Wednesday, 6 July 2016

ವಿಜಯ್‌ ಮಲ್ಯಗೆ 4,000 ಕೋಟಿ ರೂ. ಮನ್ನಾ ಭಾಗ್ಯ?

ಹೊಸದಿಲ್ಲಿ: ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ಸಾಲ ಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಗೆ, ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಶೀಘ್ರವೇ ಬರೋಬ್ಬರಿ 4,000 ಕೋಟಿ ರೂ. ಮೊತ್ತದ ಬಡ್ಡಿ ಮನ್ನಾ ಭಾಗ್ಯ ಕಲ್ಪಿಸುವ ಸಾಧ್ಯತೆ ಇದೆ. ಮಲ್ಯ ಅವರು ತಾವು ಮಾಡಿದ ಸಾಲದ ಮೊತ್ತ ಮತ್ತು ಅಲ್ಪ ಪ್ರಮಾಣದ ದಂಡವನ್ನು ಕಟ್ಟಿದರೆ, ಅವರೊಂದಿಗಿನ ಸಾಲ ವ್ಯವಹಾರವನ್ನು ಚುಕ್ತಾ ಮಾಡಲು ನಾವು ಸಿದ್ಧ ಎಂದು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಮಲ್ಯ ಅವರು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳಿಂದ 4,000 ಕೋಟಿ ರೂ.ಗೆ ಹೆಚ್ಚಿನ ಸಾಲ ಪಡೆದಿದ್ದಾರೆ. 2014ರಲ್ಲೇ ಈ ಸಾಲ ಮತ್ತು ಅದರ ಮೇಲಿನ ಬಡ್ಡಿಯ ಒಟ್ಟು ಮೊತ್ತ 6,963 ಕೋಟಿ ರೂ. ತಲುಪಿತ್ತು. ಕೆಲ ಸಮಯದ ಹಿಂದೆ ಬ್ಯಾಂಕ್‌ಗಳ ಒಕ್ಕೂಟ ಈ ಮೊತ್ತ 9,000 ಕೋಟಿ ರೂ. ತಲುಪಿದೆ ಎಂದಿದ್ದವು.
ಈ ನಡುವೆ ಸಾಲ ಮರುಪಾವತಿ ಮಾಡಲಾಗದೇ ವಿದೇಶಕ್ಕೆ ಪರಾರಿಯಾಗಿದ್ದ ಮಲ್ಯ ಒಮ್ಮೆಗೆ 4,400 ಕೋಟಿ ರೂ.ಗಳನ್ನು ಪಾವತಿ ಮಾಡುವ ಮೂಲಕ ಒನ್‌ಟೈಮ್‌ ಸೆಟ್ಲಮೆಂಟ್‌ ಮಾಡಿಕೊಳ್ಳುವ ಆಫ‌ರ್‌ ಅನ್ನು ಬ್ಯಾಂಕ್‌ಗಳಿಗೆ ನೀಡಿದ್ದರು. ಆದರೆ ಇದನ್ನು ಬ್ಯಾಂಕ್‌ಗಳು ತಿರಸ್ಕರಿಸಿದ್ದವು. ಆದರೆ ಇದೀಗ ಈ ಮೊತ್ತವನ್ನು ಮಲ್ಯ ಅವರು 4,850 ಕೋಟಿ ರೂ.ಗೆ ಏರಿಸಿದ್ದಾರೆ. ಮೂಲ ಹಣದ ಜೊತೆಗೆ 150 ಕೋಟಿ ರೂ. ಭಡ್ತಿ ಮತ್ತು ಪ್ರಕರಣ ಸಂಬಂಧ ಬ್ಯಾಂಕ್‌ಗಳು ಮಾಡಿದ್ದ ಕಾನೂನು ಸಲಹೆಯ ವೆಚ್ಚವನ್ನು ಪಾವತಿಸುವ ಪ್ರಸ್ತಾವವನ್ನು ಬ್ಯಾಂಕ್‌ಗಳ ಮುಂದೆ ಮಲ್ಯ ಇಟ್ಟಿದ್ದಾರೆ. ಅಂದರೆ ಅಂದಾಜು 9,000 ಕೋಟಿ ರೂ.ಸಾಲದ ಪೈಕಿ 5,000 ಕೋಟಿ ರೂ.ಪಾವತಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಮಲ್ಯ ಅವರ ಯಾವುದೇ ಆಸ್ತಿಗಳೂ ಇತ್ತೀಚಿನ ದಿನಗಳಲ್ಲಿ ಹರಾಜೇ ಆಗದ ಕಾರಣ, ಪ್ರಕರಣವನ್ನು ಇನ್ನಷ್ಟು ದಿನ ಎಳೆಯುವ ಬದಲು, ಒನ್‌ಟೈಮ್‌ ಸೆಟ್ಲಮೆಂಟ್‌ಗೆ ಬ್ಯಾಂಕ್‌ಗಳು ಕೂಡಾ ಒಲವು ವ್ಯಕ್ತಪಡಿಸಿವೆ ಎನ್ನಲಾಗಿದೆ. ಹೀಗಾಗಿಯೇ ಮಲ್ಯ ಅವರ ಪ್ರಸ್ತಾಪದ ಕುರಿತು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಲು ಅರುಂಧತಿ ನಿರಾಕರಿಸಿದ್ದಾರೆ.

No comments:

Post a Comment