Wednesday 6 July 2016

ಡ್ರೋನ್ ಪಡೆ ಹೊಂದಿದ ಪ್ರಥಮ ಪೊಲೀಸ್- ಕರ್ನಾಟಕ

 ಬೆಂಗಳೂರು, ಮೇ ೯: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಪೊಲೀಸರು ಡ್ರೋನ್ (ಚಾಲಕರಹಿತ ವಿಮಾನ) ಹೊಂದಿರುವ ಪಡೆ ಎನಿಸಿಕೊಂಡಿದ್ದು, ಕಳೆದ ತಿಂಗಳು ೧೨ ಡ್ರೋನ್‌ಗಳು ಇಲಾಖೆಗೆ ಸೇರ್ಪಡೆಗೊಂಡಿವೆ.ಮೊದಲ ಹಂತದ ಡ್ರೋನ್‌ಗಳನ್ನು ಈಗಾಗಲೇ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಕಾರ್ಯಾಚರಣೆ ಆರಂಭಗೊಂಡಿದೆ.ಡ್ರೋನ್‌ಗಳ ಕಾರ್ಯಾಚರಣೆಗೆ ೨೦ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಅವರಿಗೆ ಪ್ರತ್ಯೇಕ ಸವಾಲುಗಳನ್ನು ಎದುರಿಸುವ ಬಗ್ಗೆ
ತಾಲೀಮು ಮಾಡಿಸಲಾಗಿದೆ. ರಾತ್ರಿಯಲ್ಲೂ ನೋಡುವ ಸಾಮರ್ಥ್ಯ ಹೊಂದಿರುವ ಯುಎವಿಗಳು ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯ ಮಾಡಲಿದೆ. ಗಣಿಗಾರಿಕೆ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಡ್ರೋನ್ ಪೊಲೀಸರಿಗೆ ನೆರವು ನೀಡಲಿದೆ.
ಜನಸಮೂಹ ವೀಕ್ಷಣೆ ಸೇರಿದಂತೆ ಅಕ್ರಮ ಚಟುವಟಿಕೆ ತಡೆಗೆ ಪೊಲೀಸರು ಈ ಡ್ರೋನ್ ಬಳಸಿದರೆ, ಕಂದಾಯ ಅಧಿಕಾರಿಗಳು ಇದನ್ನು ಅಕ್ರಮ ಕಟ್ಟಡ ನೆಲೆಸಮ ಸಂದರ್ಭದಲ್ಲಿ ಬಳಸಲಿದ್ದಾರೆ. ಆದರೆ ಇದನ್ನು ಅವರು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಡ್ರೋನ್ ಬಳಕೆಗೆ ಸಾಕಷ್ಟು ಸವಾಲುಗಳಿವೆ.
ಕೊಪ್ಪಳ, ಯಾದಗಿರಿ, ಬಳ್ಳಾರಿ, ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ೧೨ ಡ್ರೋನ್‌ಗಳನ್ನು ಮತ್ತು ತರಬೇತಿ ಹೊಂದಿದ ಸಿಬ್ಬಂದಿಯನ್ನು ವಿತರಿಸಲಾಗಿದೆ ಎಂದು ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಹೆಚ್ಚುವರಿ ಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಗಣ್ಯ ವ್ಯಕ್ತಿಗಳ ಭದ್ರತೆಯಲ್ಲೂ ಈ ಡ್ರೋನ್ ಬಳಸಲಾಗುತ್ತದೆ. ಗಣ್ಯರು ಚಲಿಸುವ ಮಾರ್ಗಗಳಲ್ಲಿ ಅಪಾಯ ಸೂಚನೆ ಅರಿಯಲು ಇದನ್ನು ಬಳಸಲಾಗುತ್ತದೆ. ಒಂದು ಡ್ರೋನ್ ವಾಹನಕ್ಕೆ ೧.೫ ಲಕ್ಷ ರೂ. ಬೆಲೆ ಇದೆ. ಪಾಂಥಮ್ ೪ ಯುಎವಿಗಳನ್ನು ದಕ್ಷಿಣ ಕೊರಿಯಾದಿಂದ ಖರೀದಿಸಲಾಗಿದ್ದು, ಇವುಗಳು ಸುಮಾರು ೩೦ ನಿಮಿಷಗಳಿಗೂ ಅಧಿಕ ಕಾಲ ಆಕಾಶದಲ್ಲಿ ಉಳಿಯಬಲ್ಲದು ಹಾಗೂ ಒಂದು ಕಿ.ಮೀ. ಎತ್ತರದವರೆಗೆ ಹಾರಾಡಬಲ್ಲದು. ಅದರಲ್ಲಿ ೧೮.೨ ಮೆಘಾಫಿಕ್ಸೆಲ್ ಸಾಮರ್ಥ್ಯದ ಕ್ಯಾಮರಾ ಅಳವಡಿಸಲಾಗಿರುತ್ತದೆ. ಆದರೆ ಅತಿಯಾದ ಮಳೆಯಲ್ಲಿ ಇದರ ಕಾರ್ಯಾಚರಣೆ ಸಾಧ್ಯವಾಗುವುದಿಲ್ಲ. ಅಕ್ರಮ ಮರಳು ಗಣಿಗಾರಿಕೆ ಕಾರ್ಯಾಚರಣೆಗೆ ಡ್ರೋನ್ ನಿಯೋಜಿಸಿದರೆ, ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಅವರಿಗೆ ಅರಿವಿಲ್ಲದಂತೆ ನಾವು ವೀಕ್ಷಿಸಬಹುದು ಎಂದು ರಾವ್ ವಿವರಿಸಿದ್ದಾರೆ.





No comments:

Post a Comment