Friday 8 July 2016

ಜೆಎನ್‌ಯು ವಿವಾದ ಅಭಿವೃದ್ಧಿಗೆ ಮಾರಕ

ಬೆಂಗಳೂರು:  ‘ಭಾರತದಲ್ಲಿ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ಕಾರ್ಯಾಚರಣೆಗೆ ಎದುರಾಗುತ್ತಿರುವ ಎಡರು–ತೊಡರುಗಳು ಹಾಗೂ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದಂತಹ ವಿವಾದಗಳು ವಿದೇಶಿ ಬಂಡವಾಳ ಹೂಡಿಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ’ ಎಂದು ನೊಬಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಜೊಸೆಫ್‌ ಸ್ಟಿಗ್ಲಿಟ್ಸ್‌ ಅಭಿಪ್ರಾಯಪಟ್ಟರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ‘ಜಾಗತಿಕ ಆರ್ಥಿಕ ಅಸಮಾನತೆ
’ ಕುರಿತು ಬುಧವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಭಾರತ ತನ್ನ ‘ಇಮೇಜ್‌’ ಸರಿಪಡಿಸಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ಸುಲಭಸಾಧ್ಯ’ ಎಂದು ಸಲಹೆ ನೀಡಿದರು.

‘ದೇಶದ್ರೋಹದ ಆರೋಪದ ಮೇಲೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು ಹಾಗೂ ಎನ್‌ಜಿಒಗಳ ಮೇಲೆ ಮುಗಿಬೀಳುವಂತಹ ಘಟನೆಗಳಿಂದ ಸರ್ವಾಧಿಕಾರಿ ಧೋರಣೆ ಹೊಂದಿರುವ ಕೆಲವೇ ದೇಶಗಳ ಜತೆ ಭಾರತವೂ ಗುರುತಿಸಿಕೊಳ್ಳುವಂತೆ ಆಗಿದೆ. ಜಗತ್ತಿನಲ್ಲಿ ಈ ದೇಶದ ಕುರಿತು ತಪ್ಪು ಗ್ರಹಿಕೆಗೆ ಆ ಘಟನೆಗಳು ಕಾರಣವಾಗಿವೆ’ ಎಂದು ವಿಶ್ಲೇಷಿಸಿದರು.

ರಷ್ಯಾ, ಈಜಿಪ್ಟ್‌, ಟರ್ಕಿ ದೇಶಗಳಲ್ಲೂ ಎನ್‌ಜಿಒಗಳು ಭಾರತದಲ್ಲಿ ಎದುರಿಸಿದಂತಹ ಸಮಸ್ಯೆಯನ್ನೇ ಎದುರಿಸುತ್ತಿವೆ ಎಂದು ವಿಶ್ಲೇಷಿಸಿದರು. 
‘ಫೋರ್ಡ್‌ನಂತಹ ಪ್ರತಿಷ್ಠಾನ ಭಾರತದ ಅಭಿವೃದ್ಧಿಗೆ ದಶಕಗಳಿಂದ ತನ್ನ ಕಾಣಿಕೆ ನೀಡುತ್ತಿದೆ. ಅಂತಹ ಸ್ವಯಂಸೇವಾ ಸಂಸ್ಥೆಯ ಕಾರ್ಯಾಚರಣೆ
ಮೇಲೆ ಮಿತಿ ಹೇರುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಅಭಿಪ್ರಾಯಪಟ್ಟರು.

‘ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಭಾರತ ಇಂತಹ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ನರೇಗಾದಂತಹ ಸಮಾಜ ಕಲ್ಯಾಣ ಯೋಜನೆಗಳು ಅಸಮಾನತೆಯನ್ನು ತೊಡೆದು ಹಾಕಬಲ್ಲವು ಎಂದು ಅವರು ಹೇಳಿದರು.

ಮತ್ತೊಬ್ಬ ಅರ್ಥಶಾಸ್ತ್ರಜ್ಞ ಬ್ರಾಂಕೊ ಮಿಲಾನೊವಿಕ್‌, ‘ಜಗತ್ತನ್ನು ಈಗ ಬಂಡವಾಳಶಾಹಿ ವ್ಯವಸ್ಥೆಯೇ ಆಳುತ್ತಿದೆ. ಸಮಾಜವಾದ ಹಿಂದೆ ಸರಿದಿದೆ’ ಎಂದು ಅಭಿಪ್ರಾಯಪಟ್ಟರು.


No comments:

Post a Comment