Tuesday 5 July 2016

ಗೋಮಾತೆಯ ರಕ್ಷಣೆಗೆ ನೋಡಲ್ ಅಧಿಕಾರಿ ನೇಮಿಸಿದ ಹರಿಯಾಣ

ಗುರ್ಗಾಂವ್: ಗೋ ಹತ್ಯೆ ಮತ್ತು ಗೋವುಗಳ ಕಳ್ಳಸಾಗಣೆಯ ಮೇಲೆ ನಿಗಾವಹಿಸಲು ಮತ್ತು ತಡೆಯಲು ಹರಿಯಾಣ ಸರ್ಕಾರ ಡಿಐಜಿ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದೆ.

ಹರಿಯಾಣ ಸರ್ಕಾರ ಗೋಸಂರಕ್ಷಣೆಗಾಗಿ ಹರಿಯಾಣ ಗೋವಂಶ ಸಂರಕ್ಷಣ ಮತ್ತು ಗೋಸಂವರ್ಧನ ಕಾಯ್ದೆಯನ್ನು ಜಾರಿಗೆ ತಂದಿತ್ತು. ಹರಿಯಾಣದ ಎಲ್ಲಾ ಜಿಲ್ಲೆಗಳಲ್ಲಿ ಗೋವುಗಳ ಕಳ್ಳಸಾಗಣೆ ಮತ್ತು ಗೋಹತ್ಯೆಯ ಮೇಲೆ ನಿಗಾವಹಿಸಲು ಗೋ ರಕ್ಷಾ ಆಯೋಗ ಸುಮಾರು 300 ತಂಡಗಳನ್ನು ರಚಿಸಿದೆ. ಈ ತಂಡದಲ್ಲಿ 60 ನಾನ್-ಗೆಜೆಟೆಡ್ ಅಧಿಕಾರಿಗಳು ಮತ್ತು 220 ಪೊಲೀಸರು ಸೇರಿದಂತೆ ಸ್ಥಳೀಯರು ಇದ್ದು, ಈ ತಂಡಗಳ ಉಸ್ತುವಾರಿಯನ್ನು ಭಾರತಿ ಅರೋರಾ ಅವರು ವಹಿಸಿಕೊಳ್ಳಲಿದ್ದಾರೆ.

ಹರಿಯಾಣ ಸರ್ಕಾರ 24 ಗಂಟೆಗಳ ಹೆಲ್ಪ್ ಲೈನ್ ಸಹ ಸ್ಥಾಪಿಸಿದ್ದು, ಗೋವುಗಳ ಕಳ್ಳಸಾಗಣೆ ಮತ್ತು ಗೋಹತ್ಯೆ ಕುರಿತು ಮಾಹಿತಿ ನೀಡಲು ಜನತೆಗೆ ಸೂಚಿಸಿದೆ. ಜನವರಿ 1 ರಿಂದ ಏಪ್ರಿಲ್ 30ರವರೆಗೆ ಪಂಜಾಬ್ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ 85 ಪ್ರಕರಣಗಳನ್ನು ದಾಖಲಿಸಲಾಗಿದ್ದು, 191 ಗೋವುಗಳನ್ನು ರಕ್ಷಿಸಲಾಗಿದೆ ಮತ್ತು 446 ಜನರನ್ನು ಬಂಧಿಸಲಾಗಿದೆ.

ರಂಜಾನ್ ಸಂದರ್ಭವಾಗಿರುವುದರಿಂದ ಗೋವುಗಳ ಹತ್ಯೆ ಮತ್ತು ಕಳ್ಳಸಾಗಣೆ ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ಗೋರಕ್ಷಾ ದಳದ ಸದಸ್ಯರಿಗೆ ರಾತ್ರಿ ವೇಳೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಗೋ ರಕ್ಷಾ ಆಯೋಗದ ಅಧ್ಯಕ್ಷ ಭಾನಿ ರಾಮ್ ಮಂಗಲ್ ತಿಳಿಸಿದ್ದಾರೆ.

No comments:

Post a Comment