Tuesday 5 July 2016

ಪಠ್ಯಕ್ಕೆ ಅಳವಡಿಕೆಯಾದ ಮಾನವ ಹಕ್ಕು

 ಬೆಂಗಳೂರು: ಮಾನವ ಹಕ್ಕುಗಳ ಆಯೋಗದ ಎರಡು ವರ್ಷದ ಪ್ರಯತ್ನದ ಫಲವಾಗಿ ಮಾನವ ಹಕ್ಕುಗಳ ವಿಷಯವನ್ನು ಶಿಕ್ಷಣ ಇಲಾಖೆ ಪಠ್ಯಕ್ಕೆ ಅಳವಡಿಸಿದೆ ಎಂದು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ತಿಳಿಸಿದ್ದಾರೆ.ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಟ್ರಸ್ಟ್ ಗಾಂಧಿಭವನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಮಾನವ ಹಕ್ಕುಗಳ ಮಾಹಿತಿ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಇಲ್ಲ. ಇದಕ್ಕೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ
ಕಾರಣವಾಗಿದ್ದು, ಪಠ್ಯದಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಲು ಆಯೋಗ ಎರಡು ವರ್ಷಗಳಿಂದ ನಿರಂತರ ಪ್ರಯತ್ನ ನಡೆಸಿತು. ಇದೀಗ ಪಠ್ಯಕ್ಕೆ ಹಕ್ಕುಗಳ ಶಿಕ್ಷಣ ಅಳವಡಿಕೆಯಾಗಿರುವುದು ಖುಷಿ ತಂದಿದೆ ಎಂದು ಹೇಳಿದರು.

ತಂದೆಯೊಬ್ಬ 15 ವರ್ಷಗಳ ಕಾಲ ಮಗಳ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣವೊಂದು ಈಚೆಗೆ ಕೇಳಿಬಂದಿದ್ದು, ಮಗಳಿಗೆ 4 ಬಾರಿ ಗರ್ಭಪಾತವನ್ನೂ ಮಾಡಿಸಲಾಗಿತ್ತು ಎಂಬ ವಿಷಯ ಇಡೀ ಸಮಾಜವೇ ತಲೆತಗ್ಗಿಸುವಂಥದ್ದು. ಇಂಥ ದೂರುಗಳು ಬಂದಾಗ ಆಯೋಗ ರಕ್ಷಣೆಗೆ ನಿಲ್ಲಲಿದೆ ಎಂದರು.

ಹಟ್ಟಿ ಚಿನ್ನದ ಗಣಿ ನಿಗಮಗದ ಅಧ್ಯಕ್ಷೆ ರಾಣಿ ಸತೀಶ್ ಮಾತನಾಡಿ, ಹೊಸಕೋಟೆ ಬಳಿ ಮಕ್ಕಳು ಕಳ್ಳತನ ಮಾಡಿದರು ಎಂಬ ಕಾರಣಕ್ಕೆ ತಾಲಿಬಾನ್​ಗಳು ನಾಚುವಂತೆ ಹಲ್ಲೆ ಮಾಡಿದ್ದಾರೆ. ಅನೇಕ ಕಡೆ ಮಹಿಳೆಯರನ್ನು ಇಂದಿಗೂ ತುಚ್ಛವಾಗಿ ಕಾಣುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡುವಲ್ಲಿ ಪಾಲಕರು ಎಡವುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಟ್ರಸ್ಟ್​ನ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ, ಕಾರ್ಯಾಧ್ಯಕ್ಷ ಲಯನ್ ವಿ. ರೇಣುಕುಮಾರ್, ಪ್ರಧಾನ ಕಾರ್ಯದರ್ಶಿ ಚೂಡಾಮಣಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

39 ಸಾವಿರ ಕೇಸ್​ಇತ್ಯರ್ಥ

ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ದಾಖಲಾಗಿದ್ದ 53 ಸಾವಿರ ಪ್ರಕರಣಗಳ ಪೈಕಿ 39 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ

ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ತಿಳಿಸಿದರು. ಈ ಹಿಂದೆ ಕೇವಲ ಪೊಲೀಸರ ದುವರ್ತನೆ ಆರೋಪಗಳ ಬಗ್ಗೆ ದೂರುಗಳು ಸಲ್ಲಿಕೆಯಾಗುತ್ತಿತ್ತು. ಇದೀಗ ಮೂಲಸೌಕರ್ಯ, ಹಕ್ಕುಗಳ ಅರಿವು, ಘನತ್ಯಾಜ್ಯ ನಿರ್ವಹಣೆ, ಕೆರೆಗಳಿಗೆ ಸೇರುವ ಕಲುಷಿತ ನೀರು, ಆರೋಗ್ಯ ಹಕ್ಕುಗಳ ಸಂಬಂಧ ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

No comments:

Post a Comment