Wednesday, 6 July 2016

'ಗಂಗಾ ಕಲ್ಯಾಣ' ರೂವಾರಿ ಜಿಗಜಿಣಗಿ

ವಿಜಯಪುರ: ಮೂರೂವರೆ ದಶಕಗಳಿಂದ ರಾಜಕಾರಣದಲ್ಲಿರುವ, ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ 'ಅಜಾತ ಶತ್ರು' ರಮೇಶ ಚಂದಪ್ಪ ಜಿಗಜಿಣಗಿ ಅವರಿಗೆ ಕೊನೆಗೂ ಕೇಂದ್ರ ಮಂತ್ರಿ ಸ್ಥಾನ ಒಲಿದು ಬಂದಿದೆ. ತುರ್ತು ಪರಿಸ್ಥಿತಿ ಸಮಯದಲ್ಲಿ ವಿದ್ಯಾರ್ಥಿ ನಾಯಕರಾಗಿ ಹೋರಾಡಿ, ರಾಜಕೀಯ ಪ್ರವೇಶ ಮಾಡಿದ ಜಿಗಜಿಣಗಿ ಅವರು ಚಿಕ್ಕೋಡಿ ಲೋಕಸಭೆ ಮೀಸಲು ಕ್ಷೇತ್ರದಿಂದ ಸತತ ಮೂರು ಬಾರಿ ಹಾಗೂ ವಿಜಯಪುರ ಮೀಸಲು ಕ್ಷೇತ್ರದಿಂದ ಸತತ ಎರಡನೇ ಬಾರಿ ಸಂಸದರಾಗಿದ್ದಾರೆ.1983ರಲ್ಲಿ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾದ ಜಿಗಜಿಣಗಿ ಆನಂತರ
ತಿರುಗಿ ನೋಡಿದವರಲ್ಲ. ಶಾಸಕರಾದ ಕೂಡಲೇ ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಅಬಕಾರಿ, ಕ್ರೀಡಾ ಖಾತೆ ಜತೆಗೆ ಗೃಹ ಖಾತೆಯನ್ನೂ ನಿರ್ವಹಿಸಿ ದ್ದರು. 1984ರಲ್ಲಿ ಪುನಾರಾಯ್ಕೆಯಾಗಿ ಸಮಾಜ ಕಲ್ಯಾಣ ಸಚಿವರಾದರು. ಆಗ ಅವರು ಜಾರಿಗೊಳಿಸಿದ್ದ 'ಗಂಗಾ ಕಲ್ಯಾಣ' ಯೋಜನೆ ಇನ್ನೂ ಜಾರಿಯಲ್ಲಿದೆ.
1989ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಜಿಗಜಿಣಗಿ, 1994ರಲ್ಲಿ ಮತ್ತೆ ಗೆದ್ದು ಎಚ್‌.ಡಿ. ದೇವೇಗೌಡ, ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಕಂದಾಯ, ಸಮಾಜ ಕಲ್ಯಾಣ ಮಂತ್ರಿಯಾಗಿದ್ದರು. ಆ ವೇಳೆ ಅವರು ಅನುಷ್ಠಾನಗೊಳಿಸಿದ 'ಸ್ಮಶಾನ ಭೂಮಿ' ಯೋಜನೆ ಜನಪ್ರಿಯವಾಗಿತ್ತು. ಆರಂಭದಿಂದಲೂ ರಾಮಕೃಷ್ಣ ಹೆಗಡೆ ಅವರ ಬೆಂಬಲಿಗರಾಗಿದ್ದ ಜಿಗಜಿಣಗಿ 1999ರಲ್ಲಿ ಹೆಗಡೆ ನೇತೃತ್ವದ ಲೋಕಜನಶಕ್ತಿ ಸೇರಿ, ಚಿಕ್ಕೋಡಿಯಿಂದ ಲೋಕಸಭೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದರು.No comments:

Post a Comment