Thursday 7 July 2016

ಮಠಾಧೀಶರಿಗೆ ಗೌರವ ಡಾಕ್ಟರೇಟ್ ಶಿಫಾರಸು

  ಧಾರವಾಡ: ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್​ಗೆ ‘ನಾ ಮುಂದು ತಾ ಮುಂದು’ ಎಂದು ವರ್ಷದಿಂದ ವರ್ಷಕ್ಕೆ ಪೈಪೋಟಿ ಹೆಚ್ಚುತ್ತಿರುವಾಗಲೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈ ಬಾರಿ ರಾಜ್ಯದ ವಿವಿಧ ಮಠಾಧೀಶರ ಪರ ಶಿಫಾರಸು ಹೆಚ್ಚಿರುವುದು ಗಮನ ಸೆಳೆದಿದೆ.

ಕವಿವಿ ಗೌರವ ಡಾಕ್ಟರೇಟ್ ಪಡೆಯಲು ಈ ಬಾರಿ ವಿವಿಧ ಕ್ಷೇತ್ರಗಳ 21 ಗಣ್ಯರು ಪ್ರಯತ್ನ ನಡೆಸಿರುವುದಾಗಿ ತಿಳಿದುಬಂದಿದೆ. ಇದರಲ್ಲಿ ರಾಜ್ಯದ ನಾಲ್ವರು ಸ್ವಾಮೀಜಿಗಳ ಪರ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.

ಬಾಗಲಕೋಟೆ ಜಿಲ್ಲೆ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೀದರ್​ನ ಬೆಲ್ದಾಳೆ ಶರಣರು, ಚಿತ್ರದುರ್ಗ ಮುರುಘಾಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಶರಣರು, ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ಮಹಾಮನೆ ಆಶ್ರಮದ ಶ್ರೀ ಬಸವಾನಂದ ಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸು ಬಂದಿವೆ ಎನ್ನಲಾಗಿದೆ.

ಪ್ರತಿವರ್ಷ ಗೌರವ ಡಾಕ್ಟರೇಟ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಬರುತ್ತಿದ್ದವು. ಅವುಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡುವುದು ವಿವಿಗೆ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ಗಣ್ಯರನ್ನು ಗೌರವ ಡಾಕ್ಟರೇಟ್​ಗೆ ಆಯ್ಕೆ ಮಾಡಲು ರಾಜ್ಯಪಾಲ ವಿ.ಆರ್.ವಾಲಾ ಪ್ರಥಮ ಬಾರಿಗೆ ಪರಿಶೋಧನಾ ಸಮಿತಿ ರಚಿಸುವಂತೆ ಆದೇಶಿಸಿದ್ದರು.

ಅದರಂತೆ ವಿಶ್ರಾಂತ ಕುಲಪತಿಗಳಾದ ಡಾ. ಹಿರೇಮಠ, ಡಾ. ಹನುಮಂತಯ್ಯ, ನ್ಯಾ. ಶ್ರೀಧರ ರಾವ್ ಅವರನ್ನೊಳಗೊಂಡ ತಜ್ಞರ ಸಮಿತಿ ರಚಿಸಲಾಗಿತ್ತು. ಸಮಿತಿ ವಿವಿಧ ಕ್ಷೇತ್ರದ 8 ಜನರನ್ನು ಆಯ್ಕೆ (ಶಾರ್ಟ್ ಲಿಸ್ಟ್) ಮಾಡಿದೆ. ಇದರಲ್ಲಿ ಅಂತಿಮವಾಗಿ ರಾಜ್ಯಪಾಲರು 3 ಜನರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಡಾಕ್ಟರೇಟ್ ನೀಡಲಾಗುವುದೇ?

ಈ ಬಾರಿ ಗಣ್ಯರಿಗೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆಯೇ ಎಂಬ ಪ್ರಶ್ನೆಯೂ ಪ್ರಜ್ಞಾವಂತರನ್ನು ಕಾಡುತ್ತಿದೆ. ಘಟಿಕೋತ್ಸವಕ್ಕೆ ಮೂರೇ ದಿನ (ಮೇ 22) ಬಾಕಿ ಇದೆ. ಆದರೆ, ಗೌರವ ಡಾಕ್ಟರೇಟ್ ಪಡೆಯುವವರ ಹೆಸರು ಇನ್ನೂ ಅಂತಿಮಗೊಂಡಿಲ್ಲ. ವಿಪರ್ಯಾಸವೆಂದರೆ ಕುಲಪತಿ ಡಾ. ಪ್ರಮೋದ ಗಾಯಿ ಅವರಿಗೆ ಆಯ್ಕೆಯಾದವರ ಹೆಸರು ಇದುವರೆಗೂ ಗೊತ್ತಿಲ್ಲ. ಇಂಥದ್ದರಲ್ಲಿ ಗೌರವ ಡಾಕ್ಟರೇಟ್ ನೀಡಲು ಸಾಧ್ಯವೇ ಎಂಬ ಚರ್ಚೆ ನಡೆಯುತ್ತಿದೆ. ವಿವಿಧ ಕಾರಣಗಳಿಂದ ಕಳೆದ ವರ್ಷ ವಿವಿ ಗೌರವ ಡಾಕ್ಟರೇಟ್ ನೀಡಿರಲಿಲ್ಲ.

ಈ ಬಾರಿ 3 ಜನರಿಗೆ ಗೌರವ ಡಾಕ್ಟರೇಟ್ ನೀಡುತ್ತಿದ್ದೇವೆ. ಅರ್ಜಿ ಸಲ್ಲಿಸಿದ 21 ಜನರಲ್ಲಿ 8 ಜನರ ಶಾರ್ಟ್ ಲಿಸ್ಟ್ ತಯಾರಿಸಲಾಗಿದೆ. ರಾಜ್ಯಪಾಲರು ಅಂತಿಮವಾಗಿ 3 ಜನರನ್ನು ಆಯ್ಕೆ ಮಾಡಲಿದ್ದಾರೆ. ಮೂವರು ಗಣ್ಯರು ಯಾರು ಎಂದು ಇದುವರೆಗೂ ತಿಳಿದಿಲ್ಲ.

No comments:

Post a Comment