Tuesday 5 July 2016

ಭಾರತೀಯ ವಾಯುಸೇನೆಗೆ ತೇಜಸ್

ಬೆಂಗಳೂರು: ಸ್ವದೇಶಿ ನಿರ್ವಿುತ ಲಘು ಯುದ್ಧ ವಿಮಾನ ‘ತೇಜಸ್’ ಶುಕ್ರವಾರ ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು. ರಕ್ಷಣಾ ಕ್ಷೇತ್ರದ ದಶಕಗಳ ಕನಸನ್ನು ನನಸು ಮಾಡುವ ಮೂಲಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್​ಎಎಲ್) ಹೊಸ ಇತಿಹಾಸ ಸೃಷ್ಟಿಸಿದೆ. ಎಚ್​ಎಎಲ್ ಪ್ರಧಾನ ವ್ಯವಸ್ಥಾಪಕ ಶ್ರೀಧರನ್ ಅವರು ಸದರ್ನ್ ಏರ್ ಕಮಾಂಡಿಂಗ್ ಚೀಫ್ ಮಾರ್ಷಲ್ ಜಸ್ಬೀರ್ ವಾಲಿಯಾ ಕೈಗೆ ತೇಜಸ್​ನ ಎರಡು ಯುದ್ಧ ವಿಮಾನಗಳ ಮಾದರಿ ಮತ್ತು ದಾಖಲೆ
ಪತ್ರಗಳನ್ನು ಹಸ್ತಾಂತರಿಸಿದರು. ವಾಯುಪಡೆ ಗ್ರೂಪ್ ಕ್ಯಾಪ್ಟನ್ ಮಾಧವ ಗಂಗಾಚಾರಿ ಮೊದಲ ಹಾರಾಟ ನಡೆಸಿದರು.

ನಾಮಕರಣ ಮಾಡಿದ್ದು ವಾಜಪೇಯಿ!

ಭಾರತ ನಿರ್ವಿುಸುತ್ತಿದ್ದ ಲಘು ಯುದ್ಧ ವಿಮಾನಕ್ಕೆ 2003ರಲ್ಲಿ ಮೊದಲ ಬಾರಿಗೆ ತೇಜಸ್ ಎಂಬ ನಾಮಕರಣ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಈ ನಾಮಕರಣ ಮಾಡಿದ್ದು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ! ಆಗ ಒಟ್ಟು 20 ಹೆಸರುಗಳನ್ನು ಪಟ್ಟಿ ಮಾಡಲಾಗಿತ್ತು. ಈ ಪೈಕಿ ತೇಜಸ್ ಎಂಬುದನ್ನೇ ವಾಜಪೇಯಿ ಆಯ್ಕೆ ಮಾಡಿದ್ದರು. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ವಾಜಪೇಯಿ, ಎರಡು ಎಲ್​ಸಿಎ ಮಾದರಿಗಳನ್ನು ವೀಕ್ಷಿಸಿದ್ದರು.

ತೇಜಸ್ ವಿಶೇಷತೆ

ತೇಜಸ್ ವಿಮಾನವು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಆಕಾಶಮಾರ್ಗದಿಂದಲೇ ಕ್ಷಿಪಣಿ ದಾಳಿ, ಅತ್ಯಾಧುನಿಕ ದಿಕ್ಸೂಚಿ ವ್ಯವಸ್ಥೆ, ಆಕಾಶ ಮಾರ್ಗದಲ್ಲೇ ಇಂಧನ ಭರ್ತಿ ವ್ಯವಸ್ಥೆ, ಬಾಂಬ್ ದಾಳಿಯ ಸಾಮರ್ಥ್ಯ ಹೊಂದಿದೆ. 3 ಸಾವಿರ ಸಲ ಪರೀಕ್ಷಾರ್ಥ ಹಾರಾಟ ನಡೆಸಿದ್ದು, 2 ಸಾವಿರ ಪರೀಕ್ಷೆ ಯಶಸ್ವಿಯಾಗಿವೆ. 2017ರಲ್ಲಿ ತೇಜಸ್ ವಿನೂತನ ಮಾದರಿಯನ್ನು ಎಚ್​ಎಎಲ್ ತಯಾರಿಸಲಿದ್ದು, ‘ಎಂಕೆ1ಎ’ ಎಂದು ನಾಮಕರಣ ಮಾಡಲು ತೀರ್ವನಿಸಿದೆ.

ವಾರ್ಷಿಕ 16 ಯುದ್ಧ ವಿಮಾನತಯಾರಿಸಲು ಎಚ್​ಎಎಲ್ ಸಮರ್ಥವಾಗಿದೆ. ವಾಯುಪಡೆಯಿಂದ 80 ತೇಜಸ್ ವಿಮಾನಗಳಿಗೆ ಬೇಡಿಕೆ ಇದೆ. ವರ್ಷದಲ್ಲಿ 16 ವಿಮಾನ ಪೂರೈಸಲಾಗುವುದು. ಹೊರದೇಶದಿಂದಲೂ ಈ ವಿಮಾನಕ್ಕೆ ಬೇಡಿಕೆ ಬಂದಿದ್ದು, ಪೂರೈಕೆ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

| ಟಿ.ಸುವರ್ಣರಾಜು, ಎಚ್​ಎಎಲ್ ಅಧ್ಯಕ್ಷ

ಮಿಗ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿತ್ತು. ಆದರೆ, ತೇಜಸ್ ವಿಮಾನದಲ್ಲಿ ಇಂಥ ಯಾವುದೇ ಸಮಸ್ಯೆ ಇರುವುದಿಲ್ಲ. ರಕ್ಷಣಾ ಕ್ಷೇತ್ರಕ್ಕೆ ಸ್ವದೇಶಿ ನಿರ್ವಿುತ ತೇಜಸ್ ವಿಮಾನ ಸೇರ್ಪಡೆಯಾಗುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

| ಜಸ್ಬೀರ್ ವಾಲಿಯಾ, ಚೀಫ್ ಏರ್ ಮಾರ್ಷಲ್

ಸುಧಾರಿತ ತೇಜಸ್

2018ರ ಬಳಿಕ ನಿರ್ವಣವಾಗುವ ತೇಜಸ್​ಗೆ ಅಗತ್ಯವಿರುವ ಉಪಕರಣಗಳನ್ನು ವಿದೇಶಿ ಸಂಸ್ಥೆಗಳು ಪೂರೈಕೆ ಮಾಡಲಿದ್ದು, ಅತ್ಯುತ್ತಮ ಗುಣಮಟ್ಟದ ಯುದ್ಧ ವಿಮಾನವಾಗಿ ತೇಜಸ್ ಹೊರಹೊಮ್ಮಲಿದೆ. 2026ರ ವೇಳೆಗೆ ಅತ್ಯಂತ ಸುಧಾರಿತ 100 ತೇಜಸ್ ಮಾರ್ಕ್-ಐಎ ಸೇರ್ಪಡೆಯಾಗಲಿದೆ.

ತೇಜಸ್ ವಿಮಾನ ಮೊದಲ ಹಾರಾಟ ನಡೆಸಿದ್ದು ಹೆಮ್ಮೆ ತಂದಿದೆ. ಇದು ಮೀರಾಜ್ 2000 ವಿಮಾನಕ್ಕಿಂತ ಭಿನ್ನವಾಗಿದೆ.

| ಮಾಧವ ಗಂಗಾಚಾರಿ, ಕ್ಯಾಪ್ಟನ್, ಮೈಜುಮ್ಮೆನಿಸಿದ ಹಾರಾಟ

ತೇಜಸ್ ಮೊದಲ ಹಾರಾಟ ರೋಮಾಂಚಕವಾಗಿತ್ತು. ಭಾರಿ ಶಬ್ದದೊಂದಿಗೆ ಆಕಾಶಕ್ಕೆ ಚಿಮ್ಮಿದ ವಿಮಾನ ಮೇಲೆ ಹೋಗುತ್ತಿದ್ದಂತೆ ತಲೆಕೆಳಗೆ ಮಾಡಿ ಪ್ರದರ್ಶಿಸಿದ ಕಸರತ್ತು ನೋಡುಗರ ಮೈಜುಮ್ಮೆನಿಸುವಂತೆ ಮಾಡಿತು.

No comments:

Post a Comment