Thursday 7 July 2016

ಮಾಧ್ಯಮಲೋಕಕ್ಕೆ ಮೌಲ್ಯಗಳು ಬೇಕಿಲ್ಲವೆ?


 ಪ್ರತಿವರ್ಷದಂತೆ ಮೊನ್ನೆ ಜುಲೈ 1 ರಂದು ಪತ್ರಿಕಾ ದಿನಾಚರಣೆ ಒಂದು ಸಂಪ್ರದಾಯವೆಂಬಂತೆ ನಡೆದುಹೋಯಿತು. ಮಾಧ್ಯಮ ಲೋಕದ ಪ್ರತಿಷ್ಠಿತ ಪ್ರಶಸ್ತಿಗಳಾದ ಟೀಯೆಸ್ಸಾರ್, ಮೊಹರೆ ಹಣಮಂತರಾಯ, ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳ ಪ್ರದಾನವೂ ಆಯಿತು. ಅಲ್ಲಿಗೆ ಪತ್ರಿಕಾದಿನಾಚರಣೆಗೆ ಪೂರ್ಣವಿರಾಮ ದೊರಕಿದಂತೆಯೇ! ಅದರಾಚೆಗೂ ಹೋಗಿ ಮಾಧ್ಯಮ ಲೋಕ ಇಂದು ಎದುರಿಸುತ್ತಿರುವ ಸನ್ನಿವೇಶ, ಸವಾಲುಗಳ ಕುರಿತು ಚರ್ಚೆಯಾಗಲಿ,
ವಿಚಾರಸಂಕಿರಣವಾಗಲಿ ಏರ್ಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಇಂತಹದನ್ನೆಲ್ಲ ಗಮನಿಸಬೇಕಾದ ಮಾಧ್ಯಮ ಅಕಾಡೆಮಿ ಕೂಡ ಈ ಕುರಿತು ತಲೆಕೆಡಿಸಿಕೊಂಡಿಲ್ಲ.

ಪತ್ರಿಕಾ ದಿನಾಚರಣೆಯಂದು ಸಾಧಾರಣವಾಗಿ ಎಲ್ಲೆಡೆ ಕನ್ನಡದ ಮೊಟ್ಟಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಹೊತ್ತಿರುವ ‘ಮಂಗಳೂರು ಸಮಾಚಾರ’ ಎಂಬ ಪತ್ರಿಕೆಯನ್ನು ಆರಂಭಿಸಿದ ಜರ್ಮನ್‌ಪಾದ್ರಿ ರೇ. ಹರ್ಮನ್ ಮೊಗ್ಲಿಂಗ್ (ಜುಲೈ 1, 1843) ಅವರನ್ನು ನೆನಪಿಸಿಕೊಳ್ಳಲಾಗುತ್ತದೆಯೇ ಹೊರತು ಕನ್ನಡ ಪತ್ರಿಕೋದ್ಯಮಕ್ಕೆ ಕಿರೀಟಪ್ರಾಯರಾಗಿದ್ದ ಡಿವಿಜಿ, ತಿರುಮಲೆ ತಾತಾಚಾರ್ಯ ಶರ್ಮ, ಮೊಹರೆ ಹಣಮಂತರಾಯ, ಬೆ.ಸು.ನಾ. ಮಲ್ಯ, ಮೊದಲಾದ ಮಹನೀಯರನ್ನು ನೆನಪಿಸಿಕೊಳ್ಳುವ ಸೌಜನ್ಯವನ್ನೇ ತೋರುತ್ತಿಲ್ಲ. ಇಂದಿನ ಪೀಳಿಗೆಯ ಪತ್ರಕರ್ತರಿಗೆ ಈ ಮಹನೀಯರ ಕಿರುಪರಿಚಯವನ್ನಾದರೂ ಈ ಸಂದರ್ಭದಲ್ಲಿ ಮಾಡಿಕೊಡಬೇಕೆಂದು ಮಾಧ್ಯಮ ಅಕಾಡೆಮಿಗೆ ಏಕೆ ಅನಿಸುತ್ತಿಲ್ಲ?

ಹಾಗೆ ನೋಡಿದರೆ ಡಿವಿಜಿ ಕನ್ನಡ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ಕಡಿಮೆಯದೇನೂ ಅಲ್ಲ. ಪತ್ರಿಕೋದ್ಯಮ ಡಿವಿಜಿ ಆಶಿಸಿದ್ದ ವೃತ್ತಿಯೇನೂ ಆಗಿರಲಿಲ್ಲ. ಜೀವನ ನಿರ್ವಹಣೆಗಾಗಿ ಪತ್ರಿಕೆಗಳಲ್ಲಿ ಬಾತ್ಮೀದಾರರಾಗಿ ನೌಕರಿಗೆ ಸೇರಿಕೊಂಡ ಅವರು ಪತ್ರಿಕಾರಂಗಕ್ಕೊಂದು ಹೊಸ ಆಯಾಮವನ್ನೇ ನೀಡಿದರು. ಸೂರ್ಯೋದಯ ಪ್ರಕಾಶಿಕಾ, ಈವ್ನಿಂಗ್ ಮೆಯಿಲ್, ಮೈಸೂರು ಸ್ಟ್ಯಾಂಡರ್ಡ್ ಎಂಬ ಇಂಗ್ಲಿಷ್ ಪತ್ರಿಕೆಗಳು, ನಡೆಗನ್ನಡಿ ವಾರಪತ್ರಿಕೆ, ವೀರಕೇಸರಿ… ಹೀಗೆ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಂಪಾದಕರಾಗಿ, ಲೇಖಕರಾಗಿ ದುಡಿದ ಅನನ್ಯ ಅನುಭವ ಅವರದ್ದಾಗಿತ್ತು. ಅವರೇನೂ ಪತ್ರಿಕೋದ್ಯಮ ಪದವಿ ಪಡೆದವರಾಗಿರಲಿಲ್ಲ. ಮೆಟ್ರಿಕ್ಯುಲಷನ್ ಪರೀಕ್ಷೆಯಲ್ಲಿ (1905) ಕನ್ನಡ, ಗಣಿತ, ವಿಜ್ಞಾನದಲ್ಲಿ ಅನುತ್ತೀರ್ಣರಾಗಿದ್ದ ಡಿವಿಜಿಯವರ ಶಾಲಾಶಿಕ್ಷಣ ಅಲ್ಲಿಗೇ ಮುಕ್ತಾಯವಾಗಿತ್ತು. ಆದರೆ ಮುಂದೆ ಬದುಕಿನ ದೊಡ್ಡ ವಿಶ್ವವಿದ್ಯಾಲಯದಲ್ಲಿ ಅವರು ಓದಿದ್ದು ಅಪಾರ.

ಮೊದಲಿನಿಂದಲೂ ತಮ್ಮ ಮನಃಸಾಕ್ಷಿಯಂತೆ ವರ್ತಿಸುವುದು ಡಿವಿಜಿಯವರ ಗುಣವಾಗಿತ್ತು. ಅದನ್ನು ಬದಲಾಯಿಸುವುದು ಯಾರಿಗೂ ಸಾಧ್ಯವಿರುತ್ತಿರಲಿಲ್ಲ. ‘ಮೈಸೂರು ಟೈಮ್ಸ್’ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ಅವರು ಸಹಾಯಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ರಾಮಸ್ವಾಮಿ ಅಯ್ಯಂಗಾರ್ ಎಂಬ ದೊಡ್ಡ ಮನುಷ್ಯರೊಬ್ಬರು ಅದರ ಸಂಪಾದಕರಾಗಿದ್ದರು. ಪತ್ರಿಕೆಯ ಜವಾಬ್ದಾರಿಯೆಲ್ಲ ಡಿವಿಜಿಯವರ ಮೇಲೆಯೇ ಇತ್ತು. ಯಾವುದೋ ಒಂದು ಸುದ್ದಿಯ ಪ್ರಕಟಣೆ ವಿವಾದಕ್ಕೆ ತಿರುಗಿ ಕೋರ್ಟ್ ಮೆಟ್ಟಿಲೇರಿತ್ತು. ಡಿವಿಜಿಯವರ ಜೊತೆ ಸಮಾಲೋಚಿಸದೆ ಸಂಪಾದಕರು ಕೋರ್ಟಿನಲ್ಲಿ ಕ್ಷಮೆಯಾಚಿಸಿ ರಾಜಿ ಮಾಡಿಕೊಂಡುಬಿಟ್ಟರು. ತಕ್ಷಣವೇ ಡಿವಿಜಿಯವರು ರಾಜೀನಾಮೆ ಸಲ್ಲಿಸಿ ಆ ಪತ್ರಿಕೆಯಿಂದ ಹೊರಬಂದರು. ಸತ್ಯ ಪ್ರತಿಪಾದನೆ ಪತ್ರಿಕೋದ್ಯೋಗಿಯ ಆದ್ಯಕರ್ತವ್ಯ ಎಂಬುದು ಅವರ ಅಚಲ ನಿಲುವಾಗಿತ್ತು. ಈ ಘಟನೆ ನಡೆದಾಗ ಅವರಿನ್ನೂ ೨೩ರ ಹುಡುಗ! ಇಂತಹ ನಿಯತ್ತಿನ ಪತ್ರಿಕೋದ್ಯಮಿ ಈಗ ಹುಡುಕಿದರೂ ಸಿಗುತ್ತಾರಾ?

ಟೀಯೆಸ್ಸಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಸಾಕಷ್ಟು ಕುಟುಕಿದ್ದಾರೆ. ‘ಸರ್ಕಾರ ಉರುಳಿಸುವ, ಸಚಿವರನ್ನು ಮನೆಗೆ ಕಳುಹಿಸುವ ಶಕ್ತಿಯಿದ್ದ ಪತ್ರಿಕೆಗಳ ಬಗ್ಗೆ ಭಯ ಹೋಗಿದೆ. ರಾಜಕಾರಣಿಗಳನ್ನು ಟೀಕಿಸುವ ಮಾಧ್ಯಮದ ಮಂದಿ ಸಾಚಾನಾ ಎಂದು ಪ್ರಶ್ನಿಸುವ ಕಾಲ ಬಂದಿದೆ. ಈ ದಿಕ್ಕಿನಲ್ಲಿ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಹೇಳಿರುವ ಈ ಮಾರ್ಮಿಕ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.

ಪ್ರಜಾಪ್ರಭುತ್ವದ ನಾಲ್ಕನೆಯ ಆಧಾರಸ್ತಂಭವೆನಿಸಿದ ಮಾಧ್ಯಮ ಕ್ಷೇತ್ರ ಇಂದು ತ್ರಿಶಂಕು ಸ್ಥಿತಿಯಲ್ಲಿದೆ. ಸ್ವಾತಂತ್ರ್ಯಪೂರ್ವದಲ್ಲಿ ನಿಶ್ಚಿತ ಧ್ಯೇಯ, ಆದರ್ಶ, ಜನಜಾಗೃತಿಯ ಉದ್ದೇಶಗಳನ್ನಿಟ್ಟುಕೊಂಡು ವಸ್ತುನಿಷ್ಠ ಸುದ್ದಿ, ಬರಹಗಳ ಮೂಲಕ ವೃತ್ತಿಧರ್ಮಕ್ಕೆ ಬದ್ಧತೆ ಸಾರಿದ್ದ ಪತ್ರಿಕೋದ್ಯಮ, ಸ್ವಾತಂತ್ರ್ಯಾನಂತರ ಬೇರೆ ಉದ್ಯಮಗಳಂತೆ ಇದೂ ಒಂದು ಉದ್ಯಮವಾಗಿ ಬೆಳೆದು ಬೇರೆಯೇ ಹಾದಿ ತುಳಿಯಿತು. ಉದ್ಯಮದ ರೂಪ ಪಡೆದ ನಂತರ ಪತ್ರಿಕೆಯ ಕಚೇರಿಯೊಳಗಿನ ವ್ಯವಸ್ಥೆಗಳೂ ಬದಲಾದವು. ಜಾಹೀರಾತು ಮತ್ತು ಸಂಪಾದಕೀಯ ವಿಭಾಗಗಳ ನಡುವಿನ ಗೆರೆ ಅಳಿಸಿಹೋಗುವ ಮಟ್ಟಕ್ಕೆ ಈಗ ಮುಟ್ಟಿದೆ. ಜಾಹೀರಾತು ಯಾವುದು, ಸುದ್ದಿಯಾವುದು, ಲೇಖನ ಯಾವುದು ಎಂಬುದೇ ತಕ್ಷಣ ಗೊತ್ತಾಗದಷ್ಟು ಪತ್ರಿಕೋದ್ಯಮ ಸ್ಥಿತ್ಯಂತರ ಗೊಂಡಿದೆ. ಇದಕ್ಕೆ ಕಾರಣವೂ ಇದೆ. ಹೆಚ್ಚುತ್ತಿರುವ ಮುದ್ರಣವೆಚ್ಚ, ದುಬಾರಿ ಮುದ್ರಣಕಾಗದ, ಮಾರುಕಟ್ಟೆಯಲ್ಲಿನ ಪೈಪೋಟಿಗಳಿಂದಾಗಿ ಪತ್ರಿಕೆಯ ಮಾಲಿಕರು ಅನಿವಾರ್ಯವಾಗಿ ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ. ಪತ್ರಿಕೆಗಳ ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಪತ್ರಿಕೆಗಳ ಮೇಲಿನ ಕಬಂಧ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಇದರಿಂದಾಗಿ ಪತ್ರಿಕಾರಂಗವನ್ನು ಸದಾಕಾಲ ಉದ್ಯಮಿಗಳು ಮತ್ತು ಸರ್ಕಾರದ ಹಂಗಿನಲ್ಲಿರುವಂತೆ ಮಾಡಿದೆ. ಇಂತಹ ಅನಾರೋಗ್ಯಕರ ವಾತಾವರಣ ಇರುವುದರಿಂದಲೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್‌ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.

ಪತ್ರಕರ್ತರನ್ನು ಇಂದು ನಾಲ್ಕುದಿಕ್ಕುಗಳಿಂದಲೂ ಮೊನಚಾದ ಈಟಿಗಳು ಇರಿಯತೊಡಗಿವೆ. ‘ನೀನು ಭ್ರಷ್ಟ, ಸ್ವಾರ್ಥಿ, ಲಂಪಟ…’ ಇತ್ಯಾದಿ ಟೀಕೆಗಳಿಗೆ ಬಲಿಪಶುವಾಗಬೇಕಾಗಿದೆ. ಎಲ್ಲ ಮಾಧ್ಯಮ ಮಿತ್ರರೂ ಇಂತಹ ಟೀಕೆಗಳಿಗೆ ಕಾರಣಕರ್ತರಲ್ಲದಿದ್ದರೂ ಯಾರೋ ಕೆಲವು ಪತ್ರಕರ್ತರು ನಡೆಸುವ ಬಾನಗಡಿ, ಅಪಸವ್ಯಗಳಿಂದಾಗಿ ಇಡೀ ಮಾಧ್ಯಮರಂಗ ತಲೆತಗ್ಗಿಸಬೇಕಾಗಿದೆ. ಟಿವಿ ವಾಹಿನಿಗಳಲ್ಲಿ ಬರುವ ಬ್ರೇಕಿಂಗ್ ನ್ಯೂಸ್‌ಗೆ ಇಂದು ಯಾವ ಕಿಮ್ಮತ್ತೂ ಇಲ್ಲ. ಏಕೆಂದರೆ ಈ ಸುದ್ದಿ ಪ್ರಸಾರವಾದ ಸ್ವಲ್ಪಹೊತ್ತಿಗೇ ಅದು ನಿಜವಲ್ಲ ಎಂಬುದು ಗೊತ್ತಾಗಿರುತ್ತದೆ. ಸುದ್ದಿಗಳನ್ನು ಎಲ್ಲರಿಗಿಂತ ಮೊದಲು ಪ್ರಸಾರಮಾಡಬೇಕೆಂಬ ಹಪಾಹಪಿಯಲ್ಲಿ ಸುದ್ದಿಗಳ ವಿಶ್ವಾಸಾರ್ಹತೆಯನ್ನು ನಿಖರವಾಗಿ ಪರಿಶೀಲಿಸದೆಯೇ ಹಸಿಹಸಿ ಸುದ್ದಿಗಳನ್ನು ಪ್ರಸಾರಮಾಡಿರುವುದರ ದುಷ್ಪರಿಣಾಮ ಇದು. ತಪ್ಪು ಸುದ್ದಿ ಪ್ರಸಾರಮಾಡಿದ್ದಕ್ಕೆ ಅನಂತರ ಟಿವಿ ವಾಹಿನಿಗಳ ಕ್ಷಮಾಪಣೆ ಅಥವಾ ವಿಷಾದ ಕೂಡ ಇಲ್ಲದಿರುವುದು ಮಾಧ್ಯಮ ಲೋಕದ ಬಗ್ಗೆ ವೀಕ್ಷಕರಿಗೆ ಜಿಗುಪ್ಸೆ ಹುಟ್ಟುವಂತೆ ಮಾಡಿದೆ. ರಾಜಕಾರಣಿಗಳ, ಪ್ರಭಾವೀ ವ್ಯಕ್ತಿಗಳ, ಅಧಿಕಾರಸ್ಥರ ಹುಳುಕುಗಳನ್ನು ಕುಟುಕು ಕಾರ್ಯಾಚರಣೆ ಮೂಲಕ ಬಯಲಿಗೆಳೆಯುವ ವಾಹಿನಿಗಳು, ತಾವು ಪ್ರಸಾರ ಮಾಡುವ ಅಸತ್ಯ ಹಾಗೂ ಅಪ್ರಾಮಾಣಿಕ ಸಂಗತಿಗಳ ಬಗ್ಗೆ ಪಶ್ಚಾತ್ತಾಪ ಪಡುವುದೇ ಇಲ್ಲ. ‘ತೆಹೆಲ್ಕಾ’ ಇಂಗ್ಲಿಷ್ ವಾರಪತ್ರಿಕೆ ಪ್ರತಿಷ್ಠಿತರ ಹುಳುಕುಗಳನ್ನು ಬಯಲಿಗೆಳೆದು ಪ್ರಸಿದ್ಧಿಗೆ ಬಂದಿತ್ತು. ಎಂಥೆಂಥ ಜಗಜಟ್ಟಿಗಳನ್ನೇ ಬಯಲಿಗೆಳೆದು ಮಣ್ಣುಮುಕ್ಕಿಸಿದ್ದೇವೆ ಎಂದು ಬೀಗುತ್ತಿದ್ದ ಆ ಪತ್ರಿಕೆಯ ಪ್ರಧಾನಸಂಪಾದಕ ತರುಣ್ ತೇಜ್‌ಪಾಲ್ ತನ್ನ ಕಿರಿಯ ಸಹೋದ್ಯೋಗಿಯ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಸೇರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಪತ್ರಿಕೆಗಳು ಎಗ್ಗಿಲ್ಲದ ದಾರಿಯಲ್ಲಿ ಸಾಗುತ್ತಿರುವುದಕ್ಕೆ ಒಂದು ನಿದರ್ಶನ.

ಈಚೆಗಂತೂ ಪರಾಕು ಹೇಳಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವುದೇ ಪತ್ರಕರ್ತರಿಗೆ ತಮ್ಮ ಕರ್ತವ್ಯವೆನಿಸಿರುವುದು ದೊಡ್ಡ ದುರಂತ. ಪತ್ರಿಕೆಯಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಲು ಪತ್ರಿಕಾ ಮಾಲಿಕರ ಲಗೇಜನ್ನು ವಿಮಾನ ನಿಲ್ದಾಣದಿಂದಲೇ ಹೊತ್ತು ತಂದು ಸಂಪಾದಕರಾದವರಿದ್ದಾರೆ. ಮುಖ್ಯಮಂತ್ರಿಯಾಗುವವರಿಗೆ ಬಕೆಟ್ ಹಿಡಿದು, ಅವರ ವಿಶ್ವಾಸ ಗಳಿಸಿ, ಮಾಧ್ಯಮ ಸಲಹೆಗಾರರಾದವರೂ ಇದ್ದಾರೆ. ಜಾತಿ ಕಾರಣಕ್ಕಾಗಿ ಮುಖ್ಯಮಂತ್ರಿ ಜಾತಿಗೆ ಸೇರಿದವರೇ ಮಾಧ್ಯಮ ಸಮನ್ವಯಕಾರರಾದವರೂ ಇದ್ದಾರೆ. ಇಲ್ಲಿ ಯೋಗ್ಯತೆ, ಅರ್ಹತೆಗಿಂತ ಜಾತಿ, ವಶೀಲೀಬಾಜಿ, ಬಕೆಟ್ ಹಿಡಿಯುವ ಸಂಸ್ಕೃತಿಯೇ ಮೆರೆದಾಡಿದೆ. ಹೊಸದಾಗಿ ಪತ್ರಿಕೆಗಳಿಗೆ ವರದಿಗಾರನಾಗುವ ವ್ಯಕ್ತಿಗೆ ಪತ್ರಿಕೆಯ ಒಂದು ಐಡಿ ಕಾರ್ಡ್ ಹಾಗೂ ವಾರ್ತಾ ಇಲಾಖೆಯ ಮಾನ್ಯತಾ ಗುರುತಿನ ಪತ್ರ – ಇವೆರಡಿದ್ದರೆ ಸಾಕು. ಸಂಬಳ ಬೇಕೆಂದೇನಿಲ್ಲ. ಆತನ ಸಂಪಾದನೆ ಸೊಂಪಾಗಿಯೇ ಇರುತ್ತದೆ! ಸ್ವಾತಂತ್ರ್ಯಪೂರ್ವದಲ್ಲಿ ‘ನಾನೊಬ್ಬ ಸಂಪಾದಕ’ ಎಂದು ಪತ್ರಕರ್ತರೊಬ್ಬರು ಪರಿಚಯಿಸಿಕೊಂಡರೆ, ‘ಸಂತೋಷ, ಆದರೆ ಹೊಟ್ಟೆಪಾಡಿಗೆ ಏನು ಮಾಡುತ್ತಿದ್ದೀಯ?’ ಎಂದು ಕನಿಕರದಿಂದ ವಿಚಾರಿಸುತ್ತಿದ್ದರು. ಆಗಿನ ಕಾಲವೇ ಹಾಗಿತ್ತು. ಪತ್ರಕರ್ತರಿಗೆ ಕೈತುಂಬ ಸಂಪಾದನೆ ಸಾಧ್ಯವೇ ಇರಲಿಲ್ಲ. ಆದರೂ ಅವರು ಕೈತುಂಬ ಸಂಪಾದಿಸಲು ‘ಸಾಹಸ’ ಪಡಲೇ ಇಲ್ಲ. ಡಿವಿಜಿ ಪತ್ರಕರ್ತರಾಗಿ ಬದುಕಿದ್ದು ಹಾಗೆಯೇ. ಅವರ ಸಾವಿನ ಬಳಿಕ ಮನೆಯಲ್ಲಿದ್ದ ಪೆಟಾರಿಯೊಂದರಲ್ಲಿ ನಗದಾಗದ ಅದೆಷ್ಟೋ ಚೆಕ್ಕುಗಳು ಹಾಗೆಯೇ ಇದ್ದವಂತೆ. ಸಾರ್ವಜನಿಕ ಸನ್ಮಾನವೊಂದರಲ್ಲಿ ಅವರಿಗೆ ಒಂದು ಲಕ್ಷ ರೂ. ಹಮ್ಮಿಣಿ ನೀಡಿದಾಗ ಅವರು ಅದನ್ನು ಸ್ವೀಕರಿಸಿ ಅಷ್ಟನ್ನೂ ಸಾರ್ವಜನಿಕ ಗೋಖಲೆ ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದರು. ಮರುದಿನ ಮನೆಯಲ್ಲಿ ಕಾಫಿಪುಡಿಗೂ ಅವರ ಬಳಿ ಕಾಸಿರಲಿಲ್ಲ.

ಅಸತ್ಯ, ಅನ್ಯಾಯಗಳ ವಿರುದ್ಧ ಲೇಖನಿಯನ್ನು ಝಳಪಿಸಬೇಕಾದ, ತನ್ಮೂಲಕ ಸಮಾಜದ ಸಾಕ್ಷಿಪ್ರಜ್ಞೆಯನ್ನು ಜೀವಂತವಾಗಿಡಬೇಕಾದ ಮಾಧ್ಯಮರಂಗ ಇಂದು ಜಾತಿ, ಪಕ್ಷ, ಪಂಥ ಮುಂತಾದ ಗುಂಪುಗಳಾಗಿ ಒಡೆದುಹೋಗಿದೆ. ಎಡಪಂಥೀಯ, ಬಲಪಂಥೀಯವೆಂಬ ಹೋಳುಗಳ ನಡುವೆ ಪತ್ರಕರ್ತರು ಹರಿದು ಹಂಚಿಹೋಗಿದ್ದಾರೆ. ಮುಸ್ಲಿಂ ಜಾತಿಗೆ ಸೇರಿದ ಪತ್ರಕರ್ತನೊಬ್ಬ ಬಲಪಂಥೀಯ ಧೋರಣೆಯ ಪತ್ರಿಕೆಗೆ ಸೇರುವುದೇ ಅಸಾಧ್ಯ. ಅದೇರೀತಿ ಎಡಪಂಥೀಯ ಧೋರಣೆಯ ಪತ್ರಿಕೆಯೊಂದಕ್ಕೆ ಹಿಂದೂ ಸಂಸ್ಕೃತಿ, ಧರ್ಮದಲ್ಲಿ ನಿಷ್ಠೆಯುಳ್ಳ ಪತ್ರಕರ್ತನೊಬ್ಬ ಸೇರುವುದೂ ದುಸ್ಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಟೀಯೆಸ್ಸಾರ್, ಮೊಹರೆ ಹಣಮಂತರಾಯ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆಯಾಗುವವರೂ ಕೂಡ ಇಂತಹ ಧೋರಣೆಗಳಿಗೆ ಅತೀತರಾಗಿಲ್ಲ. ಬೆ.ಸು.ನಾ. ಮಲ್ಯರಂತಹ ೪೩ ವರ್ಷಗಳ ಕಾಲ ಹಿರಿಯ ಪತ್ರಕರ್ತರಾಗಿ ನಾಡಿನಾದ್ಯಂತ ಹಲವಾರು ಪತ್ರಕರ್ತರಿಗೆ ಸ್ಫೂರ್ತಿ, ಪ್ರೇರಣೆ ನೀಡಿದ್ದ ಪ್ರಾಮಾಣಿಕ ವ್ಯಕ್ತಿಗೆ ಕೊನೆಗೂ ಟೀಯೆಸ್ಸಾರ್ ಪ್ರಶಸ್ತಿ ಸಿಗಲೇ ಇಲ್ಲ. ಹಾಗೆ ನೋಡಿದರೆ ೧೯೭೫ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರು ಸರ್ವಾಧಿಕಾರ, ಮೂಲಭೂತ ಸ್ವಾತಂತ್ರ್ಯಗಳ ಹರಣ ವಿರೋಧಿಸಿ ೨೦ ತಿಂಗಳ ಸೆರೆವಾಸ ಅನುಭವಿಸಿದ್ದರು. ಅದೊಂದೇ ಅರ್ಹತೆ ಅವರಿಗೆ ಟೀಯೆಸ್ಸಾರ್ ಪ್ರಶಸ್ತಿ ಗಳಿಕೆಗೆ ಸಾಕಾಗಿತ್ತು. ಆದರೆ ಬಹುಶಃ ಅದೇ ಕಾರಣಕ್ಕಾಗಿ ಅವರಿಗೆ ಟೀಯೆಸ್ಸಾರ್ ಪ್ರಶಸ್ತಿ ಕೊಟ್ಟಿಲ್ಲದೆಯೂ ಇರಬಹುದು!

ಈಗಂತೂ ಪಕ್ಷಗಳ ಹಿಡಿತವಿರುವ ಪತ್ರಿಕೆಗಳೂ ವಾಹಿನಿಗಳೂ ತಾವು ಹೇಳಿದ್ದೇ ಸುದ್ದಿ, ನೀಡಿದ್ದೇ ತೀರ್ಪು ಎಂಬಂತೆ ವರ್ತಿಸುತ್ತಿವೆ. ಹಾಗಾಗಿ ಪತ್ರಿಕೋದ್ಯಮದ ಮೂಲ ಆಶಯವಾಗಿರುವ ಸತ್ಯಪ್ರತಿಪಾದನೆ ಮೂಲೆಗುಂಪಾಗಿದೆ. ಎಡಪಂಥೀಯ ಧೋರಣೆಯ ಪತ್ರಿಕೆಗಳಿಗೆ ನಕ್ಸಲೈಟ್‌ಗಳ ಲೈಂಗಿಕ ಹಗರಣ, ಬುದ್ಧಿಜೀವಿಗಳ ಬಾನಗಡಿ ಪ್ರಕರಣಗಳು ಹೇಗೆ ಪ್ರಮುಖ ಸುದ್ದಿಯಲ್ಲವೋ ಹಾಗೆಯೇ ಬಲಪಂಥೀಯ ಧೋರಣೆಯ ಪತ್ರಿಕೆಗಳಿಗೆ ಮಠಾಧಿಪತಿಗಳ ಬಾನಗಡಿ, ಅನೈತಿಕ ಕರ್ಮಕಾಂಡಗಳ ಸುದ್ದಿ ಮಹತ್ತ್ವದ್ದಾಗುವುದಿಲ್ಲ. ಹಾಗಾಗಿ ಪ್ರಾಮಾಣಿಕ, ವಸ್ತುನಿಷ್ಠ ಪತ್ರಕರ್ತರಿಗೆ ಈ ವೃತ್ತಿ ಸಾಕಪ್ಪಾ ಸಾಕು ಎನಿಸುವುದು ಸಹಜ. ಆದರೆ ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಅದನ್ನು ಸರಿಪಡಿಸಲು ಕಾರಣವಾಗುವ ಒಂದಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಪ್ರಾಮಾಣಿಕ ಪತ್ರಿಕೋದ್ಯಮದ ಕಾಲ ಮುಗಿದೇ ಹೋಯಿತು ಎಂದು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಅಗತ್ಯ ಕಾಣುವುದಿಲ್ಲ. ಮಾಧ್ಯಮಗಳಲ್ಲಿ ಮಾನವೀಯತೆಗೆ ಸಂಬಂಧಿಸಿದ ಮನಕಲಕುವ ಸುದ್ದಿ, ಲೇಖನಗಳು ಪ್ರಕಟವಾದಾಗ, ಸಮಾಜಕ್ಕೆ ಶಕ್ತಿ ತುಂಬುವ ಬರಹಗಳು ಪಡಿಮೂಡಿದಾಗ ಓದುಗರು ತಪ್ಪದೇ ಅದನ್ನೋದಿ ಈಗಲೂ ಸಂಭ್ರಮಿಸುತ್ತಾರೆ. ಇಂತಹ ಬರಹಗಳು, ಸುದ್ದಿಗಳು ಆಗಾಗ ಬರುತ್ತಿರಲೆಂದು ಆಶಯ ವ್ಯಕ್ತಪಡಿಸುತ್ತಾರೆ. ಇದೊಂದು ಆಶಾಕಿರಣವೆನ್ನಬಹುದು.

ಬಹಳ ಹಿಂದೆಯೇ ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ ಹೇಳಿದ್ದರು: ‘ಮಣಿಯದಿಹ ಮನವೊಂದು ಸಾಧಿಸುವ ಹಠವೊಂದು / ನಿಜದ ನೇರಕೆ ನಡೆವ ನಿಶ್ಚಲತೆಯೊಂದು / ಮರುಕಕ್ಕೆ ಪ್ರೇಮಕ್ಕೆ ಚಿರತೆರೆದ ಎದೆಯೊಂದು / ಅನ್ಯಾಯಕೆಂದೆಂದು ಬಾಗದೆಚ್ಚರವೊಂದು’. ಇಂದಿನ ಪತ್ರಕರ್ತರು ಇಂತಹ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ.

No comments:

Post a Comment