Wednesday 6 July 2016

ಪಾವತಿ ಬ್ಯಾಂಕ್‌ ಬರ್ತಿದೆ, ದಾರಿ ಬಿಡಿ!

 
 ರಿಸರ್ವ್‌ ಬ್ಯಾಂಕ್‌ ಈಗಾಗಲೇ 11 ಪಾವತಿ ಬ್ಯಾಂಕುಗಳಿಗೆ ಲೈಸನ್ಸ್‌ ಕೊಟ್ಟಿದೆ. ಇನ್ನೊಂದು ವರ್ಷದೊಳಗೆ ಇವು ಆರಂಭವಾಗುತ್ತವೆ. ಆದರೆ, ಲೈಸನ್ಸ್‌ ಪಡೆದ 2 ಕಂಪೆನಿಗಳು ನಷ್ಟದ ಭೀತಿಯಿಂದ ಈಗಾಗಲೇ ಹಿಂದೆ ಸರಿದಿವೆ. ಹಾಗಿದ್ದರೆ ಪೇಮೆಂಟ್‌ ಬ್ಯಾಂಕುಗಳು ನಿಜಕ್ಕೂ ಜನರಿಗೆ ಅನುಕೂಲಕರವಾಗಿ ಪರಿಣಮಿಸಿ, ತಾವೂ ಲಾಭ ಮಾಡಿಕೊಂಡು, ಅಸ್ತಿತ್ವ ಉಳಿಸಿಕೊಳ್ಳಲಿವೆಯೇ? ಒಂದಷ್ಟು ಒಳನೋಟಗಳು ಇಲ್ಲಿವೆ.

ನಮ್ಮ ದೇಶದಲ್ಲಿ ಇನ್ನೊಂದು ವರ್ಷದಲ್ಲಿ ಪಾವತಿ ಬ್ಯಾಂಕುಗಳ ಶಕೆ ಆರಂಭವಾಗಲಿದೆ. ಭಾರತಕ್ಕೆ ಇದೊಂದು ನೂತನ ಪ್ರಯೋಗ. ಈ ನಿಟ್ಟಿನಲ್ಲಿ 11 ಸಂಸ್ಥೆಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕು ಈಗಾಗಲೇ ಪರವಾನಗಿ ಕೊಟ್ಟಿದೆ. ಈ ಸಂಸ್ಥೆಗಳು ಆದಿತ್ಯ ಬಿರ್ಲಾ ನೋವ, ಏರ್‌ಟೆಲ್‌, ಎಂ.ಕಾಮರ್ಸ್‌, ಚೋಳಮಂಡಲಂ, ಎಸ್‌.ಫಿನ್‌.ಪೇಟೆಕ್‌, ಎನ್‌.ಎಸ್‌.ಡಿ.ಎಲ್‌, ರಿಲಯನ್ಸ್‌, ಸನ್‌ ಫಾರ್ಮ, ದಿಲೀಪ್‌ ಸಂ Ì, ಟೆಕ್‌ ಮಹೀಂದ್ರಾ ಮತ್ತು ಎಂ.ಪೇಸಾ. ಇವೆಲ್ಲ ಖಾಸಗಿ ವಲಯದಲ್ಲಿವೆ. ಸರಕಾರಿ ವಲಯದ ಅಂಚೆ ಇಲಾಖೆ ಬಹಳ ವಿರೋಧಗಳ ನಡುವೆಯೂ ಅಂಗೀಕಾರ ಪಡೆದ ಇನ್ನೊಂದು ಸಂಸ್ಥೆ. ಈ ಸಂಸ್ಥೆಗಳಿಗೆ ಕೆಳಗಿನ ನಿಯಮಗಳ ಪ್ರಕಾರ ಬ್ಯಾಂಕಿಂಗ್‌ ರೆಗ್ಯುಲೇಷನ್‌ ಕಾನೂನು, ನಿಯಮ 22ರ ಪ್ರಕಾರ ಪರವಾನಗಿ ನೀಡಲಾಗಿದೆ.

1. ಈ ಸಂಸ್ಥೆಗಳು ಆರಂಭವಾದ ಐದು ವರ್ಷಗಳಲ್ಲಿ ಕನಿಷ್ಠ 100 ಕೋಟಿ ರೂ. ಬಂಡವಾಳ ಹೂಡಬೇಕು. ಪ್ರವರ್ತಕರ‌ ಬಂಡವಾಳ ಶೇ.40 ಇರಬೇಕು. ಇತರ ಷೇರುದಾರರು ಶೇ.10ವರೆಗೆ ಹೂಡಬಹುದು. ಅನಿವಾಸಿ ಭಾರತೀಯರಿಗೆ ಈ ಮಿತಿ ಶೇ.5.

2. ಈ ಬ್ಯಾಂಕುಗಳು ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ಕೊಡುವಂತಿಲ್ಲ. ಕೇವಲ ಡಿಮಾಂಡ್‌ ಅಥವಾ ಉಳಿತಾಯ ಖಾತೆಗಳನ್ನು 1,00,000 ರೂ.ನ ಮಿತಿಯೊಳಗೆ (ಇದು ಡಿಐಸಿಜಿಸಿ ವಿಮೆಯ ಗರಿಷ್ಠ ಮೊತ್ತ) ತೆರೆಯಬಹುದು.

3. ಇವುಗಳ ಮುಖ್ಯ ಗಮನ ಹಣ ವರ್ಗಾವಣೆ ಹಾಗೂ ವ್ಯವಹಾರ ಪಾವತಿಗಳು. ತಮ್ಮ ಹೆಸರಿನಲ್ಲಿ ಪಾವತಿ ಬ್ಯಾಂಕು ಎಂದು ನಮೂದಿಸಬೇಕು.

4. ಮೂಲತಃ ಉಚ್ಚ ತಾಂತ್ರಿಕತೆ, ಕೋರ್‌ ಬ್ಯಾಂಕಿನೊಂದಿಗೆ ಕಾರ್ಯಾರಂಭ ಮಾಡಿ ಪಾವತಿಯ ಎಲ್ಲಾ ಪದ್ಧತಿಗಳನ್ನು ಪರಿಚಯಿಸಬೇಕು. ಅಂತ್ಯದಿಂದ ಅಂತ್ಯ ((End to end) ಸೌಲಭ್ಯಗಳಿಗೆ ಗಮನ ನೀಡಬೇಕು. ಶೇ.25 ಶಾಖೆಗಳು ಗ್ರಾಮೀಣ (ಜನಸಂಖ್ಯೆ 10,000ದಿಂದ ಕೆಳಗೆ) ಪ್ರದೇಶದಲ್ಲಿರಬೇಕು.

5. ತಮ್ಮ ಠೇವಣಿಯ ಶೇ.75ನ್ನು ಸರಕಾರಿ ಬಾಂಡ್‌ಗಳಲ್ಲಿ ಎಸ್‌ಎಲ್‌ಆರ್‌ ಆಗಿ ತೊಡಗಿಸಬೇಕು. ಸಿಆರ್‌ಆರ್‌ ಅನಂತರ ಉಳಿದ ಹಣವನ್ನು ಬ್ಯಾಂಕು ನಿರಖು ಠೇವಣಿಯಲ್ಲಿಯೂ ತೊಡಗಿಸಿಕೊಳ್ಳಬಹುದು. ವಿಮೆ, ಮ್ಯೂಚುವೆಲ್‌ ಫ‌ಂಡ್‌, ಇತರ ಬ್ಯಾಂಕುಗಳ ಗೃಹಸಾಲ ಇತ್ಯಾದಿಗಳನ್ನು ತಮ್ಮ ಗ್ರಾಹಕರಿಗೆ ನೇರವಾಗಿ ಒದಗಿಸಬಹುದು.

6. ಚಿಲ್ಲರೆ ಮಾರುಕಟ್ಟೆ ಆಧುನೀಕರಣಕ್ಕೆ ಆದ್ಯತೆ. ವಲಸೆ ಕಾರ್ಮಿಕರು, ಇತರ ಕಾರ್ಮಿಕರು, ಸಣ್ಣ ಉದ್ದಿಮೆದಾರರು, ಕೃಷಿಕರು ಇತ್ಯಾದಿ ಉಪೇಕ್ಷಿತ ಜನಾಂಗಕ್ಕೆ ಸೇವೆ ನೀಡಲು ಆದ್ಯತೆ.

7. ಎಲ್ಲ ಬ್ಯಾಂಕುಗಳ ತಮ್ಮ ಪ್ರತ್ಯೇಕ ಟ್ರೆಜರಿ, ಹಾನಿ ನಿರ್ವಹಣಾ ವ್ಯವಸ್ಥೆ, ಗ್ರಾಹಕರ ದೂರು ನಿರ್ವಹಣೆ ವಿಭಾಗಗಳನ್ನು ಹೊಂದಿರಬೇಕು. ಇತರ ಬ್ಯಾಂಕುಗಳೊಂದಿಗೆ ಅಥವಾ ಸೇವಾನಿರತ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಳ್ಳಬಹುದು.

8. ಹತ್ತು ವರ್ಷದ ಸಮರ್ಪಕ ಸೇವೆಯ ನಂತರ ಸಾರ್ವಕಾಲಿಕ ಬ್ಯಾಂಕಾಗಿ ಪರಿವರ್ತನೆಗೆ ಅರ್ಹತೆ ಬರುತ್ತದೆ. ಈ ಬ್ಯಾಂಕುಗಳು ಎಟಿಎಂ, ಡೆಬಿಟ್‌ ಕಾರ್ಡ್‌ ನೀಡಬಹುದು.

ಇಂದು ಭಾರತದಲ್ಲಿ ಬ್ಯಾಂಕುಗಳು ತಮ್ಮ ಒಟ್ಟು ವಹಿವಾಟಿನ ಶೇ.80ಕ್ಕಿಂತಲೂ ಹೆಚ್ಚಿನ ವಹಿವಾಟನ್ನು ಪಾವತಿ ಮುಖಾಂತರ ಮಾಡುತ್ತಿವೆ. ಆದರೆ ಅದರಿಂದ ಬರುವ ಆದಾಯವು ಒಟ್ಟು ಆದಾಯದ ಶೇ.5ಕ್ಕಿಂತಲೂ ಕಡಿಮೆ. ಎಟಿಎಂ, ಪಿಒಎಸ್‌ (point of sales), ಮೊಬೈಲ್‌ ಬ್ಯಾಂಕಿಂಗ್‌, ಅಂತರ್ಜಾಲ ಬ್ಯಾಂಕಿಂಗ್‌, ಡಿಜಿಟಲ್‌ ಬ್ಯಾಂಕಿಂಗ್‌ಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶೀಘ್ರಗತಿಯಲ್ಲಿ ಅತೀ ಕಡಿಮೆ ವೆಚ್ಚದ ಪಾವತಿಗೆ ಇಲ್ಲಿ ಆದ್ಯತೆ.
ಒಂದು ಚೆಕ್‌ ಪಾವತಿಯ ಶೇ.50 ಖರ್ಚಿನಲ್ಲಿ ಒಂದು ಎಟಿಎಂ ಪಾವತಿ ಮಾಡಬಹುದು. ಅಂತರ್ಜಾಲ ಪಾವತಿಗೆ ತಗಲುವ ವೆಚ್ಚ ಕೇವಲ ಶೇ.4. ಡಿಜಿಟಲ್‌ ಮತ್ತು ಮೊಬೈಲ್‌ ಪಾವತಿಗೆ ಶೇ.2. ತಗಲುವ ಸಮಯ ಕೆಲ ನಿಮಿಷಗಳಿಂದ ಹೆಚ್ಚೆಂದರೆ 2 ಗಂಟೆ. ಗಾತ್ರ ಹೆಚ್ಚಿದಷ್ಟೂ ಹೆಚ್ಚುವ ತೇಲು ನಿಧಿ (Float fund)ಬ್ಯಾಂಕುಗಳ ಆದಾಯಕ್ಕೆ ಮೂಲಾಧಾರ. ದೇಶದ ಶೇ.80ಕ್ಕಿಂತಲೂ ಹೆಚ್ಚಿನ ಜನರಲ್ಲಿ ಇಂದು ಮೊಬೈಲ್‌ ಇರುವುದು ಈ ಎಲ್ಲ ಪಾವತಿಗಳನ್ನು ಸುಲಭವಾಗಿಸಲಿದೆ. ಪಾವತಿಗಳನ್ನು ಮಾಡುವುದು ಪ್ರತಿಯೊಬ್ಬನಿಗೂ ಅನಿವಾರ್ಯ. ಗ್ರಾಹಕರ ಸಂಖ್ಯೆ ಹೆಚ್ಚಿದಷ್ಟೂ ಪಾವತಿಗಳೂ ಹೆಚ್ಚುವುದರಿಂದ ಇವುಗಳ ಆಳ (potentia) ಅಗಾಧ. ಇದಕ್ಕಾಗಿಯೇ ಆದಿತ್ಯ ಬಿರ್ಲಾ ಸಂಸ್ಥೆ ಐಡಿಯಾದೊಂದಿಗೆ, ಮೆ.ಪೇಸ್ಸಾ ವೋಡಾಘೋನಿನೊಂದಿಗೆ, ರಿಲಯನ್ಸ್‌ ಸ್ಟೇಟ್‌ ಬ್ಯಾಂಕಿನೊಂದಿಗೆ, ಸನ್‌ ಫಾರ್ಮ ಪೇಟಿಎಂನೊಂದಿಗೆ, ಎನ್‌.ಎಸ್‌.ಡಿ.ಎಲ್‌ ಐಡಿಬಿಐ ಬ್ಯಾಂಕಿನೊಂದಿಗೆ ಸಹಯೋಗ ಮಾಡುತ್ತಿವೆ. 25 ಕೋಟಿ ಗ್ರಾಹಕರನ್ನು ಹೊಂದಿರುವ ಏರ್‌ಟೆಲ್‌ ಹಾಗೂ 2900 ಶಾಖೆಗಳೊಂದಿಗೆ ಮಾರ್ಚ್‌ ಒಳಗೆ ಕಾರ್ಯಾರಂಭಿಸುವ 23.8 ಕೋಟಿ ಗ್ರಾಹಕರನ್ನು ಹೊಂದಿರುವ ಅಂಚೆ ಇಲಾಖೆ ಏಕಾಂಗಿಯಾಗಿ ಮುನ್ನುಗ್ಗುತ್ತಿದೆ.

ಈಗಾಗಲೇ ಹೇಳುವಂತೆ ಪಾವತಿ ವ್ಯವಸ್ಥೆ ಲಾಭದಾಯಕವಲ್ಲ. ಲಾಭವಿರುವುದು ತೇಲು ನಿಧಿಯಲ್ಲಿ, ವಿಮೆಯಲ್ಲಿ, ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಮತ್ತು ಇತರ ಸೇವೆಯಲ್ಲಿ. ಈ ಸಂಸ್ಥೆಗಳು ರಿಸರ್ವ್‌ ಬ್ಯಾಂಕಿಗೆ ನೀಡಿದ ಕಾರ್ಯಸಾಧ್ಯತೆ (Viability) ದಾಖಲೆಯ ಪ್ರಕಾರ ಲಾಭ ಆರಂಭವಾಗಲು 3ರಿಂದ 5 ವರ್ಷಗಳೇ ಹಿಡಿಯಬಹುದು. ಈ ಕಾರಣಕ್ಕಾಗಿಯೇ ಚೋಳಮಂಡಲಂ, ದಿಲೀಪ್‌ ಸಾಂ Ì ಮತ್ತು ಟೆಕ್‌ ಮಹಿಂದ್ರಾ, ತಮ್ಮ ಪರವಾನಗಿಯನ್ನು ಹಿಂತಿರುಗಿಸಿವೆ. ಇನ್ನೆರಡು ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸುತ್ತಿವೆ ಎಂದು ಸುದ್ದಿ. ಕಾರಣ, ತಮ್ಮ ಈಗಿನ ವಹಿವಾಟಿಗೆ ಇದರಿಂದ ಆರ್ಥಿಕ ಮುಗ್ಗಟ್ಟು ಬರಬಹುದು ಎಂಬುದು.

ಈ ಬ್ಯಾಂಕುಗಳಿಂದ ದೇಶಕ್ಕೆ ಏನು ಲಾಭ?
1. ದೇಶದಲ್ಲಿ ಶೇ.30ಕ್ಕಿಂತಲೂ ಹೆಚ್ಚಿನ ಪಾವತಿ ಈಗಲೂ ನಗದು ರೂಪದಲ್ಲಿ ನಡೆಯುತ್ತಿವೆ. ಇದು ಜಿಡಿಪಿಯ ಶೇ.13. ಮುಂದುವರಿದ ದೇಶಗಳಲ್ಲಿ ಇದರ ಪರಿಮಾಣ ಶೇ.7ರಿಂದ 8. ಅಂದರೆ ಜಿಡಿಪಿಯ ಶೇ.2.5ರಿಂದ 8.

2. ಭಾರತ ಒಂದೇ ಇಂದು ಜಗತ್ತಿನ ಶೇ.13 ನೋಟುಗಳನ್ನು ಮುದ್ರಿಸುತ್ತಿದೆ. ಇದಕ್ಕೆ ತಗಲುವ ವೆಚ್ಚ 8,000 ಕೋಟಿ ರೂ.ಗಿಂತಲೂ ಹೆಚ್ಚು.

3. ಎಲ್ಲ ಪಾವತಿಗಳೂ ಮುಖ್ಯವಾಹಿನಿಗೆ ಬಂದರೆ ಕಪ್ಪು ಹಣ ಮತ್ತು ಖೋಟಾ ನೋಟುಗಳ ಹಾವಳಿ ಬಹಳಷ್ಟು ಕಡಿಮೆಯಾಗುತ್ತದೆ.

4. ಭಾರತದಲ್ಲಿ ವಿಮೆ ಮತ್ತು ಮ್ಯೂಚುವಲ್‌ ಫ‌ಂಡ್‌ ಪ್ರಮಾಣ ಒಂದಂಕಿಯಲ್ಲೇ ಇದೆ. ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಇದನ್ನು ಶೇ.25ರಿಂದ 30ಕ್ಕೆ ಏರಿಸುವುದು ಅಗತ್ಯ.

5. ಶೇ.20ಕ್ಕಿಂತಲೂ ಹೆಚ್ಚಿನ ಹಣ ಭಾರತದಲ್ಲಿ ಇನ್ನೂ ಕಪಾಟಿನಲ್ಲಿದೆ. ಈ ಹಣವನ್ನು ಬ್ಯಾಂಕಿಂಗ್‌ ವ್ಯವಸ್ಥೆಗೆ ತಂದು ಉತ್ಪಾದಕ ರಂಗದಲ್ಲಿ ತೊಡಗಿಸಿಕೊಂಡರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಪಾವತಿ ಬ್ಯಾಂಕುಗಳೂಂದಿಗೆ ಈಗಾಗಲೇ ಆಲೋಚಿಸಿರುವ ಸಣ್ಣ ಬ್ಯಾಂಕುಗಳು ಈ ಕೆಲಸ ಮಾಡಲು ಪೂರಕವಾಗಲಿವೆ.

6. ಆರ್ಥಿಕ ಸೇರ್ಪಡೆಯನ್ನು ಈಗಿರುವ ಬ್ಯಾಂಕುಗಳು ತಮ್ಮ ಇತರ ಸೇವೆಗಳೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಅನುಮಾನಾಸ್ಪದ. ಅದಕ್ಕಾಗಿ ಈ ಪೂರಕ ವ್ಯವಸ್ಥೆ.

ಈ ವ್ಯವಸ್ಥೆ ಜಯಶಾಲಿಯಾಗಬೇಕಾದರೆ ಕೆಲವು ವಿಷಯಗಳು ಪ್ರಾಮುಖ್ಯವಾಗುತ್ತವೆ. ಇದರಲ್ಲಿ ಮುಖ್ಯ ಪಾತ್ರ ನ್ಯೂನತೆರಹಿತ ತಾಂತ್ರಿಕತೆ ಮತ್ತು ಸಂಪೂರ್ಣ ತಿಳಿವಳಿಕೆಯುಳ್ಳ ಗ್ರಾಹಕ ಸಂವೇದಿ ಸಿಬ್ಬಂದಿ ವರ್ಗ. ಈ ವ್ಯವಸ್ಥೆಯ ಅನುಕೂಲತೆಯನ್ನು ತೀರಾ ಕೆಳಮಟ್ಟದ ಜನಗಳಿಗೆ ತಿಳಿ ಹೇಳಿ ಅವರನ್ನು ವ್ಯವಸ್ಥೆಗೆ ಒಪ್ಪಿಸುವುದು ಒಂದು ಪಂಥಾಹ್ವಾನ. ಸರಕಾರ, ರಿಸರ್ವ್‌ ಬ್ಯಾಂಕು ಸಹ ಈ ಪ್ರಕ್ರಿಯೆಗೆ ಕಾನೂನು ಮಾರ್ಪಾಡು ಮತ್ತು ಅದರ ಅಧಿಕಾರಿಗಳ ಮುಖಾಂತರ ಸಮಯೋಚಿತ ಬಾಹ್ಯ ಬೆಂಬಲ ನೀಡಿದರೆ ಮಾತ್ರ ಇದು ಸಾಧ್ಯ. ಎಲ್ಲ ಅಂದುಕೊಂಡಂತೆ ನಡೆದರೆ ಈ ಪ್ರಯೋಗ ಒಂದು ಆರ್ಥಿಕ ಕ್ರಾಂತಿಗೆ ಸಾಕ್ಷಿಯಾಗಬಹುದು.

ಪೇಮೆಂಟ್‌ ಬ್ಯಾಂಕ್‌ಗಳ ತಾಂತ್ರಿಕತೆ
1. ಇ.ಕಾಮರ್ಸ್‌ ವೇದಿಕೆಯ ಮೂಲಕ ಮೊಬೈಲ್‌ ವ್ಯಾಲೆಟ್‌. ರೀಚಾರ್ಜ್‌, ಡಿಜಿಟಲ್‌ ಇತ್ಯಾದಿ ಪಾವತಿ ಪದ್ಧತಿ.
2. ಸ್ಮಾರ್ಟ್‌ ಪೋನ್‌ ಇಲ್ಲದೆಯೂ ಹಣ ವರ್ಗಾವಣೆ ಯಾ ಪಾವತಿ ಮಾಡಲು ಕ್ಯೂ.ಆರ್‌. ಕಾರ್ಡ್‌ಗಳು.
3. ಫಿನ್‌. ಚೆಕ್‌. ಕಂಪನಿಗಳೊಂದಿಗೆ ಬ್ಯಾಂಕಿನಿಂದ ನೇರ ಹಣ ವರ್ಗಾವಣೆಗೆ ಕ್ರೋಡೀಕೃತ ಮತ್ತು ಮಾಸಿದ ((Obfuscat) ಸಂದೇಶ ಪದ್ಧತಿ.
4ಎಸ್‌.ಎಫ್.ಸಿ. ವ್ಯವಸ್ಥೆಯಲ್ಲಿ ವಾಸ್ತವಿಕ ಮೇಘಾಧಾರಿತ (Virtual card in cloud) ಸಂಪರ್ಕ ರಹಿತ ಕಾರ್ಡು ಮತ್ತು ಮೊಬೈಲ್‌ ಪಾವತಿ. ಆರ್ಥಿಕ ಗೌಪ್ಯತೆ ಕಾಪಾಡುವ ಪ್ರತ್ಯೇಕ ಗುರುತಿನ ಪಾಸ್‌ವರ್ಡ್‌ ವ್ಯವಸ್ಥೆ.

ಈ ಪೂರ್ತಿ ವ್ಯವಹಾರಗಳು 2005ರ ಬ್ಯಾಂಕಿಂಗ್‌ ಒಂಬಡ್ಸ್‌ ಮನ್‌ ವ್ಯವಸ್ಥೆಯೊಳಗೆ ಬರುತ್ತವೆ. ಅಂದರೆ ಗ್ರಾಹಕನಿಗೆ ಕೊರತೆ ನಿವಾರಣೆ ವೇದಿಕೆಯೂ ಲಭ್ಯವಿದೆ. ಆದರೆ, ಈ ಬ್ಯಾಂಕುಗಳು ಈಗಿನ ಬ್ಯಾಂಕುಗಳಿಗೆ ಪೈಪೋಟಿ ನೀಡುವುದರಿಂದ, ಅವುಗಳ ಪ್ರತಿಕ್ರಿಯೆಯನ್ನು ಕಾದು ನೋಡಬೇಕಾಗಿದೆ.

No comments:

Post a Comment