Thursday 7 July 2016

ಮೌಢ್ಯ ವಿರೋಧಿ ಕಾಯ್ದೆಯ ಹೆಸರು ಬದಲು; ಶೀಘ್ರದಲ್ಲೇ ಚರ್ಚೆ

  ಬೆಂಗಳೂರು: ಮೂಢನಂಬಿಕೆಗಳಿಗೆ ಕಡಿವಾಣ ಹೇರಲು ಜಾರಿಗೊಳಿಸಲು ಉದ್ದೇಶಿಸಿರುವ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅದರ ಹೆಸರು ಬದಲಿಸಿ ಹೊಸ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜತೆಗೆ ಹಿಂದಿನಿಂದಲೂ ನಡದುಕೊಂಡು ಬರುತ್ತಿರುವ ಕೆಲವು ಆಚರಣೆಗಳ ಬಗ್ಗೆ ನಿಷೇಧ ಹೇರದಿರುವ ಬಗ್ಗೆಯೂ ಚಿಂತನೆ ನಡೆದಿದೆ.ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಎಂಬ ಬದಲು "ಕರ್ನಾಟಕ ನರಬಲಿ ಮತ್ತು ಇತರೆ ಅಮಾನವೀಯ
ದುಷ್ಟ ಮತ್ತು ಅಘೋರಿ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯ್ದೆ' ರೂಪಿಸಲು ಸರ್ಕಾರ ತೀರ್ಮಾನಿಸಿದೆ. ಈ ವಿಧೇಕದಲ್ಲಿ ಬಹುಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ನೋವಾಗದಂತೆ ಪ್ರಸ್ತುತ ಆಚರಣೆಯಲ್ಲಿರುವ ಬಹುತೇಕ ವಿಚಾರಗಳನ್ನು ನಿಷೇಧಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.

ಸೋಮವಾರದಿಂದ ಆರಂಭವಾಗಿರುವ ಬಜೆಟ್‌ ಮುಂದುವರಿದ ಅಧಿವೇಶನದಲ್ಲೇ ಈ ಕುರಿತ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ "ಕರ್ನಾಟಕ ನರಬಲಿ ಮತ್ತು ಇತರೆ ಅಮಾನವೀಯ ದುಷ್ಟ ಮತ್ತು ಅಘೋರಿ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ-2016' ಸಿದ್ಧಪಡಿಸಲಾಗಿದ್ದು, ಶುಕ್ರವಾರ (ಜು. 8) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.

ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದರೆ ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲೇ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದು ಎರಡನೇ ಪ್ರಯತ್ನ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವುದಾಗಿ ಹೇಳಿತ್ತು. ಅದರಂತೆ ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ ಡಾ.ಎಸ್‌.ಜಾಫೆಟ್‌ ಮತ್ತಿತರರನ್ನೊಳಗೊಂಡ ಸಮಿತಿ ರಚಿಸಿದ್ದು, ಈ ಸಮಿತಿ ಕರಡು ವಿಧೇಯಕವೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಗೊಳಿಸುವ ಪ್ರಸ್ತಾವನೆಯನ್ನು ಸರ್ಕಾರ ತಡೆಹಿಡಿದಿತ್ತು. 

ಈ ಮಧ್ಯೆ ರಾಜ್ಯ ಕಾನೂನು ಆಯೋಗ ಕೂಡ ಮೌಡ್ಯ ಪ್ರತಿಬಂಧಕ ಕುರಿತಂತೆ ಕರಡು ವಿಧೇಯಕ ಸಲ್ಲಿಸಿತ್ತು.
ಆದರೆ, ಈ ಎರಡೂ ಕರಡು ವಿಧೇಯಕಗಳಲ್ಲಿ ಮೂಢನಂಬಿಕೆ ಜತೆಗೆ ಕೆಲವು ನಂಬಿಕೆ, ಆಚರಣೆಗಳನ್ನು ಕೂಡ ನಿಷೇಧಿಸಬೇಕು ಎಂಬ ಪ್ರಸ್ತಾಪವಿತ್ತು. ಆದರೆ, ಈ ವಿಧೇಯಕಗಳನ್ನು ಯಥಾವತ್‌ ಜಾರಿಗೊಳಿಸಿದರೆ ಬಹುಸಂಖ್ಯಾತ ಹಿಂದೂಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಎರಡನ್ನೂ ಪರಿಶೀಲಿಸಿ ಹೊಸತಾಗಿ ಕರಡು ವಿಧೇಯಕ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಲಾಗಿತ್ತು.
ಅದರಂತೆ ಸಮಾಜ ಕಲ್ಯಾಣ ಇಲಾಖೆ ಈ ಹಿಂದೆಯೇ ಒಂದು ಕರಡು ಸಿದ್ಧಪಡಿಸಿ ಸಚಿವ ಸಂಪುಟ ಸಭೆಗೆ ಸಲ್ಲಿಸಿತ್ತು. ಆದರೆ, ಅದರಲ್ಲೂ ಕೆಲ ಅಂಶಗಳು ಬಹುಸಂಖ್ಯಾತ ಹಿಂದೂಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿದ್ದುದರಿಂದ ಇನ್ನಷ್ಟು ಅಧ್ಯಯನ ನಡೆಸಿ ಅಂತಿಮ ಕರಡು ಸಿದ್ಧಪಡಿಸುವ ಜವಾಬ್ದಾರಿಯನ್ನು ಕಾನೂನು ಸಚಿವರಿಗೆ ವಹಿಸಲಾಗಿತ್ತು. ಕಾನೂನು ಸಚಿವರು ಈ ಕುರಿತು ಸಲಹೆಗಳನ್ನು ನೀಡಲು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದ ತಂಡಕ್ಕೆ ಸೂಚಿಸಿದ್ದರು. 

ಸಲಹೆ ನೀಡುವ ಮುನ್ನ ನಂಬಿಕೆಗಳು ಯಾವುವು, ಮೂಢನಂಬಿಕೆ ಯಾವುದು ಎಂಬುದನ್ನು ವಿಂಗಡಿಸಿ ನೀಡಬೇಕು ಎಂದೂ ತಿಳಿಸಲಾಗಿತ್ತು.

ನಂಬಿಕೆ, ಆಚರಣೆಗೆ ಧಕ್ಕೆಯಿಲ್ಲ: ಇದೀಗ ಈ ಸಮಿತಿ ನೀಡಿರುವ ಸಲಹೆಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಆಲಿಸಿ ಕಾನೂನು ಇಲಾಖೆ ಕರ್ನಾಟಕ ನರಬಲಿ ಮತ್ತು ಇತರೆ ಅಮಾನವೀಯ ದುಷ್ಟ ಮತ್ತು ಅಘೋರಿ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ-2016 ರೂಪಿಸಿದೆ. ಇದರಲ್ಲಿ ಹಿಂಸೆ ಪ್ರತಿಪಾದಿಸುವ ಮತ್ತು ಒಬ್ಬರ ಆಚರಣೆಯಿಂದ ಇನ್ನೊಬ್ಬರಿಗೆ ದೈಹಿಕ ಅಥವಾ ಮಾನಸಿಕವಾಗಿ ನೋವಾಗುವ ಆಚರಣೆಗಳನ್ನು ನಿಷೇಧಿಸುವ ಅಂಶಗಳಿವೆ. ಜತೆಗೆ ಮಾಟ ಮಾಡಿಸುವಂತಹ ಅಮಾನವೀಯ ಅಂಶಗಳು ಹಾಗೂ ಪ್ರಾಣಿಬಲಿಗೆ ಅವಕಾಶವಿರುವುದಿಲ್ಲ. ಅಲ್ಲದೆ, ಇನ್ನೊಬ್ಬರ ಧಾರ್ಮಿಕ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ನಡೆಸುವ ಅಮಾನವೀಯ ಆಚರಣೆಗಳು ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದರೆ, ಬಹಳಷ್ಟು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಮತ್ತು ಇನ್ನೊಬ್ಬರಿಗೆ ತೊಂದರೆ ನೀಡದಂತಹ ಆಚರಣೆಗಳಿಗೆ ಯಾವುದೇ ನಿರ್ಬಂಧ ಹೇರದಿರಲು ನಿರ್ಧರಿಸಿದೆ.

ಮಡೆ ಮಡಸ್ನಾನ, ಕೆಂಡ ಹಾಯುವುದು, ಉತ್ಸವ ಸಂದರ್ಭದಲ್ಲಿ ಎಳೆಯ ಮಕ್ಕಳನ್ನು ಮೇಲಿನಿಂದ ಕೆಳಕ್ಕೆ ಎಸೆಯುವುದು ಸೇರಿದಂತೆ ಕೆಲವೊಂದು ಅಮಾನವೀಯ ಅಂಶಗಳನ್ನು ನಿಷೇಧಿಸಬೇಕು ಎಂಬ ಉದ್ದೇಶ ಇದೆಯಾದರೂ ಸಂಪುಟ ಸದಸ್ಯರಲ್ಲೇ ಈ ಬಗ್ಗೆ ಒಮ್ಮತಾಭಿಪ್ರಾಯವಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಮಡೆ ಮಡಸ್ನಾನ ಕುರಿತ ವಿವಾದ ಸುಪ್ರೀಂ ಕೋರ್ಟ್‌ ಮುಂದಿದೆ. ಹೀಗಾಗಿ ಇಂತಹ ಅಂಶಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.



No comments:

Post a Comment