Friday 8 July 2016

ಬಿಎಸ್‌ವೈಗೆ ಕೋರ್‌ ಕಮಿಟಿ ಶಾಕ್! ಶೋಭಾಗೆ ಕಮಿಟಿಯಲ್ಲಿ ಸ್ಥಾನವಿಲ್ಲ

 ಬೆಂಗಳೂರು: ಪಕ್ಷದ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಬಂಡಾಯದ ಬಿಸಿ ಎದುರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಭಾರೀ ಹಿನ್ನಡೆ ಉಂಟಾಗಿದ್ದು, ಖುದ್ದು ಪಕ್ಷದ ವರಿಷ್ಠರೇ ಮುಂದಾಗಿ ಯಡಿಯೂರಪ್ಪ ಅವರ ನಾಗಾಲೋಟಕ್ಕೆ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿನ ಪಕ್ಷದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಹೊಂದಿರುವ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿಯನ್ನು ಶೋಭಾ
ಕರಂದ್ಲಾಜೆ ಸಹಿತ ಯಡಿಯೂರಪ್ಪ ಸೂಚಿಸಿದ ಹಲವರನ್ನು ಕೈಬಿಟ್ಟು  ಪುನಾರಚಿಸಲಾಗಿದೆ.ಪರಿಣಾಮ, ಇನ್ನು ಮುಂದೆ ಯಡಿಯೂರಪ್ಪ ಅವರು ಪಕ್ಷದ ಸಂಘಟನಾತ್ಮಕ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ. ಕೋರ್‌ ಕಮಿಟಿಯಲ್ಲಿ ಚರ್ಚಿಸಿದ ಅನಂತರವೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಅವರ ಓಟಕ್ಕೆ ಲಗಾಮು ಬಿದ್ದಂತಾಗಲಿದೆ.

ಪಕ್ಷದ ವಿವಿಧ ಹಂತದ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವ ವೇಳೆ ಯಡಿಯೂರಪ್ಪ ಪಕ್ಷದ ಕೋರ್‌ ಕಮಿಟಿಯಲ್ಲಿ ಚರ್ಚೆ ನಡೆಸಿರಲಿಲ್ಲ ಎಂಬ ಆರೋಪವನ್ನು ಅತೃಪ್ತ ಮುಖಂಡರು ಮಾಡಿದ್ದರು. ಇದಕ್ಕೆ ಪಕ್ಷದ ಆಂತರಿಕ ವೇದಿಕೆಯಲ್ಲಿ ಉತ್ತರ ನೀಡಿದ್ದ ಯಡಿಯೂರಪ್ಪ, ಹೊಸ ಕೋರ್‌ ಕಮಿಟಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ ಎಂಬ ಸಮಜಾಯಿಷಿ ನೀಡಿದ್ದರು. ಅಲ್ಲದೆ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ರವಿಕುಮಾರ್‌ ಸೇರಿದಂತೆ ತಮ್ಮ ಹಲವು ಆಪ್ತರನ್ನು ಒಳಗೊಂಡ 22 ಮಂದಿಯ ಪಟ್ಟಿಯನ್ನು ನೀಡಿ ಕೋರ್‌ ಕಮಿಟಿಯನ್ನು ಪುನರ್‌ರಚಿಸುವಂತೆ ಯಡಿಯೂರಪ್ಪ ವರಿಷ್ಠರಲ್ಲಿ ಮನವಿ ಮಾಡಿದ್ದರು. ಹಾಲಿ ಕೋರ್‌ ಕಮಿಟಿಯಲ್ಲಿದ್ದ ಕೆಲವರನ್ನು ಕೈಬಿಡುವಂತೆಯೂ ಅವರು ಶಿಫಾರಸು ಪ್ರಸ್ತಾಪ ನೀಡಿದ್ದರು. ಆ 22 ಮಂದಿಯ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಅದರ ಬೆನ್ನಲ್ಲೇ ಪದಾಧಿಕಾರಿಗಳ ನೇಮಕ ಕುರಿತು ಬಹಿರಂಗವಾಗಿಯೇ ಸಡ್ಡು ಹೊಡೆದಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೇತೃತ್ವದ ಮುಖಂಡರ ನಿಯೋಗವೊಂದು ದೆಹಲಿಗೆ ತೆರಳಿ ಪಕ್ಷದಲ್ಲಿ ಉನ್ನತ ಜವಾಬ್ದಾರಿ ಹೊಂದಿರುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಅವರಿಗೆ ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ದೂರು ಸಲ್ಲಿಸಿತ್ತು. ಜತೆಗೆ ಕೋರ್‌ ಕಮಿಟಿ ಪುನರ್‌ರಚಿಸುವ ವೇಳೆ ಯಡಿಯೂರಪ್ಪ ಬೆಂಬಲಿಗರಿಗೆ ಹೆಚ್ಚಿನ ಆದ್ಯತೆ ನೀಡಬಾರದು ಹಾಗೂ ಯಡಿಯೂರಪ್ಪ ನೀಡಿರುವ ಕೋರ್‌ ಕಮಿಟಿ ಪಟ್ಟಿ ತಿರಸ್ಕರಿಸಬೇಕು ಎಂಬ ಮನವಿಯನ್ನೂ ಸಲ್ಲಿಸಿತ್ತು.


No comments:

Post a Comment