Thursday 7 July 2016

ಮೌಂಟ್ ಎವರೆಸ್ಟ್ ಹತ್ತಿದ ಬೆಂಗಳೂರು ಯುವಕ

 ಮೌಂಟ್ ಎವರೆಸ್ಟ್ ಹತ್ತಿದ ಬೆಂಗಳೂರು ಯುವಕ
 ಬೆಂಗಳೂರು: ನಗರದ ಇಂಜಿನಿಯರ್ ಪದವೀಧರ ಸತ್ಯರೂಪ್ ಸಿದ್ಧಾರ್ಥ್ ಹಾಗೂ 5 ಜನರ ತಂಡ ವಿಶ್ವವಿಖ್ಯಾತ ಅತೀ ಎತ್ತರದ ಪರ್ವತ ಶ್ರೇಣಿ ಮೌಂಟ್ ಎವರೆಸ್ಟ್ ಹತ್ತಿ ಇಳಿಯುವ ಮೂಲದ ಸಾಧನೆಯನ್ನು ಮಾಡಿದ್ದಾರೆ.
33 ವರ್ಷದ ಸತ್ಯರೂಪ್ ಅವರು ಈ ವರೆಗೂ 6 ಬಾರಿ ಎವರೆಸ್ಟ್ ಹತ್ತಲು ಪ್ರಯತ್ನಿಸಿದ್ದರು. ಆದರೆ. ಇದು ಸಾಧ್ಯವಾಗಿರಲಿಲ್ಲ. ಇದರಂತೆ ಪ್ರಯತ್ನಗಳ ಬೆನ್ನು ಬಿಡದ ಸತ್ಯರೂಪ್ ಅವರು ಮೇ.21ರಂದು ಕೊನೆಗೂ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ ಕೂಡ ಎವರೆಸ್ಟ್ ಹತ್ತರು ಸತ್ಯರೂಪ್ ಅವರು ಯತ್ನ ನಡೆಸಿದ್ದರು. ಪರ್ವತ ಹತ್ತಲು ಆರಂಭಿಸಿ ಕೆಲವು ಸಮಯ ಕಳೆಯುತ್ತಿದ್ದಂತೆ ನೇಪಾಳದಲ್ಲಿ ಭೂಕಂಪ ಸಂಭವಿಸಿತ್ತು. ಈ ಕಾರಣದಿಂದ ಪರ್ವತ ಹತ್ತಲು ಸಾಧ್ಯವಾಗಿರಲಿಲ್ಲ. ಇದೀಗ ಪರ್ವತ ಹತ್ತಿರುವ ಸಂತಸ ಸತ್ಯರೂಪ್ ಅವರಿಗಿದೆ.
ಮೇ.21 ರಂದು ಬೆಳಿಗ್ಗೆ 6 ಗಂಟೆಗೆ ಪರ್ವತ ಶಿಖರವನ್ನು ಹತ್ತಿಲಾಯಿತು. ಆ ಸಮಯ ನನಗೆ ಮ್ಯಾಜಿಕ್ ನಂತಿತ್ತು. ಯಾವ ವಿಚಾರದ ಬಗ್ಗೆಯೂ ಆಲೋಚನೆ ಬರಲಿಲ್ಲ. ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದೆ ಎಂದು ಸತ್ಯರೂಪ್ ಅವರು ಹೇಳಿಕೊಂಡಿದ್ದಾರೆ.
ಇನ್ನು ಪರ್ವತ ಹತ್ತುವಾಗ ಸತ್ಯರೂಪ್ ಅವರಿಗೆ ಅಂಟಾರ್ಟಿಕಾದ ಮೌಂಟ್ ವಿನ್ಸನ್ ಮಾಸ್ಸಿಫ್ ಕಣ್ಣಿಗೆ ಬಿದ್ದಿದ್ದು, ಈ ಪರ್ವತವನ್ನು 2016ರ ಡಿಸೆಂಬರ್ ತಿಂಗಳಿನಲ್ಲಿ ಹತ್ತಲು ನಿರ್ಧರಿಸಲಾಗಿದೆ ಎಂದು ಸತ್ಯರೂಪ್ ಅವರು ಹೇಳಿಕೊಂಡಿದ್ದಾರೆ.
ಪರ್ವತ ಹತ್ತುವಾಗ 2 ಮತ್ತು 3 ಕ್ಯಾಂಪ್ ಗಳಲ್ಲಿ ಉಳಿದುಕೊಳ್ಳಲಾಗಿತ್ತು. ಈ ವೇಳೆ ಶರ್ಪಾ ಜನಾಂಗದವರು 8 ಸಾವಿರ ಮೀಟರ್ ಗಳಷ್ಟು ಆಳದಲ್ಲಿ ಕೆಳಗೆ ಬೀಳುತ್ತಿರುವುದನ್ನು ನೋಡಿದ್ದೆ. ಇದು ನಿಜಕ್ಕೂ ಸಾಕಷ್ಟು ಭಯವನ್ನುಂಟು ಮಾಡಿತ್ತು. ಕ್ಯಾಂಪ್ ನಲ್ಲಿದ್ದಾಗ ಹೊಟ್ಟೆಯಲ್ಲಿ ಭಯ ಶುರುವಾಗಿತ್ತು. ಟೆಂಟ್ ಒಳಗೆ ಹೋಗಿ ಕೆಲವು ಸಮಯ ಆಲೋಚಿಸಿದ್ದೆ. ನಾನೂ ಕೂಡ ಕೆಳಗೆ ಬೀಳಬಹುದು ಎಂದು ತಿಳಿದಿದ್ದೆ.
ಕಣ್ಣು ಮುಚ್ಚಿದಾಗಲೆಲ್ಲಾ ಮಂಜು ಕೆಳಗೆ ಬೀಳುತ್ತಿರುವುದು, ನಾನು ಕೆಳಗೆ ಬೀಳುತ್ತಿದ್ದೇನೆನೋ ಎನ್ನುವಂತಹ ದೃಶ್ಯಗಳು ಬರುತ್ತಿತ್ತು. ನಂತರ ಈಗಾಗಲೇ ನಾನು ಸತ್ತು ಹೋಗಿದ್ದೇನೆ. ಏನೇ ಆದರೂ ಪರ್ವತ ಹತ್ತಲೇ ಬೇಕೆಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.
ಪರ್ವತ ಹತ್ತುವಾಗ ಸಾಕಷ್ಟು ಮಂದಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಹೀಗಾಗಿ ಪರ್ವತ ಹತ್ತಲು ಸಾಧ್ಯವಾಗಿರಲಿಲ್ಲ. ಆದರೂ, ನಾನು ಮಾತ್ರ ನನ್ನ ಹಠವನ್ನು ಬಿಡದೆ ಪರ್ವತ ಹತ್ತಲು ಮುಂದಾಗಿದ್ದೆ. ಪರ್ವತ ಹತ್ತಲು ಇನ್ನು ಕೆಲವೇ ದೂರ ಇರುವಾಗಲೇ ಆಮ್ಲಜನಕದ ಸಿಲಿಂಡರ್ ಕೆಲಸ ಮಾಡುವುದನ್ನು ನಿಲ್ಲಿಸಿದ್ದತು. ಆಮ್ಲಜನಕವಿಲ್ಲದೆಯೇ ನಾನು ಹತ್ತು ನಿಮಿಷ ಅಲ್ಲಿಯೇ ಇದ್ದೆ. ನಂತರ ಶೆರ್ಪಾ ಜನಾಂಗದವರಿಂದ ಆಮ್ಲಜನಕವನ್ನು ಪಡೆದು ಮತ್ತೆ ಪರ್ವತ ಹತ್ತಲು ಆರಂಭಿಸಿದ್ದೆ.
ಚಿಕ್ಕವನಿದ್ದಾಗ ನನಗೆ ಅಸ್ತಮಾ ಸಮಸ್ಯೆ ಇತ್ತು. ಇನ್ಹೇಲರ್ ಇಲ್ಲದೆಯೇ 100 ಮೀಟರ್ ಕೂಡ ಓಡಲು ಸಾಧ್ಯವಾಗುತ್ತಿರಲಿಲ್ಲ. ನಂತರ ನನ್ನೊಂದಿಗೆ ನಾನೇ ಸವಾಲು ಹಾಕಿಕೊಂಡೆ ಇನ್ಹೇಲರ್ ಇಲ್ಲದೆಯೇ, ಔಷಧಿಗಳು ಇಲ್ಲದೆಯೇ ಹತ್ತಬೇಕೆಂದು. ಇದೀಗ ನನ್ನ ಕನಸು ನನಸಾಗಿದೆ.
ಪರ್ವತ ಹತ್ತುವ ಕುರಿತಂತೆ ನನ್ನ ಕುಟುಂಬಸ್ಥರಿಗೆ ಅನುಮಾನವಿತ್ತು. ಆದರೆ, ನನ್ನ ಧೈರ್ಯ ಹಾಗೂ ಗುರಿಯನ್ನು ತಲುಪಿಯೇ ತೀರುತ್ತೇನೆಂದು ಅವರಿಗೆ ನಂಬಿಕೆಯಿತ್ತು. ಇದರಂತೆ ಸಾಕಷ್ಟು ಪರ್ವತಗಳನ್ನು ಹತ್ತಿ ಯಶಸ್ಸು ಗಳಿಸಿದ್ದೇನೆ. ಮನೆಗೆ ಸುರಕ್ಷಿತವಾಗಿ ತಲುಪಿದ್ದೇನೆ.
ಪರ್ವತ ಹತ್ತುವ ಕುರಿತಂತೆ ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದ್ದರು. ನನ್ನ ಕುಟುಂಬದವರನ್ನು ಒಪ್ಪಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಪರ್ವತ ಹತ್ತಲು ತೆಗೆದುಕೊಂಡಿರುವ ಎಚ್ಚರಿಕೆ ಕ್ರಮಗಳು ಹಾಗೂ ಭದ್ರತೆ ಬಗ್ಗೆ ಅವರಿಗೆ ವಿವರಣೆ ನೀಡಿದ್ದರು. ಆಗಾಗ ಪೋಷಕರಿಗೆ ಮಾಹಿತಿಗಳನ್ನು ರವಾನಿಸಿದ್ದರು.
ಪರ್ವತ ಹತ್ತಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಟ್ರಾಕಿಂಗ್ ಸಿಸ್ಟಮ್ ಡಿವೈಸ್ ಕಳೆದುಕೊಂಡಿದ್ದೆ. ಇದರಿಂದಾಗಿ 7-8 ಗಂಟೆಗಳ ಕಾಲ ನಾನು ಯಾರಿಗೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದು ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿತ್ತು.
ಇದೇ ವೇಳೆ ತಂಡದಲ್ಲಿದ್ದ ಮೂವರು ಜನರು ಕಾಣೆಯಾಗಿರುವುದಾಗಿ ಮಾಹಿತಿ ಸಿಕ್ಕಿತ್ತು. ಈ ವೇಳೆ ಸುದ್ದಿ ವರದಿಗಾರರು ನನ್ನ ಮನೆಗೆ ಹೋಗಿ ನನ್ನ ಬದುಕುಳಿದಿದ್ದೇನೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ನನ್ನ ಬದುಕಿರುವ ಮಾಹಿತಿ ಸಿಗುವವರೆಗೂ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ವಿಮಾನ ನಿಲ್ದಾಣದಲ್ಲಿ ನಾನು ಬರುವಿಕೆಯನ್ನೇ ಕಾಯುತ್ತಿದ್ದ ಕುಟುಂಬಸ್ಥರು ನನ್ನ ಮುಖ ನೋಡಿದ ಕೂಡಲೇ ಮನಸ್ಸಿನಲ್ಲಿ ಸಮಾಧಾನ ಪಟ್ಟುಕೊಂಡಿರುವುದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು ಎಂದು ಸತ್ಯರೂಪ್ ಅವರು ತಮ್ಮ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

No comments:

Post a Comment