Friday 8 July 2016

ಪೊಲೀಸರ ವೇತನ ತಾರತಮ್ಯನಿವಾರಣೆಗೆ ಸಮಿತಿ ರಚನೆ

ಬೆಂಗಳೂರು(ಜು.8): ದಶಕಗಳಿಂದಲೂ ಕೇಳಿ ಬರುತ್ತಿರುವ ಪೊಲೀಸರ ವೇತನ ಹಾಗೂ ಸೌಲಭ್ಯ ತಾರತಮ್ಯ ಸರಿಪಡಿಸಲು ರಾಜ್ಯ ಸರ್ಕಾರ ಎಡಿಜಿಪಿ ರಾಘವೇಂದ್ರ ಔರಾದ್‌ಕರ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ತಿಂಗಳೊಳಗೆ ವರದಿ ನೀಡುವಂತೆಯೂ ನಿರ್ದೇಶನ ನೀಡಿದೆ. ಇದರೊಂದಿಗೆ ವೇತನ ತಾರತಮ್ಯದ ಬಗ್ಗೆ ಅಸಮಾಧಾನ ಹೊಂದಿದ್ದ ರಾಜ್ಯದ ಸುಮಾರು ಒಂದು ಲಕ್ಷ ಪೊಲೀಸರಿಗೆ ಭರವಸೆ ಈಡೇರುವ ಆಶಾಭಾವನೆ ಮೂಡಿದಂತಾಗಿದೆ.ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ
ಜೂನ್ ೪ರಂದು ರಾಜ್ಯದಾದ್ಯಂತ ಪೊಲೀಸರು ಮುಷ್ಕರಕ್ಕೆ ಕರೆ ನೀಡಿದ್ದರಾದರೂ ಪೊಲೀಸರ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ತುರ್ತು ಕ್ರಮದ ಭರವಸೆ ನೀಡಿದ್ದರಿಂದ ಮುಷ್ಕರ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 14ರಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪೊಲೀಸರ ವೇತನ ತಾರತಮ್ಯ ನಿವಾರಣೆಗೆ ಸಮಿತಿ ರಚನೆಗೆ ನಿರ್ಧರಿಸಲಾಗಿತ್ತು.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಪೊಲೀಸರ ವೇತನ ಕಡಿಮೆ ಇದೆ. ಮೂಲವೇತನದಲ್ಲೇ ಶೇ.60ರಷ್ಟು ನಷ್ಟವನ್ನು ಪೊಲೀಸರು ಅನುಭವಿಸುತ್ತಿದ್ದಾರೆ. ರಾಜ್ಯದಲ್ಲೇ ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸರ ಶ್ರೇಣಿ ಮತ್ತು ವೇತನದಲ್ಲಿ ತಾರತಮ್ಯ ಇದೆ. ಜೊತೆಗೆ ದಿನದಲ್ಲಿ ಸರಾಸರಿ 11ರಿಂದ 14 ತಾಸುಗಳ ಕಾಲ ಪೊಲೀಸರು ವಾರದ ರಜೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಅಂಶಗಳನ್ನೇ ಆಧರಿಸಿ ಅಧ್ಯಯನ ನಡೆಸಿ, ವರದಿ ನೀಡುವಂತೆ ಜೂನ್ 26ರಂದು ರಾಜ್ಯಸರ್ಕಾರದ ಗೃಹ ಇಲಾಖೆ ಔರಾದ್‌ಕರ್ ನೇತೃತ್ವದಲ್ಲಿ ಸಮಿತಿ ರಚಿಸಿದೆ.

ಸಮಿತಿ ಏನು ಮಾಡುತ್ತದೆ?

ಬೇರೆ ರಾಜ್ಯಗಳಲ್ಲಿ ಪೊಲೀಸರು ಪಡೆಯುತ್ತಿರುವ ವೇತನ, ಭತ್ಯೆ, ಸೌಲಭ್ಯ ಅಧ್ಯಯನ ಮಾಡುವುದು, ರಾಜ್ಯದ ಇತರ ಇಲಾಖೆಗಳ ಶ್ರೇಣಿ ಹಾಗೂ ವೇತನ ಕುರಿತು ತುಲನಾತ್ಮಕ ಅಧ್ಯಯನ ಹಾಗೂ ‘ಜೀವ ಭಯ’ದ ನಡುವೆಯೂ ಪೊಲೀಸರ ಕರ್ತವ್ಯ ನಿರ್ವಹಿಸುವುದರಿಂದ ರಿಸ್ಕ್ ಭತ್ಯೆಯ ಸ್ವರೂಪದ ಕುರಿತಂತೆ ಶಿಫಾರಸು ಮತ್ತು ಪೊಲೀಸರಿಗೆ ತೃಪ್ತಿಕರ ವೇತನ ಶ್ರೇಣಿ ಸೃಜಿಸಲು ಸೂಕ್ತ ಶಿಫಾರಸು ಮಾಡುವುದು ಸಮಿತಿಯ ಮುಖ್ಯ ಕೆಲಸವಾಗಿದೆ.

ಸಮಿತಿಯ ಮೊದಲನೇ ಸಭೆ ಕಳೆದ ಸೋಮವಾರ ಎಡಿಜಿಪಿ ಔರಾದ್‌ಕರ್ ಅಧ್ಯಕ್ಷತೆಯಲ್ಲಿ ನಡೆದಿದೆ. ಸಭೆಯಲ್ಲಿ ಪೊಲೀಸರ ಶ್ರೇಣಿ, ಮೂಲವೇತನ, ಭತ್ಯೆಗಳು, ಸೌಲಭ್ಯಗಳು, ಕೆಲಸದ ಅವಧಿ ಮಾಹಿತಿಯೊಳಗೊಂಡ ಶೀರ್ಷಿಕೆಗಳನ್ನು ರಚಿಸಿ, ಬೇರೆ ರಾಜ್ಯಗಳಿಗೆ ಮೂರು ಪ್ರತ್ಯೇಕ ತಂಡಗಳಲ್ಲಿ ತೆರಳಿ ಅಲ್ಲಿನ ಡೇಟಾಗಳನ್ನು ತುಲನಾತ್ಮಕ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸರು ದಶಕಗಳ ಸಮಸ್ಯೆಗೆ ಕೊನೆಗೂ ಪರಿಹಾರೋಪಾಯ ಕಂಡು ಹಿಡಿಯಲು ಸರ್ಕಾರ ಹೆಜ್ಜೆ ಇರಿಸಿದೆ.

ಸಮಿತಿಯಲ್ಲಿ ಯಾರಿದ್ದಾರೆ?

ಅಧ್ಯಕ್ಷರು-ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ರಾಘವೇಂದ್ರ ಔರಾದ್‌ಕರ್, ಸದಸ್ಯರು-ಕೆಎಸ್‌ಆರ್‌ಪಿ ಎಡಿಜಿಪಿ ಕಮಲ್‌ಪಂತ್, ಸಿಐಡಿ ಎಡಿಜಿಪಿ ಸಿ.ಎಚ್. ಪ್ರತಾಪ್‌ರೆಡ್ಡಿ, ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್, ಸದಸ್ಯ ಕಾರ್ಯದರ್ಶಿ- ಹೆಡ್‌ಕ್ವಾರ್ಟರ್ ಐಜಿಪಿ ಡಾ.ಕೆ. ರಾಮಚಂದ್ರರಾವ್.

ಕೋಟ್...

ಪೊಲೀಸರ ಮೂಲ ವೇತನ, ಭತ್ಯೆಗಳ ಜತೆಗೆ ‘ರಿಸ್ಕ್ ಭತ್ಯೆ’ ಬೇಡಿಕೆ ಪ್ರಮುಖವಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳ ಮಾದರಿಗಳನ್ನು ಅಧ್ಯಯನ ಮಾಡಿ, ರಾಜ್ಯದ ಪೊಲೀಸರು ತೃಪ್ತಿಕರ ಭತ್ಯೆ ಸಹಿತ ವೇತನ ನೀಡುವಂತೆ ಶಿಫಾರಸು ಮಾಡುವುದು ಸಮಿತಿಯ ಆದ್ಯತೆ. ಈಗಾಗಲೇ ಆ ಕುರಿತಂತೆ ಪ್ರಾಥಮಿಕ ಚರ್ಚೆ ಆರಂಭವಾಗಿದೆ.

No comments:

Post a Comment