Friday 8 July 2016

ನ್ಯಾಷನಲ್‌ ಕಾಲೇಜು–ಫ್ಲೋರಿಡಾ ವಿವಿ ಒಪ್ಪಂದ


ಬೆಂಗಳೂರು:  ಸಂಶೋಧನಾ ಕೇಂದ್ರದ ಸ್ಥಾನಮಾನ ನೀಡುವ ಸಂಬಂಧ ಬಸವನಗುಡಿಯ ನ್ಯಾಷನಲ್‌ ಕಾಲೇಜು ಹಾಗೂ ಅಮೆರಿಕದ ಫ್ಲೋರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಬುಧವಾರ ಒಪ್ಪಂದ ಮಾಡಿಕೊಂಡವು.ನ್ಯಾಷನಲ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷ ಡಾ.ಎ.ಎಚ್‌. ರಾಮ ರಾವ್‌ ಹಾಗೂ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಎಸ್‌. ಸೀತಾರಾಮ ಅಯ್ಯಂಗಾರ್‌ ಒಪ್ಪಂದಕ್ಕೆ ಸಹಿ ಹಾಕಿದರು.ಡಾ.ಎಸ್. ಸೀತಾರಾಮ ಅಯ್ಯಂಗಾರ್ ಮಾತನಾಡಿ, ‘ಕಾಲೇಜಿನಲ್ಲಿ ಕೇಂದ್ರ ಆರಂಭದಿಂದ ಆವಿಷ್ಕಾರ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ
ಹೆಚ್ಚಿನ ಉತ್ತೇಜನ ಸಿಗಲಿದೆ. ನ್ಯಾಷನಲ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡಲು ಅವಕಾಶ ದೊರಕಲಿದೆ. ಕಾಲೇಜಿಗೆ ಅನುದಾನವೂ ಸಿಗಲಿದೆ’ ಎಂದು ತಿಳಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಸ್‌. ಕಿರಣ್ ಕುಮಾರ್‌ ಮಾತನಾಡಿ, ‘ಈ ಒಪ್ಪಂದ ಆರಂಭದ ಹೆಜ್ಜೆ ಮಾತ್ರ. ಉಭಯ ಸಂಸ್ಥೆಗಳು ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಡಾ.ಕೆ.ಜೆ. ರಾವ್‌ ಮಾತನಾಡಿ, ‘ಪಿಯುಸಿಯಲ್ಲಿ ವಿಜ್ಞಾನ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳ ಒಲವು ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಶಿಕ್ಷಣದ ಕಡೆಗೆ ಇರುತ್ತದೆ.  ನಿಜವಾದ ಆಸಕ್ತಿಯಿಂದ ಪದವಿ ಕಲಿಕೆಗೆ ಬರುವವರು ಕಡಿಮೆ. ಇಂತಹ ಕೇಂದ್ರಗಳ ಸ್ಥಾಪನೆಯಿಂದ ಪದವಿಗಳ ಆಕರ್ಷಣೆ ಹೆಚ್ಚಲಿದೆ’ ಎಂದು ಪ್ರತಿಪಾದಿಸಿದರು.

No comments:

Post a Comment