Thursday 7 July 2016

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ

 ಇತ್ತೀಚೆಗಷ್ಟೇ ಮೊಟ್ಟ ಮೊದಲ ರೆಕ್ಕೆ ಸಹಿತ ಗಗನನೌಕೆಯನ್ನು ಪರೀಕ್ಷಿಸಿದ ಇಸ್ರೋ, ಇದೀಗ ಮತ್ತೊಂದು ಸಾಹಸಕ್ಕೆ ಸಜ್ಜಾಗಿದೆ. ಗೂಗಲ್ ನಿರ್ವಿುತ ಉಪಗ್ರಹ ಸೇರಿ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಕೌಂಟ್​ಡೌನ್ ಶುರುವಾಗಿದೆ. ಈ ಮೂಲಕ ಒಂದೇ ರಾಕೆಟ್​ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ದ್ವಿತೀಯ ಸ್ಥಾನದ ಹೆಗ್ಗಳಿಕೆ ಇಸ್ರೋ ಪಾಲಾಗಲಿದೆ.ಈಗಾಗಲೇ ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ
ಸಂಸ್ಥೆ(ಇಸ್ರೋ) ಮತ್ತೊಂದು ದಾಖಲೆ ನಿರ್ವಿುಸಲು ಮುಂದಾಗಿದೆ. ಜೂನ್ 22ರಂದು ಆಂಧ್ರಪ್ರದೇಶ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 20 ಉಪಗ್ರಹಗಳ ಉಡಾವಣೆ ಮಾಡಲಿದೆ. 2008ರಲ್ಲಿ ಒಂದೇ ರಾಕೆಟ್ ಮೂಲಕ 10 ಉಪಗ್ರಹಗಳ ಉಡಾವಣೆ ಮಾಡಿದ್ದ ಇಸ್ರೋ ಇದೀಗ ಮತ್ತೊಂದು ಹೆಜ್ಜೆ ಮುಂದಿರಿಸಿದೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್​ಎಲ್​ವಿ)-ಸಿ34 ಉಡಾಹಕದಿಂದ ಉಪಗ್ರಹಗಳ ಉಡಾವಣೆ ನಡೆಯಲಿದ್ದು, ಕಾಟೋಸ್ಯಾಟ್-2ಸಿ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಎರಡು ಉಪಗ್ರಹಗಳು, 17 ವಿದೇಶಿ ಮತ್ತು ವಾಣಿಜ್ಯ ಉಪಗ್ರಹಗಳ ಉಡಾವಣೆ ಮಾಡಲಿದೆ. ಇದರಲ್ಲಿ ಲಘು ಮತ್ತು ನ್ಯಾನೋ ಉಪಗ್ರಹಗಳೂ ಸೇರಿವೆ. ಉಪಗ್ರಹಗಳ ಒಟ್ಟು ತೂಕ 1,288 ಕೆಜಿ ಆಗಿದ್ದು, ಉಡಾವಣೆ 26 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.

ಮಾಹಿತಿ ಕ್ರಾಂತಿ ಸೃಷ್ಟಿಸಲಿದೆ ಕಾಟೋಸ್ಯಾಟ್-2ಸಿ

ಇಸ್ರೋ 2007ರಲ್ಲಿ ಉಡಾವಣೆ ಮಾಡಿರುವ ಕಾಟೋಸ್ಯಾಟ್-2ಎ ಗೆ ಹೋಲಿಸಿದರೆ ಕಾಟೋಸ್ಯಾಟ್ 2ಸಿ ಉಪಗ್ರಹ ಮಾಹಿತಿ ಕ್ರಾಂತಿಯನ್ನೇ ಸೃಷ್ಟಿಸಲಿದೆ. ಬಾಹ್ಯಾಕಾಶದಿಂದ ಭೂಮಿಯ ಮೇಲೆ ನಿಗಾವಹಿಸಲಿರುವ ಈ ಉಪಗ್ರಹ ಗಡಿಭಾಗ ಹಾಗೂ ಕರಾವಳಿ ಪ್ರದೇಶ, ಹವಾಮಾನ, ಕೃಷಿ, ಭೂ ನಕ್ಷೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಲಿದ್ದು, ನೆರೆರಾಷ್ಟ್ರಗಳಿಂದ ಕ್ಷಿಪಣಿ ಉಡಾವಣೆ ಮಾಡಿದರೂ ಇದು ಮಾಹಿತಿ ನೀಡಲಿದೆ. ಇದನ್ನು ಅಹಮದಾಬಾದ್​ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್(ಎಸ್​ಎಸಿ)ನಲ್ಲಿ ನಿರ್ವಿುಸಲಾಗಿದ್ದು, 690 ಕಿಲೋ ತೂಕವಿದೆ. ಇದು ಹೈ ರೆಸಲೂಷನ್​ನ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 0.65 ರೆಸಲೂಷನ್​ನ ಪ್ಯಾಂಕ್ರೋಮ್ಯಾಟಿಕ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ ಫೋಟೋ ಮಾತ್ರವಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಂಪ್ರೆಸ್ ಮಾಡಿ, ಶೇಖರಿಸಲು ಹಾಗೂ ರವಾನಿಸುವುದಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ಉಪಗ್ರಹಗಳಿಗೆ ಸರಿಸಮವಾಗಿರುವ ಕಣ್ಗಾವಲು ಉಪಗ್ರಹ ಉಡಾವಣೆ ಮಾಡಿದ ಕೀರ್ತಿ ಭಾರತದ್ದಾಗಲಿದೆ. ಚೀನಾ 2014ರಲ್ಲೇ 0.65 ರೆಸಲ್ಯೂಷನ್ ಕ್ಯಾಮೆರಾ ಹೊಂದಿರುವ ‘ಯೋಗಾನ್ 24’ ಉಪಗ್ರಹ ಉಡಾವಣೆ ಮಾಡಿತ್ತು. ಈಗಾಗಲೇ ಉಪಗ್ರಹವನ್ನು ಇಸ್ರೋ ಕೇಂದ್ರಕ್ಕೆ ಕಳುಹಿಸಲಾಗಿದ್ದು ಎಲ್ಲ ಪರೀಕ್ಷೆಗಳ ಬಳಿಕ ಉಡಾವಣೆಗೆ ಸಿದ್ಧತೆ ನಡೆಸಲಾಗಿದೆ.

ವಿದ್ಯಾರ್ಥಿಗಳೇ ನಿರ್ವಿುಸಿದ ಉಪಗ್ರಹ

ಕಾಟೋಸ್ಯಾಟ್-2ಸಿ ಜತೆಗೆ ವಿದ್ಯಾರ್ಥಿಗಳು ನಿರ್ವಿುಸಿರುವ ಎರಡು ನ್ಯಾನೋ ಉಪಗ್ರಹಗಳು ಉಡಾವಣೆಯಾಗಲಿವೆ. ಇದರಲ್ಲಿ ಚೆನ್ನೈನ ಸತ್ಯಭಾಮ ವಿವಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ವಿುಸಿರುವ ಸತ್ಯಭಾಮಸ್ಯಾಟ್ 1.6 ಕಿಲೋ ತೂಕದ್ದಾಗಿದೆ. ಇದು ಗಾಳಿ ಮತ್ತು ಭೂಮಿಯ ಮಾಲಿನ್ಯ ಪ್ರಮಾಣ ಅಧ್ಯಯನ ನಡೆಸಲಿದೆ. ಇನ್ನು ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಿರ್ವಿುಸಿರುವ ‘ಸ್ವಯಂ’ ಕೂಡಾ ಉಡಾವಣೆಯಾಗಲಿದ್ದು, ಒಂದು ಕಿಲೋ ತೂಕ ಹೊಂದಿದೆ. ಇದು ಹವ್ಯಾಸಿ ರೇಡಿಯೋ ಸ್ಟೇಷನ್​ಗಳಿಗೆ ಮೆಸೇಜಿಂಗ್ ಸರ್ವೀಸ್ ಒದಗಿಸಲಿದೆ. ಇದೇ ಮೊದಲ ಬಾರಿ ದೇಶದಲ್ಲಿ ವಿದ್ಯಾರ್ಥಿಗಳು ನಿರ್ವಿುಸಿರುವ ಉಪಗ್ರಹಗಳನ್ನು ಉಡಾಯಿಸಲಾಗುತ್ತಿದೆ.

ರಷ್ಯಾ ಹೆಸರಲ್ಲಿದೆ ದಾಖಲೆ

ಒಂದೇ ರಾಕೆಟ್​ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿದ ದಾಖಲೆ ರಷ್ಯಾ ಹೆಸರಲ್ಲಿದೆ. ರಷ್ಯಾದ ಡ್ನೆಪರ್ ಸಿಲೋ ರಾಕೆಟ್ ಮೂಲಕ 2014ರ ಜೂನ್ 19 ರಂದು 33 ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು 2013ರ ನವೆಂಬರ್​ನಲ್ಲಿ 32 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದರಲ್ಲಿ 5 ಕಿಲೋದಿಂದ ಹಿಡಿದು 100 ಕಿಲೋಗ್ರಾಂವರೆಗೆ ತೂಕವಿರುವ ಉಪಗ್ರಹಗಳಿದ್ದವು.

ವಿದೇಶಿ ಉಪಗ್ರಹಗಳ ಸಾಥ್

ಸ್ವದೇಶಿ ನಿರ್ವಿುತ ಮೂರು ಉಪಗ್ರಹಗಳ ಹೊರತಾದಂತೆ ಇಸ್ರೋ ಅಮೆರಿಕ, ಕೆನಡಾ, ಜರ್ಮನಿ, ಇಂಡೋನೇಷ್ಯಾದ ಮೈಕ್ರೋ ಉಪಗ್ರಹಗಳ ಉಡಾವಣೆಯನ್ನೂ ಮಾಡಲಿದೆ. ಇಂಡೋನೇಷ್ಯಾದ ಎಲ್​ಎಪಿಎಎನ್ ಎ3 ಆಹಾರ ಸಂಪನ್ಮೂಲ ಮತ್ತು ಪರಿಸರ ಮೇಲ್ವಿಚಾರಣೆಗೆ ಸಂಬಂಧಿಸಿದ ಉಪಗ್ರಹವಾಗಿದೆ. ಜರ್ಮನಿಯ ಬಿಐಆರ್​ಒಎಸ್ ಅನ್ನು ಅಧಿಕ ತಾಪಮಾನದ ಘಟನೆಗಳನ್ನು ಉದಾಹರಣೆಗೆ ಕಾಡ್ಗಿಚ್ಚು ಮೊದಲಾದವುಗಳನ್ನು ಪತ್ತೆಹಚ್ಚಲು ಅಭಿವೃದ್ಧಿಪಡಿಸಲಾಗಿದೆ, ಕೆನಡಾದ ಎಂ3ಎಂಸ್ಯಾಟ್ ಸಮುದ್ರಮಾರ್ಗದ ವಹಿವಾಟಿಗೆ ಅನುಕೂಲವಾಗಿರಲಿದ್ದು, ತೆರೆಗಳ ಅಪ್ಪಳಿಸುವಿಕೆ ಮುಂತಾದವುಗಳ ಬಗ್ಗೆ ಮಾಹಿತಿ ರವಾನಿಸಲಿದೆ. ಅಮೆರಿಕದ ಸ್ಕೈಸ್ಯಾಟ್ ಜೆನ್2-1 ಮತ್ತು ಜರ್ಮನಿಯ ಎಂವಿವಿಯನ್ನು ಉಡಾಯಿಸಲಾಗುತ್ತದೆ.

ಇಲಾನ್ ಮಸ್ಕ್ ಕಂಪನಿಗೆ ಪೈಪೋಟಿ

ಇತ್ತೀಚೆಗೆ ಪೋನ್ ಕಂಪನಿಗಳು, ಇಂಟರ್​ನೆಟ್ ಪೂರೈಕೆದಾರ ಸಂಸ್ಥೆಗಳು, ವಿಮಾನಯಾನ ಸಂಸ್ಥೆಗಳು ಮತ್ತು ಕಾರು ತಯಾರಕ ಸೇರಿದಂತೆ ಹೆಚ್ಚಿನ ಉದ್ಯಮಗಳಲ್ಲಿ ಸಂವಹನ ಸಾಧನವಾಗಿ ಉಪಗ್ರಹಗಳನ್ನು ಬಳಸಲಾಗುತ್ತಿದೆ. ಇದರಿಂದ ಉಪಗ್ರಹ ಉಡಾವಣೆ ಕೂಡಾ ಉದ್ಯಮವಾಗಿ ಬೆಳೆಯುತ್ತಿದೆ. ಇದನ್ನೇ ಆಧರಿಸಿಕೊಂಡು ಇಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಉಪಗ್ರಹ ಉಡಾವಣಾ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಆದರೆ ಇಸ್ರೋ ಇಂತಹ ಸಂಸ್ಥೆಗಳಿಗೂ ಸ್ಪರ್ಧೆಯೊಡ್ಡುತ್ತಿದೆ. ವಾಣಿಜ್ಯ ಉಪಗ್ರಹಗಳ ಉಡಾವಣೆಯನ್ನೂ ಮಾಡುತ್ತಿದೆ. ಕಡಿಮೆ ಮೊತ್ತಕ್ಕೂ ಉಡಾವಣೆ ಮಾಡಲಾಗುತ್ತಿದೆ.

ಸ್ಟಾರ್ಟಪ್ ಸಾಧನೆ

ಇದೇ ಮೊದಲ ಬಾರಿಗೆ ಭಾರತೀಯ ಸ್ಟಾರ್ಟಪ್ ಕಂಪನಿ ಅರ್ಥ್2ಆರ್ಬಿಟ್(ಉಚ್ಟಠಿಜ2ಣ್ಟಚಿಜಿಠಿ) ವಿದೇಶಿ ಕಂಪನಿಗಳ ಪರವಾಗಿ ವಾಣಿಜ್ಯ ಉಪಗ್ರಹ ಉಡಾವಣೆ ವಿಷಯವಾಗಿ ಇಸ್ರೋದ ವಾಣಿಜ್ಯ ವಿಭಾಗ ಅಂತರಿಕ್ಷ್ ಕಾರ್ಪೆರೇಷನ್ ಜೊತೆ ಒಪ್ಪಂದದ ಮಾತುಕತೆ ನಡೆಸಿತ್ತು.

No comments:

Post a Comment