Tuesday 5 July 2016

ಕಾರವಾರ ಸಂತೆಯಲ್ಲಿ ಒಣಮೀನಿನ ಭರಾಟೆ

ಕಾರವಾರ: ಯಾಂತ್ರೀಕೃತ ಮೀನುಗಾರಿಕೆಗೆ ಸದ್ಯ ಎರಡು ತಿಂಗಳ ನಿರ್ಬಂಧ ಇರುವುದರಿಂದ ಮಾರುಕಟ್ಟೆಗೆ ತಾಜಾ ಮೀನು ಹೆಚ್ಚಾಗಿ ಬರುತ್ತಿಲ್ಲ. ಹೀಗಾಗಿ ಮೀನು ಆಹಾರ ಪ್ರಿಯರು ಇಲ್ಲಿನ ಭಾನುವಾರ ಸಂತೆಯಲ್ಲಿ ಮಾರಾಟವಾಗುವ ಒಣಮೀನಿನತ್ತ ಕಣ್ಣು ಹಾಯಿಸಿದ್ದಾರೆ.ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಸಾಮಾನ್ಯವಾಗಿ ಹಸಿ ಮೀನಿಗೆ ಕೊರತೆ ಎದುರಾಗುತ್ತದೆ. ಈ ಅವಧಿಯಲ್ಲಿ ತಿಂಗಳುಗಟ್ಟಲೇ ಶೇಖರಿಸಿಟ್ಟು ಉಪಯೋಗಿಸಬಹುದಾದ ಒಣ ಮೀನಿಗೆ ಬೇಡಿಕೆ ಹೆಚ್ಚು. ಹೀಗಾಗಿ ಹಿಂದಿನ
ವಾರದ ಸಂತೆಗಳಲ್ಲಿ ಒಣಮೀನು ಭರ್ಜರಿ ವ್ಯಾಪಾರ ಕಂಡಿದೆ. ಈಗಲೂ ಇದರ ಬೇಡಿಕೆ ಕುಸಿದಿಲ್ಲ. ಆದರೆ ಆಗಾಗ ಬೀಳುತ್ತಿರುವ ಜಿಟಿ ಜಿಟಿ ಮಳೆ ವ್ಯಾಪಾರಕ್ಕೆ ಅಡ್ಡಿಯಾಗಿದೆ.

ಒಣಮೀನು ಆಕರ್ಷಣೆ:  ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ 50ಕ್ಕೂ ಅಧಿಕ ಮಹಿಳೆಯರು ನಗರದ ಶಿವಾಜಿ ವೃತ್ತದ ಸಮೀಪ ರಸ್ತೆಯ ಇಕ್ಕೆಲಗಳಲ್ಲಿ ಕುಳಿತು ಒಣಮೀನು ಮಾರಾಟದಲ್ಲಿ ನಿರತರಾಗಿದ್ದಾರೆ.

ಬಂಗುಡೆ, ಸಿಗಡಿ, ತೊರ್ಕೆ, ತೋರಿ, ಪೇಡಿ, ಬಣಗು ಸೇರಿದಂತೆ ತರಹೇವಾರಿ ಒಣ ಮೀನುಗಳು ಗ್ರಾಹಕರನ್ನು ಸೆಳೆಯುತ್ತಿದೆ. ಸಣ್ಣ ಗಾತ್ರದ ಒಣ ಬಂಗುಡೆ 5 ಮೀನಿಗೆ ₹ 100 ಇದೆ. ಇನ್ನೂ ಕೆಲ ಮೀನು ಹಾಗೂ ಸಿಗಡಿ ಬೊಗಸೆ ಅಳತೆಯಲ್ಲಿ ವಿವಿಧ ದರಕ್ಕೆ ಮಾರಾಟಕ್ಕಿದೆ. ಕೆಲವೊಂದು ದೊಡ್ಡ ಮೀನು ₹ 1 ಸಾವಿರದವರೆಗೂ ಇದೆ.

ಕರಾವಳಿ ಜನರ ಪ್ರಮುಖ ಆಹಾರ ಮೀನು. ಹೀಗಾಗಿ ಸ್ವಲ್ಪ ದರ ಹೆಚ್ಚಳವಾದರೂ ಖರೀದಿ ಮಾಡುತ್ತಿರುವುದು ಕಂಡುಬರುತ್ತಿದೆ. ಈಗಾಗಲೇ ಹಲವಾರು ಮಂದಿ ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕೇವಲ ಸ್ಥಳೀಯರಲ್ಲದೇ ಗೋವಾ, ಮುಂಬೈ, ಪೂನಾದಿಂದ ಸಹ ಗ್ರಾಹಕರು ಆಗಮಿಸಿ ಒಣಮೀನನ್ನು ಖರೀದಿಸುವುದು ವಿಶೇಷ.

ಪ್ರತಿವರ್ಷ ಮೇ ತಿಂಗಳಾಂತ್ಯ ಹಾಗೂ ಜೂನ್ ಪ್ರಾರಂಭದಲ್ಲಿ ಕಾರವಾರದ ಮಾರುಕಟ್ಟೆಯಲ್ಲಿ ಒಣ ಮೀನು ಮಾರಾಟ ಜೋರಾಗಿ ನಡೆಯುತ್ತದೆ. ಲಕ್ಷಾಂತರ ರೂಪಾಯಿ ಒಣಮೀನಿನ ವ್ಯವಹಾರ ಇಲ್ಲಿ ನಡೆಯುತ್ತದೆ. ಕಾರವಾರ ಸುತ್ತಮುತ್ತಲಿನ ನೂರಾರು ಮಹಿಳೆಯರು ಈ ಒಣಮೀನಿನ ಮಾರಾಟದಲ್ಲಿ ತೊಡಗುತ್ತಾರೆ. ಬೇಸಿಗೆಯಲ್ಲಿ ಮೀನಿಗೆ ಉಪ್ಪನ್ನು ಬೆರೆಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿರುತ್ತಾರೆ.

‘ಒಣಮೀನು ಸುಮಾರು ಐದಾರು ತಿಂಗಳವರೆಗೆ ಬಳಸಬಹುದು. ಮಳೆಗಾಲದಲ್ಲಿ ಸರಿಯಾಗಿ ಮೀನು ಸಿಗದಿರುವ ಕಾರಣ ತಿಂಗಳುಗಟ್ಟಲೇ ಆಗುವಷ್ಟು ಒಣಮೀನನ್ನು ಈ ಸಂತೆಯಲ್ಲಿ ಖರೀದಿ ಮಾಡುತ್ತೇವೆ. ಅಲ್ಲದೇ ಮಳೆಗಾಲದಲ್ಲಿ ತರಕಾರಿ ಬೆಲೆ ಸಹ ಗಗನಕ್ಕೇರುವುದರಿಂದ ಒಣ ಮೀನನ್ನು ಶೇಖರಿಸಿಟ್ಟುಕೊಳ್ಳುತ್ತೇವೆ’ ಎನ್ನುತ್ತಾರೆ ಗ್ರಾಹಕ ಅಶೋಕ್.

ಸಾಂಪ್ರದಾಯಿಕ ಮೀನುಗಾರಿಕೆ ಚುರುಕು

ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಕಡಲಿನಲ್ಲಿ ಮೀನುಗಳ ಸಂತಾನೋತ್ಪತ್ತಿ ಆಗುವ ಪರ್ವಕಾಲ. ಹೀಗಾಗಿ ಸರ್ಕಾರ ಈ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಸ್ವಲ್ಪ ಹೆಚ್ಚಾಗಿ ನಡೆಯುತ್ತದೆ. ಆದರೆ ಕಡಲಿನಲ್ಲಿ ಅಲೆಗಳ ಆರ್ಭಟ ಇರುವುದರಿಂದ ಹೆಚ್ಚಿನ ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಈ ಮೀನುಗಾರಿಕೆಯಲ್ಲಿ ದೊರೆತ ಮೀನುಗಳು ಮಾರುಕಟ್ಟೆಗೆ ಬರುತ್ತವೆ.

***

No comments:

Post a Comment