Friday, 8 July 2016

ಶಸ್ತ್ರಾಸ್ತ್ರ ಖರೀದಿಯಿಂದ ಮುಂದೆ ದೇಶಕ್ಕೆ ಹೆಚ್ಚಿನ ಲಾಭ: ಪರಿಕರ್‌

 ಬೆಂಗಳೂರು: ''ದೇಶಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ ಖರೀದಿಯಿಂದ ಮುಂದಿನ 10 ವರ್ಷಗಳಲ್ಲಿ ದೇಶಕ್ಕೆ 12 ರಿಂದ 15 ಶತಕೋಟಿ ಡಾಲರ್‌ನಷ್ಟು ಲಾಭವಾಗಲಿದೆ,'' ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿದರು.ಭಾರತೀಯ ವಿದ್ಯುನ್ಮಾನ ಉದ್ಯಮಗಳ ಒಕ್ಕೂಟ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ '7ನೇ ವ್ಯೂಹಾತ್ಮಕ ವಿದ್ಯುನ್ಮಾನ ಸಾಧನಗಳ ಸಮಾವೇಶ' ಉದ್ಘಾಟಿಸಿ ಅವರು ಮಾತನಾಡಿದರು.''ಕಳೆದ ಒಂದೂವರೆ
ವರ್ಷದಲ್ಲಿ ಅತ್ಯಾಧುನಿಕ ರಕ್ಷಣಾ ಸಾಧನಗಳ ಖರೀದಿ ಕ್ಷಿಪ್ರವಾಗಿ ನಡೆಯುತ್ತಿದೆ. ಇದು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಸದ್ಯಕ್ಕೆ ನಮ್ಮ ರಕ್ಷಣಾ ಬತ್ತಳಿಕೆಗೆ ಅಗತ್ಯವಿರುವ 36 ರಫಾಲ್‌ ಯುದ್ಧವಿಮಾನಗಳ ಖರೀದಿ ಒಪ್ಪಂದ ಶೀಘ್ರ ಆಖೈರಾಗುವ ಹಂತದಲ್ಲಿದೆ. ಈ ವ್ಯವಹಾರಕ್ಕೆ ದೇಶವು ವಿನಿಯೋಗಿಸುವ ಒಟ್ಟು ಮೊತ್ತದಲ್ಲಿ ಶೇಕಡ 50ರಷ್ಟು ಹಣವನ್ನು ಆ ಕಂಪನಿ ಭಾರತದಲ್ಲೇ ಬಂಡವಾಳವಾಗಿ ಹೂಡಲಿದೆ,'' ಎಂದು ಅವರು ಹೇಳಿದರು.
''ಸದ್ಯಕ್ಕೆ ನಮ್ಮಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳಾದ ಎಚ್‌ಎಎಲ್‌, ಬಿಇಎಲ್‌ ಮತ್ತು ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ ಮುಂತಾದವು ದೇಶದ ರಕ್ಷಣೆಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ಉತ್ಪಾದಿಸುತ್ತಿವೆ. ಆದರೆ ಇವು ಮುಂದೆ ರಕ್ಷಣಾ ಸಾಮಗ್ರಿಗಳ ಉದ್ದಿಮೆಗೆ ಅತ್ಯಗತ್ಯವಾಗಿರುವ ಬಿಡಿಭಾಗಗಳನ್ನು ಪೂರೈಸುವಂಥ ದೈತ್ಯಸಂಸ್ಥೆಗಳಾಗಿ ಬೆಳೆಯಬೇಕು,'' ಎಂದು ಅವರು ಸೂಚಿಸಿದರು.
''ದೇಶದಲ್ಲಿ ಇದುವರೆಗೂ ರಕ್ಷಣಾ ಉದ್ಯಮದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಕೊಡುಗೆ ಕೇವಲ ಶೇಕಡ 4ರಷ್ಟಿತ್ತು. ಆದರೆ, ಕಳೆದ ವರ್ಷ ಈ ಪ್ರಮಾಣ ಶೇ 9ಕ್ಕೆ ಏರಿದೆ. ಹೆಚ್ಚಿನ ಉದ್ಯಮಿಗಳು 'ಮೇಕ್‌ ಪ್ರಾಜೆಕ್ಟ್ ಇಂಡಿಯಾ' ಮತ್ತು 'ಮೇಕ್‌ ಇನ್‌ ಇಂಡಿಯಾ' ಯೋಜನೆಗಳೆರಡನ್ನೂ ಒಂದೇ ಎಂದು ತಪ್ಪಾಗಿ ಭಾವಿಸಿದ್ದಾರೆ. ಇವೆರಡರ ಪೈಕಿ ಮೊದಲನೆಯದನ್ನು ನಾವು ಜಾರಿಗೆ ತಂದರೆ, ಎರಡನೆಯದು ತನ್ನಿಂದ ತಾನೇ ನನಸಾಗುತ್ತದೆ,'' ಎಂದು ಅವರು ಹೇಳಿದರು.
ಸಮಾರಂಭದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಜಯ್‌ಕುಮಾರ್‌, ಒಕ್ಕೂಟದ ಅಧ್ಯಕ್ಷ ವಿಕ್ರಂ ದೇಸಾಯಿ, ಡಾ.ವೆಂಕಟೇಶ್‌ ಪದ್ಮನಾಭನ್‌, ಉದ್ಯಮಿಗಳಾದ ಎಂ ವಿ ಅಪ್ಪಾರಾವ್‌, ಜೆ ಡಿ ಪಾಟೀಲ್‌, ರಾಜು ಗೋಯಲ್‌ ಮುಂತಾದವರು ಹಾಜರಿದ್ದರು.

No comments:

Post a Comment