Friday, 8 July 2016

ರಿಟೇಲ್‌ ವಹಿವಾಟಿಗೆ ಉತ್ತೇಜನ ಪ್ರಮುಖ ಸುಧಾರಣಾ ಕ್ರಮ

ಮಾದರಿ ಕಾಯ್ದೆ ಜಾರಿಗೆ ರಾಜ್ಯಗಳು ಹೆಚ್ಚು ಮುತುವರ್ಜಿ ವಹಿಸಿದರೆ ದೇಶದ ಚಿಲ್ಲರೆ ವ್ಯಾಪಾರ ಮತ್ತು ಮನರಂಜನೆ ಜಗತ್ತಿನ ವಹಿವಾಟು  ಖಂಡಿತವಾಗಿಯೂ ಹೊಸ ಎತ್ತರಕ್ಕೆ ಏರಲಿದೆ.  ‘ಗ್ರಾಹಕನೆ ದೊರೆ’ ಎನ್ನುವ ಮಾತು ಅಕ್ಷರಶಃ ಜಾರಿಗೆ ಬರಲಿದೆ.
ಅಂಗಡಿ–  ಮುಂಗಟ್ಟು, ಮಾಲ್ ಮತ್ತು ಸಿನಿಮಾ ಮಂದಿರಗಳು ವರ್ಷದ ಎಲ್ಲ ದಿನಗಳಲ್ಲೂ  ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಈಗ ಕೇಂದ್ರ ಸರ್ಕಾರ ಅನುಕೂಲ ಒದಗಿಸಿದೆ. ‘ಅಂಗಡಿ ಮತ್ತು ಮುಂಗಟ್ಟುಗಳ ಮಾದರಿ (ಉದ್ಯೋಗ
ನಿಯಂತ್ರಣ ಮತ್ತು ಸೇವಾ ಪರಿಸ್ಥಿತಿ) ಮಸೂದೆ- 2016’ಕ್ಕೆ ಸಚಿವ ಸಂಪುಟವು ತನ್ನ ಅನುಮೋದನೆ ನೀಡಿರುವುದರಿಂದ ದೇಶದಲ್ಲಿನ ರಿಟೇಲ್ ವಹಿವಾಟಿಗೆ ಹೊಸ ಆರಂಭ ಸಿಗಲಿದೆ.

ಆರ್ಥಿಕ ಪ್ರಗತಿಯ ಪ್ರಮುಖ ಹೆಜ್ಜೆಯೂ ಇದಾಗಿದೆ.  10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಮಳಿಗೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಾಗಿಲು ತೆರೆಯಲು ಸ್ವಾತಂತ್ರ್ಯ ನೀಡಿರುವುದು ವಹಿವಾಟು ಹೊಸ ಎತ್ತರಕ್ಕೆ ಏರಲು ನೆರವಾಗಲಿದೆ.

ರಿಟೇಲ್‌ ವಹಿವಾಟು ಕಾನೂನುಗಳು ದೇಶದಾದ್ಯಂತ ಏಕರೂಪದಲ್ಲಿ ಇರಲಿರುವುದರಿಂದ ರಿಟೇಲ್‌ ನಿಯಂತ್ರಣ ಕ್ರಮಗಳಲ್ಲಿ ಹೆಚ್ಚು ಸ್ಪಷ್ಟತೆ ಇರಲಿದೆ. ‘ಲೈಸನ್ಸ್ ರಾಜ್’ ವ್ಯವಸ್ಥೆಯ ಕಿರುಕುಳ ಮತ್ತು  ಭ್ರಷ್ಟಾಚಾರ ಕೊನೆಯಾಗಲಿದೆ ಎಂದೂ ನಿರೀಕ್ಷಿಸಬಹುದು.

ವಹಿವಾಟು ನೋಂದಣಿಗೆ ಆನ್‌ಲೈನ್‌  ಸರಳೀಕೃತ ನಿಯಮಗಳು ಹೊಸ ವಹಿವಾಟು ಆರಂಭಕ್ಕೆ ಹೆಚ್ಚು ಅನುಕೂಲಕರ ವಾತಾವರಣ ಕಲ್ಪಿಸಿಕೊಡಲಿವೆ. ಈ  ಮಾದರಿ  ಕಾಯ್ದೆ ಜಾರಿಗೆ ತರಲು ಸಂಸತ್ತಿನ ಅನುಮೋದನೆ ಬೇಕಾಗಿಲ್ಲ. ಇದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರವು ಇದನ್ನು ಕಡ್ಡಾಯವಾಗಿ ರಾಜ್ಯಗಳ ಮೇಲೆ ಹೇರುವಂತಿಲ್ಲ.

ಆದರೂ, ರಾಜ್ಯ ಸರ್ಕಾರಗಳು ಉದ್ಯಮದ ಹಿತದೃಷ್ಟಿ ಮತ್ತಿತರ ಕಾರಣಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ  ಸೂಕ್ತ ಬದಲಾವಣೆ ತಂದು ಜಾರಿಗೆ ತರಲು ಹೆಚ್ಚು ಉತ್ಸುಕತೆ ತೋರಬೇಕಾಗಿದೆ.  ಇದು ಜಾರಿಗೆ ಬಂದಲ್ಲಿ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ದಿನದ ಯಾವುದೇ ಹೊತ್ತಿನಲ್ಲಿ ಸರಕು ಖರೀದಿ,

ರೆಸ್ಟೊರೆಂಟ್‌ಗಳಲ್ಲಿ ಊಟ– ತಿಂಡಿ ಸೇವನೆ, ಸಿನಿಮಾ ಮಂದಿರಗಳಲ್ಲಿ ಮನರಂಜನೆ ಆಸ್ವಾದಿಸಬಹುದಾಗಿದೆ. ಹೀಗಾಗಿ ಗ್ರಾಹಕರ ಅನುಕೂಲತೆ ಮತ್ತು ವರ್ತಕರ ವಹಿವಾಟು ಹೆಚ್ಚಳ ದೃಷ್ಟಿಯಿಂದಲೂ ಇದೊಂದು  ಪ್ರಗತಿಪರ ನಿರ್ಧಾರವಾಗಿದೆ.

ದಿನದ 24 ಗಂಟೆಗಳ ಕಾಲ  ಮಾರುಕಟ್ಟೆ ತೆರೆದಿರಲು ಅವಕಾಶ ಮಾಡಿಕೊಟ್ಟಿರುವುದರಿಂದ ಹೊಸದಾಗಿ  ಹೆಚ್ಚಿನ ಉದ್ಯೋಗ ಅವಕಾಶಗಳು  ಸೃಷ್ಟಿಯಾಗಲಿವೆ. ಮಹಿಳೆಯರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಮಹಿಳೆಯರ ಬಗ್ಗೆ ಇದುವರೆಗೆ ಅನುಸರಿಸಿಕೊಂಡು ಬರಲಾಗುತ್ತಿದ್ದ ‘ರಕ್ಷಣಾತ್ಮಕ ತಾರತಮ್ಯ’ ನೀತಿಗೆ ಕೊನೆ ಹಾಡಲು ಸಾಧ್ಯವಾಗುತ್ತದೆ.

ಜತೆಗೆ, ಮಹಿಳೆಯರ ಉದ್ಯೋಗ ಅವಕಾಶಗಳೂ ಹೆಚ್ಚಲಿವೆ. ಮಹಿಳಾ ನೌಕರರಿಗೆ ಸೂಕ್ತ ಭದ್ರತೆ, ಸಾರಿಗೆ ಮತ್ತಿತರ ಸೌಕರ್ಯ ಒದಗಿಸುವುದನ್ನು ಕಡ್ಡಾಯ ಮಾಡಿರುವುದು ಮಹಿಳಾ ಉದ್ಯೋಗಿಗಳ ಆತಂಕವನ್ನೂ ದೂರ ಮಾಡಲಿದೆ. ಗ್ರಾಹಕ ಕೇಂದ್ರಿತ ಸೇವಾ ವಲಯಕ್ಕೆ ಆರೋಗ್ಯಕರ ವಾತಾವರಣ  ಕಲ್ಪಿಸಿಕೊಟ್ಟಿರುವುದರಿಂದ ಬೆಳವಣಿಗೆಯು ಇನ್ನಷ್ಟು ವೇಗ ಪಡೆಯಲಿದೆ.

ಅಭಿವೃದ್ಧಿ ಹೊಂದಿದ ದೇಶಗಳು ಇಂತಹ ನೀತಿ ಅಳವಡಿಸಿಕೊಂಡು ತಮ್ಮ ಆರ್ಥಿಕತೆಯನ್ನು ಯಶಸ್ವಿಯಾಗಿ ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿ
ರುವ ನಿದರ್ಶನ ನಮ್ಮೆದುರಿಗೆ ಇದೆ. ಹೆಚ್ಚು ಸಕ್ರಿಯವಾದ ರಿಟೇಲ್‌ ವ್ಯಾಪಾರವು ಆರ್ಥಿಕ ಚಟುವಟಿಕೆ ಹೆಚ್ಚಳಕ್ಕೆ ಉತ್ತೇಜನ ನೀಡಲಿದೆ.

ಇದು  ಗ್ರಾಹಕರು, ವರ್ತಕರು ಮತ್ತು ಸರ್ಕಾರಕ್ಕೂ ಲಾಭದಾಯಕವಾಗಿರಲಿದೆ. ಇಲ್ಲಿ ಕೆಲಸಗಾರರ ಹಿತಾಸಕ್ತಿ ರಕ್ಷಣೆಗೆ ವರ್ತಕರು, ಉದ್ಯಮಿಗಳು ಮತ್ತು ಸರ್ಕಾರ ಹೆಚ್ಚು ಗಮನ ನೀಡಬೇಕಾಗಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಕೆಲಸದ ಅವಧಿ, ಕಡ್ಡಾಯ ವಾರದ ರಜೆ ಮತ್ತಿತರ ವಿಷಯಗಳಲ್ಲಿ ಶೋಷಣೆಗೆ ಅವಕಾಶ ಇರದಂತೆಯೂ ಕಾರ್ಮಿಕ ಇಲಾಖೆಗಳು ಎಚ್ಚರ ವಹಿಸಬೇಕು. 

ಗ್ರಾಹಕರು ಮತ್ತು ವರ್ತಕರಲ್ಲಿ ಸುರಕ್ಷತೆ  ಭಾವನೆ ಮೂಡಿಸಲು,  ಹೊಸ ವಹಿವಾಟಿಗೆ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸಲು ಪೊಲೀಸ್‌ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿಯೂ ರಾಜ್ಯಗಳು ಕಾರ್ಯೋನ್ಮುಖವಾಗಬೇಕಾಗಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆ ಸುಧಾರಣೆಗೂ ಆದ್ಯತೆ ನೀಡಬೇಕಾಗಿದೆ. ರಾಜ್ಯ ಸರ್ಕಾರಗಳು ಹೊಸ ಕಾಯ್ದೆ ಅಳವಡಿಸಿಕೊಳ್ಳುವುದರ ಮೇಲೆಯೇ ಇದರ ಒಟ್ಟಾರೆ ಯಶಸ್ಸು ಆಧರಿಸಿರುವುದರಿಂದ  ರಾಜ್ಯಗಳ ಹೊಣೆಗಾರಿಕೆ ಹೆಚ್ಚಿದೆ. ಆರ್ಥಿಕ ಚಟುವಟಿಕೆಗೆ ವೇಗ ನೀಡಲು ಮನಸ್ಸು ಮಾಡಿರುವ ರಾಜ್ಯಗಳು ತಕ್ಷಣವೇ ಕಾರ್ಯಪ್ರವೃತ್ತವಾಗಲಿ

No comments:

Post a Comment