Tuesday 5 July 2016

‘ಶಿಕ್ಷಣ, ವಚನ ಸಾಹಿತ್ಯಕ್ಕೆ ಹಳಕಟ್ಟಿ ಸೇವೆ ಅನನ್ಯ’

ವಿಜಯಪುರ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ವಿಜಯಪುರ ಜಿಲ್ಲೆಗೆ ನೀಡಿದ ಸಾಹಿತ್ಯ, ಸಹಕಾರ, ಶೈಕ್ಷಣಿಕ, ಸಮಾಜ ಸೇವೆ ಅನನ್ಯವಾದುದು ಎಂದು ಸಾಹಿತಿ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ಡಾ.ಹಳಕಟ್ಟಿ ಅವರ ಸೇವೆಯನ್ನು ನಾವು ನಿತ್ಯ ಸ್ಮರಿಸಬೇಕು. ವಚನ ಸಾಹಿತ್ಯ ಸಂಪಾದನೆ,
ಶಿವಾನುಭವ ಪತ್ರಿಕೆ ಸ್ಥಾಪನೆ, ವಿವಿಧ ಶೈಕ್ಷಣಿಕ ಹಾಗೂ ಸಂಘ ಸಂಸ್ಥೆಗಳನ್ನು, ಆರ್ಥಿಕ ಸಂಸ್ಥೆಗಳನ್ನು ಸ್ಥಾಪಿಸಿ ತಮ್ಮ ಜೀವನವನ್ನೇ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಮೀಸಲಾಗಿರಿಸಿದ್ದರು ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ ಡಾ.ಹಳಕಟ್ಟಿ ಅವರನ್ನು ನೆನೆಯುವುದೇ ಭಾಗ್ಯ. ನಾಡಿನಲ್ಲಿ ವಿದ್ಯಾಸಿರಿ, ಅರ್ಥಸಿರಿ, ಸಾಹಿತ್ಯಸಿರಿ ಬೆಳೆಯಲು ಡಾ.ಹಳಕಟ್ಟಿ ಅಪಾರವಾಗಿ ಶ್ರಮಿಸಿದರು. ಅವರ ಕೊಡುಗೆಗಳನ್ನು, ಸಾಧನೆಗಳನ್ನು ಯುವ ಪೀಳಿಗೆ, ಮಕ್ಕಳಿಗೆ ತಿಳಿಸುವ ಕೆಲಸ ನಡೆಯಬೇಕಿದೆ ಎಂದರು.

ಚಂದ್ರಶೇಖರ ದೇವರೆಡ್ಡಿ, ಎಸ್.ಎಸ್.ಖಾದ್ರಿ ಇನಾಮದಾರ, ಮಹಾಂತೇಶ ಸಾಲಿಮಠ, ಸುವರ್ಣಾ ಹುರಕಡ್ಲಿ, ರಂಗನಾಥ ಅಕ್ಕಲಕೋಟ, ಎಸ್.ವೈ.ನಡುವಿನಕೇರಿ, ಬಿ.ಎಸ್.ಬ್ಯಾಳಿ, ಎಂ.ಕೆ.ಮನಗೊಂಡ, ಎಸ್.ಎ.ಕಿಣಗಿ, ಪ್ರೊ. ಯು.ಎನ್.ಕುಂಟೋಜಿ, ಶಾಂತಾ ಜೊಗೆನ್ನವರ, ಯುವರಾಜ ಚೋಳಕೆ, ರಾಜೇಂದ್ರ ಬಿರಾದಾರ, ಹುಸೇನ ಭಾಷಾ ಶೇಖ, ಮಹಾದೇವಿ ತೆಲಗಿ, ಛಾಯಾ ಮಸಿ, ಎಂ.ಆರ್.ಕಬಾಡೆ ಇದ್ದರು.

ಸುಮಂಗಲಾ ಪೂಜಾರಿ ಮಾತನಾಡಿದರು. ಕಸಾಪ ನಗರ ಘಟಕದ ಅಧ್ಯಕ್ಷೆ ಶ್ರೀದೇವಿ ಉತ್ಲಾಸರ ನಿರೂಪಿಸಿ, ಸುರೇಶ ಬಿಜಾಪುರ ವಂದಿಸಿದರು.

ಜಯಂತಿ:  ನಗರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಮಹಾ ವಿದ್ಯಾಲಯದಲ್ಲಿ ಡಾ.ಫ.ಗು.ಹಳಕಟ್ಟಿ ಜಯಂತಿ ಆಚರಿಸಲಾಯಿತು. ಹಳಕಟ್ಟಿ ಪ್ರತಿಮೆಗೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಪ್ರಾಚಾರ್ಯ ಡಾ.ವಿ.ಪಿ.ಹುಗ್ಗಿ, ಆಡಳಿತಾಧಿಕಾರಿ ಪಿ.ಬಿ.ಬಿರಾದಾರ, ಡಾ.ಎಂ.ಐ.ಸಕ್ರಿ ಉಪಸ್ಥಿತರಿದ್ದರು.


ಡಿವಿಜಿ ಸಾಮಾಜಿಕ ಚಿಂತನೆ ನಿರ್ಲಕ್ಷಿಸುತ್ತಿರುವ ಸಮಾಜ
ಬೆಂಗಳೂರು: ಡಿ.ವಿ.ಗುಂಡಪ್ಪನವರ ಕಾವ್ಯವನ್ನು ಶ್ಲಾಘಿಸಿದ ಸಮಾಜ, ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ವಿಮರ್ಶಕ ಮತ್ತು ‘ವಿಜಯವಾಣಿ’ ಸಂಪಾದಕೀಯ ಸಲಹೆಗಾರ ಡಾ. ಜಿ.ಬಿ. ಹರೀಶ್ ಬೇಸರ ವ್ಯಕ್ತಪಡಿಸಿದರು.

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಇತ್ತೀಚೆಗೆ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ‘ಡಿವಿಜಿ ಸಾಹಿತ್ಯ-ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳು’ ಕುರಿತು ಉಪನ್ಯಾಸ ನೀಡಿದರು.

ಡಿವಿಜಿ ಅವರು ಮೈಸೂರು ಮಹಾರಾಜರ ಸಂಸ್ಥಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಲು ಶ್ರಮಿಸಿದ್ದರು. ರಾಜರ ನೇತೃತ್ವದಲ್ಲೇ ಪ್ರಜಾಪ್ರಭುತ್ವ ನಡೆಸಬಹುದು ಎಂದು ನಂಬಿದ್ದರು. ಮೈಸೂರು, ತಿರುವಾಂಕೂರಿನಂಥ ಅಭಿವೃದ್ಧಿ ಹೊಂದಿದ ರಾಜ ಸಂಸ್ಥಾನಗಳನ್ನು ಸಂಪೂರ್ಣ ಒಂದೇ ರಾಜ್ಯವಾಗಿ ಉಳಿಸಿಕೊಳ್ಳಬೇಕು ಎಂದು ಸ್ವಾತಂತ್ರ್ಯ ದೊರೆತ ಸಮಯದಲ್ಲಿ ಸಲಹೆ ನೀಡಿದ್ದರು. ಪ್ರಜೆಗಳು ಮತದಾನಕ್ಕೆ ಸೀಮಿತವಾಗದೆ ಸಾಮಾಜಿಕ, ರಾಜಕೀಯ ಆಗುಹೋಗುಗಳಿಗೆ ಸ್ಪಂದಿಸುವ ‘ರಾಷ್ಟ್ರಕ’ರಾಗಬೇಕು ಎಂದಿದ್ದರು. ವಿದ್ಯಾರಣ್ಯರು, ಮಾರ್ಲೆ, ಪ್ಲೇಟೊ ಹಾಗೂ ಗೋಪಾಲಕೃಷ್ಣ ಗೋಖಲೆಯವರನ್ನು ಮಾದರಿ

ಯನ್ನಾಗಿಸಿಕೊಂಡಿದ್ದರು. ಮಠಗಳು, ರಾಜಮನೆತನಗಳು ಲೆಕ್ಕಪತ್ರ ಸಲ್ಲಿಸಬೇಕು ಎಂದು ತಿಳಿಸಿದ್ದರು ಎಂದು ಹೇಳಿದರು.

ಇಂಗ್ಲಿಷ್ ಬರಹಗಳ ಮೂಲಕವೂ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಡಿವಿಜಿಯವರ ಪುಸ್ತಕವನ್ನು ಡಾ.ಬಿ.ಆರ್. ಅಂಬೇಡ್ಕರ್ ಇಂಗ್ಲೆಂಡ್​ನಲ್ಲಿ ನಡೆದ 2ನೇ ದುಂಡುಮೇಜಿನ ಸಭೆಯಲ್ಲಿ ಉಲ್ಲೇಖಿಸಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಆನಂದ ಕುಮಾರಸ್ವಾಮಿ ಸಹ ದೇಶದ ಅಗ್ರಗಣ್ಯ ವ್ಯಕ್ತಿಗಳಲ್ಲಿ ಡಿವಿಜಿಯವರನ್ನು ಉಲ್ಲೇಖಿಸಿದ್ದರು. ಸಾಹಿತ್ಯ ಬರವಣಿಗೆ ಜತೆಗೆ ನಿಸ್ವಾರ್ಥ ಸಾಮಾಜಿಕ ಸೇವೆಯನ್ನೂ ಮುಂದುವರಿಸಿದ್ದರು. ಮಹಾರಾಷ್ಟ್ರ ಅಥವಾ ಬಂಗಾಳದಲ್ಲಾಗಿದ್ದರೆ ಬಾಲಗಂಗಾಧರ ತಿಲಕ್, ರವೀಂದ್ರನಾಥ ಠಾಗೋರರ ರೀತಿ ನೋಡಲಾಗುತ್ತಿದ್ದ ಡಿವಿಜಿಯವರನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂದರು.

No comments:

Post a Comment