Saturday 9 July 2016

ಕೋನಾರ್ಕ್ ಸೂರ್ಯ ದೇವಾಲಯದಲ್ಲಿರುವ ವೈಜ್ಞಾನಿಕ ಅದ್ಭುತಗಳು


ಭಾರತದ ಪ್ರತಿಯೊಂದು ಪುರಾತನ ದೇವಾಲಯಗಳು ಇಲ್ಲಿನ ಶ್ರೀಮಂತ ಪರಂಪರೆಯಲ್ಲಿದ್ದ ವೈಜ್ಞಾನಿಕತೆಯ ಅದ್ಭುತಗಳನ್ನು ಸಾರುತ್ತಿವೆ. ಈ ಪೈಕಿ ಒಡಿಶಾದ ಪುರಿ ಜಿಲ್ಲೆಯಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವೂ ಒಂದು.1238-1250 ರ ಸುಮಾರಿಗೆ ಇಲ್ಲಿನ ದೇವಾಲಯವನ್ನು ಗಂಗಾ ರಾಜಮನೆತನದ ರಾಜ ನರಸಿಂಹದೇವ ಅಭಿವೃದ್ಧಿಪಡಿಸಿದ ಎಂಬುದು ಇತಿಹಾಸಶ್ರೀ ಕೃಷ್ಣನ ಪುತ್ರ ಸಾಂಬ ಕೋನಾರ್ಕ್ ನ ಸೂರ್ಯ ದೇವಾಲಯವನ್ನು ಸೂರ್ಯನಿಗೆ  ಗೌರವ ಸಲ್ಲಿಸಲು ನಿರ್ಮಿಸಿದ
ಎಂಬುದು ಐತಿಹ್ಯ ಹಾಗೂ ಪುರಾಣಗಳಿಂದ ಬಂದಿರುವ ನಂಬಿಕೆ.

ಕೋನಾರ್ಕ್ ಎಂಬ ಶಬ್ಧ ಸಂಸ್ಕೃತದ ಕೋನ(angle) ಹಾಗೂ ಅರ್ಕ(ಸೂರ್ಯ) ಎಂಬುದರಿಂದ ಬಂದಿದ್ದು, ಭಾರತ ಅತಿ ಪ್ರಾಚೀನ ಕಾಲದಲ್ಲೇ ಅತ್ಯುತ್ತಮವಾದ ವಾಸ್ತುಶಿಲ್ಪದ ಮಾದರಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿತ್ತು ಎಂಬುದು ಈ ದೇವಾಲಯ ಸಾಬೀತು ಪಡಿಸುತ್ತದೆ.

ವಿಶೇಷವೆಂದರೆ ಇಡೀ ಕೋನಾರ್ಕ್ ದೇವಾಲಯದ ವಿನ್ಯಾಸ ಸೂರ್ಯನ ರಥದ ರೂಪದಲ್ಲಿ ರಚನೆಯಾಗಿದೆಯಂತೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಅದು ಜಗತ್ತಿನ ಅತಿ ದೊಡ್ಡ, ಗಡಿಯಾರವನ್ನು ಹೋಲುವ ನೆರಳಿನ ಗಡಿಯಾರ (ಸನ್ ಡಯಲ್)!.  ಹೌದು 12 ಜೊತೆ ಚಕ್ರಗಳನ್ನು ಹೊಂದಿದ್ದು, ನೆರಳಿನ ಗಡಿಯಾರ (ಸನ್ ಡಯಲ್) ಸಮಯವನ್ನು ನಿಖರವಾಗಿ ಹೇಳುತ್ತದೆ!.

ಈ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ, ಅದು ಎರಡು ಕಲ್ಲುಗಳ ಮಧ್ಯೆ ಕಬ್ಬಿಣದ ಪ್ಲೇಟ್ ಬಳಕೆ ಮಾಡಿ, ದೇವಾಲಯ ನಿರ್ಮಾಣ ಮಾಡಲು ಕಬ್ಬಿಣದ ತೊಲೆಗಳನ್ನು ಬಳಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ 52 ಟನ್ ತೂಕದ ಅಯಸ್ಕಾಂತವನ್ನೂ(ಮ್ಯಾಗ್ನೆಟ್) ನ್ನೂ ಬಳಕೆ ಮಾಡಿದ್ದಾರೆ. ದೇವಾಲಯದಲ್ಲಿ ಬಳಕೆ ಮಾಡಲಾಗಿರುವ ಮ್ಯಾಗ್ನೆಟ್ ನ(ಅಯಸ್ಕಾಂತ)ದ ಅನನ್ಯ ವ್ಯವಸ್ಥೆಯ ಮೂಲಕ ದೇವಾಲಯದಲ್ಲಿರುವ ಮುಖ್ಯ ವಿಗ್ರಹ ತೇಲುವಂತೆ ಮಾಡಲಾಗಿದ್ದು ಮತ್ತೊಂದು ವಿಶೇಷ. ಇದರೊಂದಿಗೆ ದೇವಾಲಯದಲ್ಲಿನ ವಿಗ್ರಹವನ್ನು ಸೂರ್ಯ ರಶ್ಮಿ ನೇರವಾಗಿ ಚುಂಬಿಸುವಂತಹ ನಿಪುಣ ವಾಸ್ತುಶಿಲ್ಪವನ್ನು ಬಳಕೆ ಮಾಡಲಾಗಿದ್ದು, ವಿಗ್ರಹದ ಕೇಂದ್ರದಲ್ಲಿರುವ ವಜ್ರಕ್ಕೆ ಸೂರ್ಯ ರಶ್ಮಿ ತಾಗಿ ಪ್ರತಿಫಲಿಸುವುದಂತೂ ಅದ್ಭುತವೇ.

ಇಷ್ಟೆಲ್ಲಾ ಅಚ್ಚರಿಗಳೊಂದಿಗೆ ನೃತ್ಯ ಕಲಾವಿದರು ಹಾಗೂ ಸಾಂಸ್ಕೃತಿಕ ಕಲೆಗಳನ್ನೊಳಗೊಂಡ ಕೋನಾರ್ಕ್ ದೇವಾಲಯ ಧಾರ್ಮಿಕವಾಗಿ ಅಷ್ಟೇ ಅಲ್ಲದೇ ವೈಜ್ಞಾನಿಕವಾಗಿಯೂ ಕುತೂಹಲ ಮೂಡಿಸುವ ಸ್ಥಳವಾಗಿದ್ದು ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದೆ.


No comments:

Post a Comment