Friday 8 July 2016

ಸಹಕಾರಿ ರಂಗದಲ್ಲಿ ರಾಜಕೀಯ ಬೇಡ


ಕೋಲಾರ: ‘ರಾಜಕಾರಣವೇ ಬೇರೆ ಸಹಕಾರಿ ರಂಗವೇ ಬೇರೆ. ಸಹಕಾರಿ ರಂಗದಲ್ಲಿ ರಾಜಕೀಯ ಬೆರೆಸುವುದು ಬೇಡ’ ಎಂದು ಇಪ್ಕೋ ಟೋಕಿಯೋ ವಿಮಾ ಕಂಪನಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ತಿಳಿಸಿದರು.ನಗರದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ಸ್ ಕೋ- ಆಪರೇಟೀವ್ ಲಿಮಿಟೆಡ್ ಮತ್ತು ಡಿಸಿಸಿ ಬ್ಯಾಂಕ್ ವತಿಯಿಂದ ಬುಧುವಾರ ನಡೆದ ಪ್ರಾಂತೀಯ ಸಹಕಾರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರೈತರಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡುವುದು ಎಷ್ಟು
ಮುಖ್ಯವೊ, ವಸೂಲಿ ಮಾಡುವುದು ಅಷ್ಟೇ ಮುಖ್ಯ, ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಹಕಾರದಲ್ಲಿ ನಂಬಿಕೆ ಉಳಿಯುವಂತಾಗಲು ಸಹಕಾರಿ ಸಂಸ್ಥೆಗಳು ನಂಬಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದರು.

‘ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್‌ಗೆ ಜೀವ ತುಂಬುವ ಮೂಲಕ ಕೃಷಿಕನ ಮನೆಬಾಗಿಲಿಗೆ ಸಾಲ ತಲುಪಿಸುವ ಕೆಲಸ ಮಾಡುತ್ತಿರುವ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಮತ್ತು ಅವರ ತಂಡಕ್ಕೆ ಶುಭ ಹಾರೈಸಿದರು.

ಇಪ್ಕೋ ಸಂಸ್ಥೆ ಡಿಸಿಸಿ ಬ್ಯಾಂಕ್ ಸಹಕಾರದಿಂದ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಮೂಲಕ ಗೊಬ್ಬರ ಮಾರಾಟ ನಡೆಸುತ್ತಿರುವುದು ಸ್ವಾಗತಾರ್ಹ. ಸಂಸ್ಥೆಯಿಂದ ಮಾರಾಟ ಮಾಡಲಾಗುತ್ತಿರುವ ಗೊಬ್ಬರಗಳ ಪ್ರತಿ ಚೀಲದ ಬೆಲೆ ₹ 50 ಕಡಿಮೆ ಮಾಡಲು ಚಿಂತನೆ ನಡೆಸಿದೆ’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮಾತನಾಡಿ, ‘ರೈತರಿಗೆ ಅನ್ಯಾಯ ಮಾಡಲು ಅಧಿಕಾರದಲ್ಲಿ ಇರಬಾರದು. ಕೇವಲ ಸಾಲ ನೀಡುವುದು, ಪಡಿತರ ಮಾರುವುದು ಮಾತ್ರ ಪ್ರಾಥಮಿಕ ಸಹಕಾರ ಸಂಘಗಳ ಕೆಲಸವಲ್ಲ. ಸಾಲ ಮರು ಪಾವತಿ ಮಾಡುವಂತೆ  ಎಸ್‍ಎಫ್‌ಸಿಎಸ್ ಆಡಳಿತ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಸಾಲ ಕೊಟ್ಟ ನಂತರ ರೈತರನ್ನು ಮರೆಯುತ್ತೀರಿ. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ವರೆಗೂ ಕೆಲಸ ಮಾಡಬೇಕು. ನಾನು ಸಂಘಗಳಿಗೆ ಭೇಟಿ ನೀಡಿದಾಗ ಸಿಬ್ಬಂದಿ ಕಚೇರಿಯಲ್ಲಿ ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು. ಬದ್ಧತೆಯಿಂದ ಕೆಲಸ ಮಾಡಿ ಜನರ ನಂಬಿಕೆ ಉಳಿಸಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದರು.

‘ನೀರಿನ ಅಭಾವ ಇರುವ ಬಗ್ಗೆ ಅರಿವಿಲ್ಲದೆ ಬಹುತೇಕ ರೈತರು ನೀಲಗಿರಿ ಬೆಳೆ ಬೆಳೆದಿದ್ದಾರೆ. ಈಗ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ  ಕೆಲ ರೈತರು ನೀಲಗಿರಿಯನ್ನು ತೆರವುಗೊಳಿಸಿದ್ದಾರೆ. ಅವರಿಗೆ ಬ್ಯಾಂಕ್‌ನಿಂದ ಸಾಲ ನೀಡಲಾಗಿದೆ. ಶ್ರೀಗಂಧ, ಮಾವು, ಬಾಳೆ ಬೆಳೆಗಳನ್ನು ಬೆಳೆದರು ಸಹ ಆರ್ಥಿಕವಾಗಿ ಲಾಭಗಳಿಸಬಹುದು’ ಎಂದು ಸಲಹೆ ನೀಡಿದರು.

ರೈತರು ನೀಲಗಿರಿ ಬೆಳೆಯ ಬದಲು ಪರ್ಯಾಯ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡಲಾಗುವುದು. ನೀಲಗಿರಿ ಬೆಳೆ ಬೆಳೆಯದಂತೆ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಅಧ್ಯಕ್ಷರು ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.

ಇಪ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಸಿ.ಎಸ್.ಪಾಟೀಲ್ ಮಾತನಾಡಿ, ‘ಇಪ್ಕೋ ಕಂಪನಿಯ ಕೀಟನಾಶಕಗಳ ಬಳಕೆ ಕುರಿತು ಉಪನ್ಯಾಸ ನೀಡಿದರು.
ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ನಿರ್ದೇಶಕ ಸೋಮಣ್ಣ, ಪ್ರಕಾಶ್, ಹನುಮೇಗೌಡ, ಎಂ.ವೆಂಕಟರೆಡ್ಡಿ, ಶಂಕರನಾರಾಯಣಗೌಡ, ಕೆ.ವಿ.ದಯಾನಂದ್, ಎಂ.ಕೃಷ್ಣೇಗೌಡ, ಎಚ್.ನರಸಿಂಹರೆಡ್ಡಿ, ಪಿ.ಶಿವಾರೆಡ್ಡಿ, ಜಿ.ಬಿ.ಶ್ರೀರಾಮರೆಡ್ಡಿ, ಹನುಮಂತರೆಡ್ಡಿ, ವಿ.ಅಯ್ಯಪ್ಪ, ಸಿ.ವೆಂಕಟರಮಣಪ್ಪ, ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿರ್ದೇಶಕ ಉಮಾಕಾಂತ್ಇಪ್ಕೋ ಕ್ಷೇತ್ರಾಧಿಕಾರಿ ಎಚ್.ಎಂ.ಸತೀಶ್‌ ಕುಮಾರ್ ಇತರರಿದ್ದರು.


No comments:

Post a Comment