Thursday 7 July 2016

ಸ್ಟಾರ್ಟ್ ಅಪ್​ ನಿಧಿಗೆ 10,000 ಕೋಟಿ ರೂ ನೀಡಲು ಕೇಂದ್ರ ಒಪ್ಪಿಗೆ

  ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಸ್ಟಾರ್ಟ್ ಅಪ್​ ನಿಧಿ ಯೋಜನೆಗೆ 10,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಸಂಪುಟ ಸಭೆಯ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.ದೇಶದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಸ್ಟಾರ್ಟ್ ಅಪ್(ನವೋದ್ಯಮ)ಗಳಿಗೆ ಹಣಕಾಸು ನೆರವು ಒದಗಿಸುವ
ದೃಷ್ಟಿಯಿಂದ 10 ಸಾವಿರ ಕೋಟಿ ರೂ. ನಿಧಿಯನ್ನು ಸ್ಥಾಪಿಸಲು ಸಂಪುಟ ಸಮ್ಮತಿ ನೀಡಿದೆ. ಇದರಿಂದ 18 ಲಕ್ಷ ಉದ್ಯೋಗ ಸೃಷ್ಟಿ ಅಂದಾಜು ಮಾಡಲಾಗಿದೆ ಎಂದರು.

ಅಂತೆಯೇ 5.66 ಲಕ್ಷ ಕೋಟಿ ರೂ. ಮೊತ್ತದಲ್ಲಿ 4ಜಿ ಸ್ಪೆಕ್ಟ್ರಂ ಹರಾಜು ಹಾಕುವ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಡಿಸ್ಕಾಮ್ ಅಶ್ಯೂರೆನ್ಸ್ ಯೋಜನೆಗೆ (ಯುಡಿಎವೈ ಯೋಜನೆ) ಸೇರ್ಪಡೆಯಾಗಲು ರಾಜ್ಯಗಳಿಗೆ ನೀಡಲಾದ ಗಡುವನ್ನು ಸಚಿವ ಸಂಪುಟವು ವಿಸ್ತರಿಸಿದೆ ಎಂದು ತಿಳಿಸಿದ್ದಾರೆ.

ಜವಳಿ ಉದ್ಯಮಕ್ಕೆ ಉತ್ತೇಜನ ನೀಡಲು 6,000 ಕೋಟಿ ರೂ. ಪ್ಯಾಕೇಜ್‌ ಹಾಗೂ ಜವಳಿ ಮತ್ತು ಉಡುಪು ಉದ್ಯಮದಲ್ಲಿ 3 ವರ್ಷಗಳ ಒಳಗಾಗಿ 1 ಕೋಟಿ ಉದ್ಯೋಗ ಸೃಷ್ಟಿಸಲು ಅನುಮೋದನೆ ನೀಡಿದೆ. 

ಯುಪಿಎ ಸರ್ಕಾರ ರೂಪಿಸಿದ್ದ ಔಷಧ ನಿಯಂತ್ರಣ ಮಸೂದೆ ಹಿಂಪಡೆದು, ಇನ್ನಷ್ಟು ತಿದ್ದುಪಡಿ ಮಾಡಿ ಜಾರಿಗೆ ತರಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಔಷಧಗಳ ಚಿಕಿತ್ಸಾ ಅಧ್ಯಯನ ಮತ್ತು ಕಾಂಡಕೋಶ ಸಂಶೋಧನೆಗೆ ಸಂಬಂಧಿಸಿದ ನೀತಿ ಕಠಿಣಗೊಳಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಎನ್​ಡಿಎ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಈ ಮಸೂದೆಯಲ್ಲಿ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ.


No comments:

Post a Comment