ಕಲಬುರಗಿ,ಜು.5-ವಿಜ್ಞಾನ ಮನುಷ್ಯನ ನಾಗರೀಕತೆ ಹೆಚ್ಚಿಸಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ಹೇಳಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿಂದು ಹಮ್ಮಿಕೊಂಡಿದ್ದ ಪದವಿಪೂರ್ವ
ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಬೆಳಿಗ್ಗೆಯಿಂದ ಸಂಜೆಯವರೆಗೆ ನಾವು ಬಳಕೆ ಮಾಡುವ ಎಲ್ಲಾ ವಸ್ತುಗಳು ವಿಜ್ಞಾನದ ಕೊಡುಗೆಯಾಗಿದ್ದು, ಟಿ.ವಿ., ಮೊಬೈಲ್, ಕಂಪ್ಯೂಟರ್ ಸೇರಿದಂತೆ ವಿಜ್ಞಾನದ ಹಲವು ಅವಿಷ್ಕಾರಗಳಿಂದ ಮನುಷ್ಯನ ಬದುಕು ಶ್ರೀಮಂತವಾಗಿದೆ ಎಂದರು.
ದೇಶದ ಅಭಿವೃದ್ಧಿ ಮತ್ತು ಸಮೃದ್ಧಿ ವಿಜ್ಞಾನದ ಕೈಯಲ್ಲಿದ್ದು, ಮೂಲ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದ ಅವರು, ಪಿಯುಸಿ ನಂತರ ತಮ್ಮ ಮಕ್ಕಳು ಮೆಡಿಕಲ್, ಇಂಜಿನಿಯರಿಂಗ್ ಓದಬೇಕು ಎಂದು ಪಾಲಕರು ಬಯಸುವುದು ತಪ್ಪಲ್ಲ, ಆದರೆ ಅದಕ್ಕೂ ಮೊದಲು ಮಕ್ಕಳ ಆಶಯಗಳೇನು ಎಂಬುವುದನ್ನು ಅರಿತುಕೊಳ್ಳಬೇಕು. ತಮಗೆ ಬೇಕಾದ ಕಡೆಗೆ ಅವರನ್ನು ಎಳೆದುಕೊಂಡು ಹೋಗಬಾರದು ಎಂದು ಕಿವಿಮಾತು ಹೇಳಿದರು. ಮೆಡಿಕಲ್ ಓದುವುದುರಿಂದ ವೈದ್ಯರಾಗಬಹುದು, ಇಂಜಿನಿಯರಿಂಗ್ ಓದುವುದರಿಂದ ಇಂಜಿನಿಯರ್ ಆಗಬಹುದು, ಅದೇ ಕೃಷಿ ವಿಜ್ಞಾನಿಯಾದರೆ ಇಡೀ ದೇಶಕ್ಕೆ ಅನ್ನ ನೀಡಬಹುದು. ಇಸ್ರೋ ವಿಜ್ಞಾನಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿ ಇಡೀ ದೇಶ, ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಬಹುದು ಎಂದರು.ಸಿ.ವಿ.ರಾಮನ್, ಜಗದೀಶ್ಚಂದ್ರ ಭೋಸ್, ಸ್ವಾಮಿನಾಥನ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸೇರಿದಂತೆ ಮುಂತಾದ ವಿಜ್ಞಾನಿಗಳು ದೇಶಕ್ಕೆ ನೀಡಿದ ಕೊಡುಗೆಯನ್ನು ನಾವು ಸ್ಮರಿಸಬೇಕಿದೆ. ವೈದ್ಯಕೀಯ ಕ್ಷೇತ್ರದಲ್ಲಿ, ಕೃಷಿ ಕ್ಷೇತ್ರದಲ್ಲಿ, ತಂತ್ರಜ್ಞಾನ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ದೇಶದ ವಿಜ್ಞಾನಿಗಳು ಮಾಡಿದ ಸಾಧನೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ದೇಶಕ್ಕೆ ಕೊಡುಗೆ ನೀಡಿದ ವಿಜ್ಞಾನಿಗಳು ನಿಮ್ಮ ಮಾದರಿ ವ್ಯಕ್ತಿಗಳಾಬೇಕು ಎಂದರು.
ಹಿರಿಯ ವಿಜ್ಞಾನಿ ಪಿ.ಜೆ.ಭಟ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಲಬುರಗಿ ಜಿಲ್ಲಾ ಸಮಿತಿ ಕ್ರೀಯಾಶೀಲವಾಗಿ ಕೆಲಸ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಸಾ 2011 ರಲ್ಲಿ ಉಡಾವಣೆ ಮಾಡಿದ ಜೂನೋ ಉಪಗ್ರಹ 280 ಕೋಟಿ ಕಿ.ಮೀ. ಕ್ರಮಸಿ ಇಂದು ಮಧ್ಯಾಹ್ನವಷ್ಟೇ ಗುರುಗೃಹ ತಲುಪಿರುವ ವಿಷಯವನ್ನು ಬಹಿರಂಗ ಪಡಿಸಿದರು.
ವಿಜ್ಞಾನಿ ಎಸ್.ಹಿರಿಯಣ್ಣ, ಬೀದರನ ಶಾಹಿನ್ ಶಿಕ್ಷಣ ಸಂಸ್ಥೆಯ ಡಾ.ಅಬ್ದುಲ್ ಖದೀರ್, ಸಿಇಟಿಯಲ್ಲಿ ವೈದ್ಯಕೀಯದಲ್ಲಿ ರಾಜ್ಯಕ್ಕೆ ಮೂರನೇ ಱ್ಯಾಂಕ್ ಪಡೆದ ಬೀದರನ ಶಾಹಿನ್ ಕಾಲೇಜಿನ ಕು.ವಚನಶ್ರೀ ಬಸವಕುಮಾರ ಪಾಟೀಲ, ಕರಾವಿಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಸಂಗಮೇಶ ಹಿರೇಮಠ, ಮಹಾರುದ್ರಪ್ಪ ಅಣದೂರೆ, ಡಾ.ಎಸ್.ಎಸ್.ಗುಬ್ಬಿ ವೇದಿಕೆ ಮೇಲಿದ್ದರು. ಕರಾವಿಪ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಎ.ಆರ್.ಮಣ್ಣೂರೆ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ರಾಜ್ಯ ಖಜಾಂಚಿ ಗಿರೀಶ ಕಡ್ಲೇವಾಡ ಅವರು ಆಶಯ ನುಡಿಗಳನ್ನಾಡಿದರು. ವಿಜಯಕುಮಾರ ಪಾಸೋಡೆ ಸ್ವಾಗತಿಸಿದರು.
ನಗರದ ವಿವಿಧ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
No comments:
Post a Comment