನುವ ಮಾತನಾಡಿರಬೇಕು.

ತೆರಿಗೆದಾರರು ಶೇ.1 ಜನ ಮಾತ್ರ! 
ಅಧಿಕ ವರಮಾನವುಳ್ಳ ಸಿರಿವಂತರ ಪಾಲಿಗೆ 70ರ ದಶಕದಲ್ಲಿ ಶೇ.85 ಇದ್ದ ಆದಾಯ ತೆರಿಗೆ ಇದೀಗ ಶೇ.30ನಷ್ಟು ವ್ಯಾವಹಾರಿಕ ಮತ್ತು ನ್ಯಾಯೋಚಿತ ಎನ್ನುವ ಮಟ್ಟಕ್ಕೆ ತಲುಪಿದೆ. ಅತ್ಯಧಿಕ ತೆರಿಗೆಯ ಹೊರೆ ತೆರಿಗೆ ವಂಚನೆಗೆ ಪ್ರಚೋದಿಸುತ್ತದೆ ಎನ್ನುವುದು ದಿಟ. ಆದರೆ ದೇಶದಲ್ಲಿ ಆದಾಯ ತೆರಿಗೆಯ ವ್ಯಾಪ್ತಿ ಎಷ್ಟು ಹೆಚ್ಚಬೇಕಿತ್ತೋ ಅಷ್ಟು ಹೆಚ್ಚಿಲ್ಲ. ವಿಶ್ವದ ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಒಂದಾದ ನಮ್ಮ ದೇಶದಲ್ಲಿ ಶ್ರೀಮಂತರ ಮತ್ತು ಮಧ್ಯಮ ವರ್ಗದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2012-13ರ ವಿತ್ತ ವರ್ಷದಲ್ಲಿ ಟ್ಯಾಕÕ… ಫೈಲ್‌ ಮಾಡಿದವರ ಸಂಖ್ಯೆ 2.87 ಕೋಟಿ. ಅದರಲ್ಲಿ 1.62 ಕೋಟಿ ಜನ ಸರಕಾರಕ್ಕೆ ಯಾವುದೇ ತೆರಿಗೆ ನೀಡಲಿಲ್ಲ. ಎಂದರೆ ಸರಕಾರಕ್ಕೆ ಆದಾಯ ತೆರಿಗೆ ಕಟ್ಟಿದವರು ಕೇವಲ 1.25 ಕೋಟಿ. ಅರ್ಥಾತ್‌ ಒಟ್ಟು ಜನಸಂಖ್ಯೆಯ ಕೇವಲ ಶೇ.1 ಮಾತ್ರ! ಈ ಸಂಖ್ಯೆ 5 ಕೋಟಿಯಲ್ಲದಿದ್ದರೂ ದ್ವಿಗುಣ- ತ್ರಿಗುಣವಂತೂ ಆಗಬೇಕು ಎಂದು ಪ್ರಧಾನ ಮಂತ್ರಿಯವರು ಅಪೇಕ್ಷಿಸಿದರೆ ತಪ್ಪೇನಿಲ್ಲ. 

ತೆರಿಗೆ ಜಾಲದ ವಿಸ್ತರಣೆಗೆ ಅವಕಾಶ
ದೇಶದಲ್ಲಿ ಒಂದು ದೊಡ್ಡ ಸಂಪನ್ನ ವರ್ಗ ತೆರಿಗೆ ಇಲಾಖೆಯಿಂದ ದೂರವಿರುವುದೇ ಒಳಿತು ಎನ್ನುವ ಮನಸ್ಥಿತಿಯÇÉೇ ಇನ್ನೂ ಇದೆ. ಆದಾಯ ತೆರಿಗೆಯ ಒಟ್ಟು ಕರ ಸಂಗ್ರಹದಲ್ಲಿ ಶೇ.92ರಷ್ಟು ಹಣ ಸ್ವಯಂಪ್ರೇರಿತರಾಗಿ ಕಟ್ಟುವುದರಿಂದ ಬರುತ್ತದೆ. ಎಂದರೆ ತೆರಿಗೆ ಇಲಾಖೆಯ ಗಮನಕ್ಕೆ ಬಾರದೇ ಅಸಂಘಟಿತ ವಲಯದಲ್ಲಿ ಇರುವ ತೆರಿಗೆ ಕಟ್ಟಲು ಶಕ್ತ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗ ತಾವಾಗಿಯೇ ಮುಂದೆ ಬಂದು ತೆರಿಗೆ ಕಟ್ಟುವವರೆಗೆ ಅವರನ್ನು ಕೇಳುವ, ಎಚ್ಚರಿಸುವ ಸಮರ್ಪಕ ವ್ಯವಸ್ಥೆ ಇಲ್ಲ. ಪ್ರಸ್ತುತ ಇರುವ ಸಣ್ಣ ತೆರಿಗೆದಾರರ ಚಿಕ್ಕ ಸಂಖ್ಯೆಯನ್ನು ವ್ಯಾಪಕವಾಗಿ ವಿಸ್ತರಿಸಲು ವಿಪುಲ ಅವಕಾಶಗಳಿವೆ. ಕೇವಲ ದೊಡ್ಡ ಪಟ್ಟಣಗಳಲ್ಲಷ್ಟೇ ಅಲ್ಲದೆ ಸಣ್ಣ ಸಣ್ಣ ನಗರಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಮತ್ತು ಆದಾಯ ತೆರಿಗೆ ಇಲಾಖೆಯಿಂದ ದೂರ ಇರುವವರನ್ನು ತೆರಿಗೆ ಜಾಲದ ವ್ಯಾಪ್ತಿಗೆ ತರುವ ಅಗತ್ಯವಿದೆ.

ಪ್ರಸ್ತುತ ವ್ಯವಸ್ಥೆಯಲ್ಲಿ ಸರಕಾರಿ, ಅರೆಸರಕಾರಿ, ಖಾಸಗಿ ಕಂಪನಿಗಳು ಮತ್ತು ಇನ್ನಿತರ ಸಂಘಟಿತ ವಲಯದಿಂದ ಬರುವ ನೌಕರ ವರ್ಗ ಮಾತ್ರ ತೆರಿಗೆ ವ್ಯಾಪ್ತಿಯಲ್ಲಿ¨ªಾರೆ. ಸಮಾನ ಆದಾಯ ಇರುವ ಖಾಸಗಿ ಸೇವಾ ಕ್ಷೇತ್ರದಲ್ಲಿರುವವರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು, ಸ್ವಂತ ಉದ್ಯಮಿಗಳು ಅಲ್ಪ-ಸ್ವಲ್ಪವಾದರೂ ಸರಿ ತೆರಿಗೆ ನೀಡುವಂತಾದರೆ ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ ಎಂಬ ಮಾತಿನಂತೆ ಸರಕಾರದ ಆದಾಯ ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಇದರಿಂದ ತೆರಿಗೆದರ ಇನ್ನಷ್ಟು ಕಡಿಮೆಗೊಳಿಸಿ ಮತ್ತಷ್ಟು ತರ್ಕಸಂಗತ ಮಾಡಲು ಸಾಧ್ಯವಾಗುತ್ತದೆ. ಕೆಲವೇ ಕೆಲವು ಜನ ಹೊರುತ್ತಿರುವ ತೆರಿಗೆ ಭಾರವನ್ನು ಇನ್ನಷ್ಟು ಜನರಿಗೆ ವಿಸ್ತರಿಸಿ, ಹಗುರಗೊಳಿಸಿ ಮಧ್ಯಮ ವರ್ಗಕ್ಕೆ ನ್ಯಾಯ ಒದಗಿಸಬಹುದು 

ತೆರಿಗೆ ಇಲಾಖೆಯ ಕಿರಿಕಿರಿ ಭಯ
ಆದಾಯ ತೆರಿಗೆ ಮತ್ತು ಪಾನ್‌ ಕಾರ್ಡ್‌ ಕುರಿತು ಸಾಮಾನ್ಯ ಜನತೆ ಇನ್ನೂ ಅನೇಕ ತಪ್ಪು ಕಲ್ಪನೆಯಲ್ಲಿ¨ªಾರೆ. ಬ್ಯಾಂಕಿಂಗ್‌ ಹಾಗೂ ಇನ್ನಿತರ
 ಹಣಕಾಸು ಸಂಸ್ಥೆಗಳಲ್ಲಿ ಪಾನ್‌ ಕಾರ್ಡ್‌ ಮತ್ತು ಐಟಿ ರಿಟ…ì ಕುರಿತು ಕೇಳಿದಾಗ ಬೆಚ್ಚಿಬೀಳುವ ಬಹಳಷ್ಟು ಜನರನ್ನು ಕಾಣಬಹುದು. ಶೆಡ್ನೂಲ್‌ ಬ್ಯಾಂಕ್‌ಗಳಲ್ಲಿ ಪಾನ್‌ ಕಾರ್ಡ್‌ ಇಲ್ಲದೇ ವ್ಯವಹಾರ ಸಾಧ್ಯವಿಲ್ಲ ಎಂದೇ ಅದೆಷ್ಟೋ ಜನ ಸಹಕಾರಿ ಸಂಘಗಳ ಅಥವಾ ಖಾಸಗಿ ಲೇವಾದೇವಿಗಾರರ ಬಳಿ ಸಾಲಕ್ಕಾಗಿ ಮತ್ತು ಠೇವಣಿ ಇರಿಸಲು ಮುಂದಾಗುತ್ತಾರೆ. ಸ್ವಲ್ಪ ತೆರಿಗೆ ಪಾವತಿಸಿ ನೆಮ್ಮದಿಯಾಗಿರಿ ಎನ್ನುವ ಸರಕಾರದ ಜಾಹೀರಾತು ಈ ವರ್ಗದ ಮೇಲೆ ಪರಿಣಾಮ ಬೀರುತ್ತಿಲ್ಲ. ತೆರಿಗೆ ಇಲಾಖೆಯ ಜಂಜಾಟ ಬೇಡ ಎನ್ನುತ್ತಾರೆ ಇವರು.

ದೇಶದೊಳಗೇ ಬೆಳೆಯುತ್ತಿದೆ ಕಪ್ಪು ಹಣ!
ತೆರಿಗೆ ಇಲಾಖೆಯ ಜಂಜಾಟದಿಂದ ದೂರ ಇರಬಯಸುವ ಜನರಿಂದಾಗಿ ಆರ್‌ಬಿಐ ನಿಯಂತ್ರಣದ ಹೊರಗೆ ದೊಡ್ಡ ಬ್ಯಾಂಕಿಂಗ್‌ ಚಟುವಟಿಕೆ ನಡೆಯುತ್ತಿದೆ. ಅನಿಯಂತ್ರಿತವಾಗಿ ನಡೆಯುವ ಆರ್ಥಿಕ ಚಟುವಟಿಕೆಗಳು ಆರ್‌ಬಿಐನ ಹಣಕಾಸು ನೀತಿಗಳನ್ನು ಕೊಂಚ ಮಟ್ಟಿಗೆ ನಿಷ್ಪ್ರಯೋಜಕ ಮಾಡುತ್ತವೆ. ಇದು ನಮ್ಮ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದು ವಾಸ್ತವ. ವಿದೇಶದಿಂದ ಕಪ್ಪು ಹಣ ತರುವ ಕುರಿತು ಆಗಾಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ದೇಶದೊಳಗೆ ಸಂಗ್ರಹವಾಗುತ್ತಿರುವ ಕಪ್ಪು ಹಣದ ಕುರಿತು ಯಾರೊಬ್ಬರೂ ಮಾತನಾಡುತ್ತಿಲ್ಲ.

ಸುಬ್ರಹ್ಮಣ್ಯ ಸ್ವಾಮಿಯವರು ಆದಾಯ ತೆರಿಗೆ ರದ್ದುಗೊಳಿಸುವ ಆಪ್ಯಾಯಮಾನ ಹೇಳಿಕೆ ನೀಡುತ್ತಿರುವರಾದರೂ ಅದು ಸದ್ಯಕ್ಕಂತೂ ಸಂಭವವಿಲ್ಲ. ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಂದ ಹಣ ಬರಬೇಕು? ದೇಶದ ರಕ್ಷಣಾ ಅಗತ್ಯಗಳ ತಯಾರಿಗೆ, ದೀನ ದಲಿತರ ಉತ್ಥಾನಕ್ಕಾಗಿ, ರೈತರ ಹಿತರಕ್ಷಣೆಗಾಗಿ ರೂಪಿಸುವ ಕಾರ್ಯಕ್ರಮಗಳಿಗೆ, ವೈಜ್ಞಾನಿಕ ಯೋಜನೆಗಳಿಗೆ, ನೌಕರ ವರ್ಗದ ಸಂಬಳಕ್ಕಾಗಿ ಬರುವ ಆದಾಯದ ದೊಡ್ಡ ಮೂಲವೊಂದನ್ನು ಸಾರಾಸಗಟಾಗಿ ರದ್ದು ಗೊಳಿಸುವುದು ವ್ಯಾವಹಾರಿಕವೇ? 

ಹೊರಗೇ ಉಳಿದ ದೊಡ್ಡ ವರ್ಗ
ಖಾಸಗಿ ಸಭೆ ಸಮಾರಂಭಗಳಿಗೆ, ಸಾಂಸ್ಕೃತಿಕ ಉತ್ಸವಗಳಿಗೆ, ಧಾರ್ಮಿಕ ಕಾರ್ಯಕ್ರಮಗಳಿಗೆ, ತಮ್ಮ ಪ್ರತಿಷ್ಠೆ ಹೆಚ್ಚಿಸುವ ಪ್ರತಿಷ್ಠಿತ ಕ್ಲಬ್‌ಗಳಿಗೆ ಉದಾರ ದೇಣಿಗೆ ನೀಡುವ ಕೊಡುಗೈ ದಾನಿಗಳನ್ನು ನಮ್ಮ ಸಮಾಜದಲ್ಲಿ ನಿತ್ಯ ನೋಡುತ್ತಿರುತ್ತೇವೆ. ಪ್ರಧಾನಮಂತ್ರಿಯವರ ಕರೆಗೆ ಓಗೊಟ್ಟು ಒಂದು ಕೋಟಿ ಜನ ಗ್ಯಾಸ್‌ ಸಬ್ಸಿಡಿ ಬಿಟ್ಟುಕೊಟ್ಟ ತಾಜಾ ಉದಾಹರಣೆ ನಮ್ಮ ಮುಂದಿದೆ. ಇದುವರೆಗೆ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಬಾರದ, ಕೊಂಚ ತೆರಿಗೆ ನೀಡಲು ಕಷ್ಟವೇನೂ ಆಗದ ದೊಡ್ಡ ವರ್ಗವೊಂದು ನಮ್ಮ ಮಹಾನಗರಗಳಲ್ಲಷ್ಟೇ ಅಲ್ಲ, ಸಣ್ಣ ಪಟ್ಟಣಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಇದೆ. ಆ ಕುರಿತು ಅವರನ್ನು ಶಿಕ್ಷಿತರನ್ನಾಗಿಸುವ, ಪ್ರೇರೇಪಿಸುವ ಕೆಲಸವಾಗಬೇಕಾಗಿದೆ.

ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವವರ್ಯಾರೂ ಸರಕಾರಕ್ಕೆ ತೆರಿಗೆಯನ್ನೇ ಪಾವತಿಸುತ್ತಿಲ್ಲ ಎಂದರ್ಥವಲ್ಲ. ವಿವಿಧ ವಸ್ತುಗಳನ್ನು ಖರೀದಿಸುವಾಗ ನೀಡುವ ಸೇವಾ ತೆರಿಗೆ, ಅಬಕಾರಿ ಸುಂಕ, ಸರ್‌ಚಾರ್ಜುಗಳು, ಮಾರಾಟ ತೆರಿಗೆ ಇತ್ಯಾದಿಗಳನ್ನು ಎಲ್ಲರೂ ಒಂದಲ್ಲಾ ಒಂದು ರೂಪದಲ್ಲಿ ಪಾವತಿಸುತ್ತಲೇ ಇರುತ್ತಾರೆ. ಈ ಹಣವೂ ಸರಕಾರದ ಬೊಕ್ಕಸಕ್ಕೇ ಹೋಗುತ್ತದೆ. ಆದರೆ, ಆದಾಯ ತೆರಿಗೆಯು ಸರಕಾರದ ವಾರ್ಷಿಕ ಆದಾಯದಲ್ಲಿ ಬಹುಮುಖ್ಯ ಭಾಗ. ಹಾಗಾಗಿ ಇದು ನ್ಯಾಯೋಚಿತವಾಗಿ ಸಂಗ್ರಹವಾಗುವುದು ದೇಶದ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು. 

ತೆರಿಗೆ ಪ್ರಕ್ರಿಯೆ ಈಗ ಸಾಕಷ್ಟು ಸುಧಾರಣೆಯಾಗಿದೆ ನಿಜ. ಆದಾಯ ತೆರಿಗೆ ವಾಪಸಾತಿ ಕೂಡ ಈಗ ಹಿಂದೆಂದಿಗಿಂತಲೂ ಬೇಗ ಮತ್ತು ಸುಲಭವಾಗಿ ತೆರಿಗೆದಾತರ ಖಾತೆಗೆ ಸೇರುತ್ತಿದೆ. ತೆರಿಗೆ ಸ್ವರೂಪದಲ್ಲಿ ನೀಡಿದ ಹಣ ಸಾರ್ಥಕ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದೆಯೆಂಬ ವಿಶ್ವಾಸ ಜನರಲ್ಲಿ ಮೂಡಿದಾಗ ತೆರಿಗೆ ನೀಡುವುದಕ್ಕೆ ಜನ ಹಿಂಜರಿಯಲಾರರು. ಒಟ್ಟಿನಲ್ಲಿ ಆದಾಯ ತೆರಿಗೆ ಹೊರೆ ಇನ್ನಷ್ಟು ಹಗುರವಾಗಿಸಲು ಮತ್ತು ವ್ಯಾಪ್ತಿ ಹಿರಿದಾಗಿಸಲು ಇದು ಸಕಾಲವೆಂದರೆ ತಪ್ಪಲ್ಲ.No comments:

Post a Comment