Saturday 9 July 2016

ರಾಜ್ಯದ ಮಕ್ಕಳು, ಯುವಕರಿಗೆ ಉಚಿತ ಆರೋಗ್ಯ ವಿಮೆ?



 ಬೆಂಗಳೂರು: ಎಳೆಯ ಮಕ್ಕಳೂ ಸೇರಿದಂತೆ 18 ವರ್ಷದೊಳಗಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಭಾಗ್ಯ ಜಾರಿಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅಂಗನವಾಡಿವರೆಗಿನ ವಯಸ್ಸಿನೊಳಗಿರುವ ಎಲ್ಲಾ ಮಕ್ಕಳು ಹಾಗೂ ಅಂಗನವಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ಜಾರಿಗೊಳಿಸುವ ಕುರಿತಂತೆ ಆರೋಗ್ಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ
ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.ಈ ಮಕ್ಕಳ ಆರೋಗ್ಯ ವಿಮೆಗೆ ನೋಂದಣಿ ಮಾಡಿಸಿಕೊಳ್ಳುವುದಷ್ಟೇ ಪೋಷಕರ ಕೆಲಸ. ವಿಮಾ ಕಂತನ್ನು ಸರ್ಕಾರವೇ ಪಾವತಿಸಲಿದೆ. ಚಿಕಿತ್ಸಾ ವೆಚ್ಚಕ್ಕೆ ಯಾವುದೇ ಮಿತಿ ಇರುವುದಿಲ್ಲ. ಸುಮಾರು 450 ರೀತಿಯ ಚಿಕಿತ್ಸೆಗಳು ವಿಮಾ ಯೋಜನೆ ವ್ಯಾಪ್ತಿಗೆ ಬರಲಿವೆ ಎಂದು ಆರೋಗ್ಯ ಇಲಾಖೆ ಮೂಲಗಳು 'ಉದಯವಾಣಿ'ಗೆ ತಿಳಿಸಿವೆ.

ಆರೋಗ್ಯ ವಿಮೆ ಯಾವ ರೀತಿ?:
ಮಕ್ಕಳು ಹುಟ್ಟಿದ ಕೂಡಲೇ ಜನನ ಪ್ರಮಾಣ ಪತ್ರದೊಂದಿಗೆ ಆರೋಗ್ಯ ವಿಮೆಗೆ ನೋಂದಣಿ ಮಾಡಿಸಿಕೊಳ್ಳಬೇಕು. ಇದು ಮೂರು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ. ಮಕ್ಕಳನ್ನು ಅಂಗನವಾಡಿಗೆ ಸೇರಿಸಿದ ಬಳಿಕ ಮತ್ತೂಮ್ಮೆ ನೋಂದಣಿ ಮಾಡಿಸಿಕೊಂಡರೆ ಅದು ಆರು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ. ಇದಾದ ಬಳಿಕ ಮಕ್ಕಳನ್ನು ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ಸೇರಿಸಿ ದಾಖಲೆಗಳೊಂದಿಗೆ ಮತ್ತೆ ವಿಮಾ ಯೋಜನೆಗೆ ನೋಂದಣಿ ಮಾಡಿಸಬೇಕು. ಈ ವಿಮೆಯ ಸಂಪೂರ್ಣ ಕಂತನ್ನು ಮಕ್ಕಳ ಹೆಸರಿನಲ್ಲಿ ಸರ್ಕಾರವೇ ಪಾವತಿಸುತ್ತದೆ.

ಆ ಮಕ್ಕಳು 18 ವರ್ಷ ತುಂಬುವವರೆಗೆ ಸರ್ಕಾರಿ ಅಥವಾ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಓದಿದರೆ ಅಲ್ಲಿಯವರೆಗೆ ಯಾವುದೇ ಕಾಯಿಲೆ, ಅಪಘಾತ ಮತ್ತಿತರೆ ಆರೋಗ್ಯ ಸಮಸ್ಯೆ ಎದುರಿಸಿದರೆ ಉಚಿತವಾಗಿ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಚಿಕಿತ್ಸಾ ವೆಚ್ಚಕ್ಕೆ ಯಾವುದೇ ಮಿತಿ ಇರುವುದಿಲ್ಲ. ಸಂಪೂರ್ಣ ವೆಚ್ಚವನ್ನು ವಿಮೆ ಮೂಲಕ ಭರಿಸಲಾಗುತ್ತದೆ.

ಈಗಾಗಲೇ ಬಿಪಿಎಲ್‌ ಕುಟುಂಬಗಳಿಗೆ ವಾಜಪೇಯಿ ಆರೋಗ್ಯ ಶ್ರೀ, ರೇಷನ್‌ ಕಾರ್ಡ್‌ ಹೊಂದಿರುವ ಬಿಪಿಎಲ್‌ಗಿಂತ ಮೇಲಿನ ಎಲ್ಲಾ ಕುಟುಂಬಗಳಿಗೆ ರಾಜೀವ್‌ಗಾಂಧಿ ಆರೋಗ್ಯ ಶ್ರೀ ಯೋಜನೆ ಜಾರಿಗೆ ತಂದಿರುವ ಸರ್ಕಾರ, ಅವುಗಳ ಮೂಲಕ ಸರ್ಕಾರಿ, ಖಾಸಗಿ ಸೇರಿದಂತೆ ನೂರಾರು ಆಸ್ಪತ್ರೆಗಳಲ್ಲಿ ಜನರಿಗೆ ಚಿಕಿತ್ಸೆ ಕೊಡಿಸುತ್ತಿದೆ. ಇವೇ ಆಸ್ಪತ್ರೆಗಳಲ್ಲಿ ಮಕ್ಕಳ ಆರೋಗ್ಯ ಶ್ರೀ ಯೋಜನೆಯಡಿ ಚಿಕಿತ್ಸೆ ಲಭ್ಯವಾಗಲಿದೆ ಎಂದು ಮೂಲಗಳು ಹೇಳಿವೆ.

ಮಕ್ಕಳಿಗೆ ಉಚಿತ ಶ್ರವಣ ಸಾಧನ:
ಮಕ್ಕಳು ಹುಟ್ಟುವಾಗಲೇ ಅವರ ಕಿವುಡು ಪತ್ತೆಯಾದರೆ ಸರ್ಕಾರದಿಂದಲೇ ಚಿಕಿತ್ಸೆ ಕಲ್ಪಿಸಿ ಅಗತ್ಯವಿರುವ ಶ್ರವಣ ಸಾಧನ ಒದಗಿಸಲು ಕೂಡ ತೀರ್ಮಾನಿಸಲಾಗಿದ್ದು, ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ಮಕ್ಕಳು ಜನಿಸಿದ ಕೂಡಲೇ ಅವರನ್ನು ಶ್ರವಣದೋಷ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದೋಷ ಕಂಡುಬಂದಲ್ಲಿ ಅಗತ್ಯ ಚಿಕಿತ್ಸೆ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಚಿಕಿತ್ಸೆ ಸಾಧ್ಯವಾಗುವುದಿಲ್ಲ, ಶ್ರವಣ ಸಾಧನ ಬಳಸಲೇಬೇಕು ಎಂದಾದಲ್ಲಿ ಅದನ್ನು ಸರ್ಕಾರದಿಂದಲೇ ಒದಗಿಸುವ ಕುರಿತು ಆರೋಗ್ಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ. ಮೂರು ವರ್ಷದವರೆಗಿನ ಮಕ್ಕಳಿಗೆ ಈ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ.

ಇದಲ್ಲದೆ, ತಾಯಿ ಮತ್ತು ಮಕ್ಕಳನ್ನು ಡೆಂ , ಚಿಕೂನ್‌ ಗುನ್ಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ಪಾರುಮಾಡಲು ಗರ್ಭಿಣಿಗೆ ನೀಡುವ ತಾಯಿ ಕಾರ್ಡ್‌ ಜತೆಗೆ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿಯಂತ್ರಣ ಮುಲಾಮುಗಳ ಕಿಟ್‌ ನೀಡುವ ಬಗ್ಗೆಯೂ ಯೋಚಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳ ಪ್ರಸ್ತಾವನೆಗಳನ್ನು ಸಿದ್ಧಪಡಿಸಿರುವ ಆರೋಗ್ಯ ಇಲಾಖೆ ಅದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಟ್ಟಿದ್ದು, 2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸುವಂತೆ ಕೋರಿದೆ. ಮುಖ್ಯಮಂತ್ರಿಗಳೂ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಬುಡಕಟ್ಟು ಜನರಿಗೆ "ಬೈಕ್‌ ಕ್ಲಿನಿಕ್‌'
ವಾಹನಗಳು ತಲುಪಲು ಸಾಧ್ಯವಾಗದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಕ್ಕೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಮೋಟರ್‌ ಬೈಕ್‌ ಕ್ಲಿನಿಕ್‌ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ರಾಜ್ಯದ 5 ಜಿಲ್ಲೆಗಳಲ್ಲಿ ಇಂತಹ ಪ್ರದೇಶಗಳಿದ್ದು, ಅಲ್ಲಿಗೆ ಆ್ಯಂಬುಲೆನ್ಸ್‌ ಸೇರಿದಂತೆ ಮೂರು ಮತ್ತು ನಾಲ್ಕು ಚಕ್ರದ ವಾಹನಗಳು ಹೋಗಲು ಸಾಧ್ಯವಿಲ್ಲ. ಅಂತಹ ಕಡೆಗಳಿಗೆ ಮೋಟರ್‌ ಬೈಕ್‌ ಕ್ಲಿನಿಕ್‌ ವ್ಯವಸ್ಥೆ ಮಾಡಲಾಗುತ್ತದೆ. ಆ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆ ಇರುವುದು ಗೊತ್ತಾದ ತಕ್ಷಣ ವೈದ್ಯರು ಮೋಟರ್‌ ಬೈಕ್‌ನಲ್ಲಿ ಅಗತ್ಯ ಚಿಕಿತ್ಸಾ ಕಿಟ್‌ಗಳೊಂದಿಗೆ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುವುದು ಇದರ ಉದ್ದೇಶವಾಗಿದೆ. ಈ ಯೋಜನೆ ಕೂಡ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

No comments:

Post a Comment