Thursday 7 July 2016

ಏಕರೂಪ ನಾಗರಿಕ ಸಂಹಿತೆ ಹಾಗೆಂದರೇನು?

 ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತಂತೆ ಕೇಂದ್ರ ಸರ್ಕಾರ, ಕಾನೂನು ಆಯೋಗಕ್ಕೆ ಪರಾಮರ್ಶೆ ನಡೆಸುವಂತೆ ಸೂಚನೆ ನೀಡಿದೆ. ಇದು ದೇಶದಲ್ಲಿ ಮತ್ತೆ ಈ ಕಾಯ್ದೆ ಕುರಿತ ಚರ್ಚೆ ತೀಕ್ಷ್ಣಗೊಳ್ಳಲು ಕಾರಣವಾಗಿದೆ.ಸದ್ಯ ದೇಶದಲ್ಲಿ ವಿವಿಧ ಧರ್ಮಗಳಿಗೆ ಅನುಸಾರವಾಗಿ ವೈಯಕ್ತಿಕ ಕಾನೂನುಗಳು ಬೇರೆ ಬೇರೆಯಾಗಿದ್ದು, ಏಕರೂಪದಲ್ಲಿ ತರುವುದಕ್ಕೆ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳಿವೆ. ಇದೇ ಕಾರಣದಿಂದ ಕೇಂದ್ರ ಸರ್ಕಾರದ ನಡೆಮಹತ್ವ
ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಅಂದರೇನು? ಅವುಗಳ ಕುರಿತವಿಚಾರಗಳು ಇಲ್ಲಿವೆ.ಏನಿದು ಏಕರೂಪ ನಾಗರಿಕ ಸಂಹಿತೆ?ಭಾರತ ಹಲವು ಧರ್ಮ-ಜಾತಿಗಳ ದೇಶ. ವಿವಿಧ ರೀತಿ ಆಚರಣೆಗಳು ಅಸ್ತಿತ್ವದಲ್ಲಿದೆ. ಸದ್ಯದ ಕಾನೂನುಗಳೂ ಆಯಾ ಧರ್ಮದ ವಿವಿಧ ಅಭ್ಯಾಸಗಳಿಗೆ ಅನುಗುಣವಾಗಿದೆ. ಇದರಿಂದಾಗಿ ವೈಯಕ್ತಿಕ ಕಾನೂನುಗಳೂ ವಿವಿಧ ಧರ್ಮಗಳಿಗೆ ಬೇರೆ ಬೇರೆಯ ರೀತಿಯಲ್ಲಿವೆ. ಇದಕ್ಕೆ ಹೊರತಾಗಿ ವೈಯಕ್ತಿಕ ಕಾನೂನುಗಳಾದ, ವಿಶೇಷವಾಗಿ ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರ ವಿಚಾರಗಳಿಗೆ ಏಕರೂಪದ ಕಾನೂನು ತರುವುದು ಇದರ ಉದ್ದೇಶ. ಇದನ್ನೇ ಏಕರೂಪ
ನಾಗರಿಕ ಸಂಹಿತೆ ಎನ್ನುತ್ತಾರೆ. ಸದ್ಯ ವಿಚ್ಛೇದನವನ್ನು ತೆಗೆದುಕೊಂಡರೆ, ಹಿಂದೂಗಳಲ್ಲೊಂದು, ಮುಸಲ್ಮಾನರಲ್ಲೊಂದು, ಕ್ರೈಸ್ತರಲ್ಲೊಂದು ಎಂಬಂತೆ ಕಾನೂನು ಜಾರಿಯಲ್ಲಿದೆ.

ಬೇಡಿಕೆ ಶುರುವಾದ್ದೆಲ್ಲಿಂದ?
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಬ್ರಿಟಿಷರ ಕಾಲದಿಂದ ಅದು ಹುಟ್ಟಿದೆ. ಬ್ರಿಟಿಷ್‌ ಆಡಳಿತದ ವೇಳೆ ಭಾರತದಲ್ಲಿ ಏಕರೂಪದ ಕಾನೂನು ಬೇಕು ಎಂಬ ಬಗ್ಗೆ ದಿ ಲೆಕ್ಸ್‌ ಲೊಸಿ ವರದಿ 1840ರಲ್ಲಿ ಸಲ್ಲಿಕೆಯಾಗಿತ್ತು. ಸ್ವಾತಂತ್ರ್ಯನಂತರವೂ ಸಂವಿಧಾನ ರಚನೆ ಸಂದರ್ಭ ಇದು ಚರ್ಚೆಯಾಗಿತ್ತು. ಬಳಿಕ ಸಂವಿಧಾನ ರಚನೆ ಸಂದರ್ಭ ಏಕರೂಪ ನಾಗರಿಕ ಸಂಹಿತೆ ಅಳವಡಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಲಾಗಿತ್ತು. ಸಂವಿಧಾನದ 44ನೇ ಕಲಂನಲ್ಲಿ ಈ ಬಗ್ಗೆ ಹೇಳಲಾಗಿದೆ. 1985ರ ಶಾ ಬಾನು ಪ್ರಕರಣದ ಬಳಿಕ ಏಕರೂಪ
ನಾಗರಿಕ ಸಂಹಿತೆ ಕುರಿತ ಚರ್ಚೆಗಳು ತೀವ್ರಗೊಂಡಿದ್ದವು. 2014ರ ಚುನಾವಣೆ ವೇಳೆ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ತರುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಆ ಬಳಿಕ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೂಡ ಈ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು. 2015 ಅ.13ರಂದು ಸುಪ್ರೀಂ ಕೋರ್ಟ್‌ ದೇಶದಲ್ಲಿ ಹಲವು ಧಾರ್ಮಿಕ ಕಟ್ಟುಪಾಡುಗಳ "ವೈಯಕ್ತಿಕ ಕಾನೂನುಗಳಿಂದ' ಗೊಂದಲವಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಏಕರೂಪದ ನಾಗರಿಕ ಸಂಹಿತೆ ಜಾರಿ ಕುರಿತಂತೆ ತನ್ನ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದಿತು.

ಗೋವಾದಲ್ಲಿದೆ ಅರೆ ಸಂಹಿತೆ!
ಪೂರ್ಣವಾದ ಕಾನೂನು ಅಲ್ಲದಿದ್ದರೂ, ಅದಕ್ಕೆ ಸನಿಹವಾದ ಏಕರೂಪ ನಾಗರಿಕ ಸಂಹಿತೆಯೊಂದು ಗೋವಾದಲ್ಲಿದೆ. ಭಾರತದ ಬೇರಾವ ರಾಜ್ಯಗಳಲ್ಲೂ ಈ ರೀತಿಯ ಕಾನೂನಿಲ್ಲ. ಗೋವಾ ನಾಗರಿಕ ಸಂಹಿತೆ/ ಗೋವಾ ಫ್ಯಾಮಿಲಿ ಲಾ ಹೆಸರಲ್ಲಿ ಇದು ಅಸ್ತಿತ್ವದಲ್ಲಿದೆ. ಭಾರತದ ಉಳಿದ ರಾಜ್ಯಗಳಲ್ಲಿರುವ ವೈಯಕ್ತಿಕ ಕಾನೂನುಗಳು ಇಲ್ಲಿಲ್ಲ. ಮದುವೆ,
ವಿಚ್ಛೇದನ, ಆಸ್ತಿ ವಿಚಾರದಲ್ಲಿ ಇಲ್ಲಿನ ಕಾನೂನಿಗೆ ವ್ಯತ್ಯಾಸವಿದೆ. ವಿವಾಹಿತ ಪುರುಷ-ಮಹಿಳೆಗೆ ಆಸ್ತಿ ಮೇಲೆ ಸಮಾನ ಹಕ್ಕಿದೆ. ವಿಚ್ಛೇದನವಾದರೆ ಆಸ್ತಿ ಸಮಾನ ಹಂಚಿಕೆಯಾಗುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಅರ್ಧಷ್ಟರ ಮೇಲೆ
ಮಕ್ಕಳಿಗೆ ಹಕ್ಕಿರುತ್ತದೆ. ಇನ್ನು ಮುಸ್ಲಿಮರು ಬಹುಪತ್ನಿತ್ವ ಪಾಲಿಸುವಂತಿಲ್ಲ. ಅಲ್ಲದೇ ಮೌಖೀಕ ವಿಚ್ಛೇದನಕ್ಕೆ ನಿರ್ಬಂಧವಿದೆ.

1985ರ ಶಾ ಬಾನು ಪ್ರಕರಣವೇನು?
ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಹೇಳಿದ ಪ್ರಕರಣವಿದು. ಶಾ ಬಾನು ಅವರು 5 ಮಕ್ಕಳ ತಾಯಿಯಾಗಿದ್ದು, ತಮ್ಮ ಪತಿಯಿಂದ 1978ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ತಮ್ಮ ಮಾಜಿ
ಗಂಡನಿಂದ ಜೀವನಾಂಶ ಪಡೆವ ಹಕ್ಕಿದೆ ಎಂದು ಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತಂತೆ ಅವರು ಸುಪ್ರೀಂ ಮೆಟ್ಟಿಲೇರಿದ್ದು, ಜೀವನಾಂಶ ನೀಡುವಂತೆ ನ್ಯಾಯಪೀಠ ಆದೇಶಿಸಿತ್ತು. ಆದರೆ ಇದು ಮುಸ್ಲಿಂ ವೈಯಕ್ತಿಕ ಕಾನೂನುಗಳಿಗೆ ವಿರುದ್ಧ ಎಂದು ಆಗಿನ ರಾಜೀವ್‌ ಗಾಂಧಿ ಅವರ ಸರ್ಕಾರ, ಮುಸ್ಲಿಂ ಮುಖಂಡರ ಒತ್ತಡದಿಂದಾಗಿ ಇದಕ್ಕೆ ವಿರುದ್ಧವಾದ ಮುಸ್ಲಿಂ ಮಹಿಳೆರ (ರಕ್ಷಣೆ ಮತ್ತು ಹಕ್ಕುಗಳು, ವಿಚ್ಛೇದನ ಕುರಿತ ಹಕ್ಕು) ಕಾಯ್ದೆ 1986ನ್ನು ಜಾರಿಗೆ ತಂದಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಮುಸ್ಲಿಂ ಕಾನೂನು ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಮುಸ್ಲಿಂ ಮಹಿಳೆಯರಿಗೆ ಹಕ್ಕು ನಿರಾಕರಿಸಲಾಗಿದೆ ಎಂಬ ವಾದಗಳು ಶುರುವಾಗಿದ್ದವು. ಇತ್ತೀಚೆಗೆ ಮುಸಲ್ಮಾನ ಸಮುದಾಯದಲ್ಲಿರುವ ತ್ರಿವಳಿ ತಲಾಖ್‌ ಮತ್ತು ಬಹುಪತ್ನಿತ್ವ ವಿರುದ್ಧ ಹಲವು ಮಹಿಳೆಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಪದ್ಧತಿಯನ್ನು ಸಂವಿಧಾನ ಚೌಕಟ್ಟಿನಲ್ಲಿ ಒರೆಗೆ ಹಚ್ಚಿ ನೋಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. 

ಪರ-ವಿರೋಧ ಚರ್ಚೆ
ಏಕರೂಪ ನಾಗರಿಕ ಸಂಹಿತೆ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಯಿದೆ. ಇದು ಸಮಾನತೆಯನ್ನು ಪ್ರತಿಪಾದಿಸುತ್ತದೆ, ಮಹಿಳೆಯರ ಹಕ್ಕುಗಳಿಗೆ ಪೂರಕವಾಗಿದೆ ಎಂಬ ವಾದಗಳು ಮುನ್ನೆಲೆಯಲ್ಲಿವೆ. ಅಲ್ಲದೇ ನ್ಯಾಯಾಂಗದ
ಮಹತ್ವದ ಸಮಯ ಕಾಪಿಡಲು ಇದು ಪ್ರಯೋಜನಕಾರಿ, ದೇಶದಾದ್ಯಂತ ವಿವಿಧ ಸಮುದಾಯಗಳಿಗೆ ಬೇರೆ ಬೇರೆ ಕಾನೂನುಗಳ ಬದಲು ಏಕರೂಪದ್ದು ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವಿದೆ. ಇದೇ ರೀತಿ, ಭಾರತದಲ್ಲಿ
ಅಲ್ಪಸಂಖ್ಯಾತರಿಗೆ ತಮ್ಮ ಧರ್ಮ, ಆಚರಣೆ, ಸಂಪ್ರದಾಯವನ್ನು ಆಚರಿಸುವ ಹಕ್ಕಿದೆ. ಜೊತೆಗೆ ವೈಯಕ್ತಿಕ ಕಾನೂನುಗಳಡಿ ಆಸ್ತಿ, ವಿವಾಹ, ವಿಚ್ಛೇದನ ಇತ್ಯಾದಿಗಳ ಬಗ್ಗೆ ನ್ಯಾಯ ಪಡೆವ ಅವಕಾಶವಿದೆ. ಇದು ಭಾರತದ ಜಾತ್ಯತೀತ ರೂಪಕ್ಕೆ ಹೆಚ್ಚು ಪೂರಕವಾಗಿದೆ. ಆದರೆ ಏಕರೂಪದ ಕಾನೂನು ಇದನ್ನು ತಡೆಯುತ್ತದೆ. ಪ್ರತಿ ಸಮುದಾಯದ ಆಚರಣೆಗಳು, ಪಾಲನೆಗಳು ಬೇರೆ ಬೇರೆಯದ್ದಾಗಿದೆ. ಸದ್ಯ ಇರುವ ಕಾನೂನುಗಳು (ಸಂವಿಧಾನದ 45ನೇ ಮತ್ತು 15ನೇ ಕಲಂ)ಗಳು ಲಿಂಗತಾರತಮ್ಯ ನಿಯಂತ್ರಿಸುವ ಬಗ್ಗೆ ಪ್ರಬಲವಾಗಿದ್ದು,  ಏಕರೂಪ ನಾಗರಿಕ ಸಂಹಿತೆಯಿಂದ ವೈಯಕ್ತಿಕ ಆಚರಣೆಗಳಿಗೆ ಧಕ್ಕೆ ತರುವಂಥದ್ದು ಎಂಬ ಮಾತಿದೆ. 

ಸಂಹಿತೆ ಜಾರಿಯಾದ್ರೆ ಏನಾಗುತ್ತೆ?
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ, ವಿವಿಧ ಧರ್ಮಗಳಿಗೆ ಇರುವ ವೈಯಕ್ತಿಕ ಕಾನೂನುಗಳು ರದ್ದಾಗಲಿವೆ. ಕೌಟುಂಬಿಕ, ವಿವಾಹ, ವಿಚ್ಛೇದ, ಆಸ್ತಿ ಹಂಚಿಕೆ ಇತ್ಯಾದಿಗಳಿಗೆಲ್ಲ ಒಂದೇ ರೀತಿಯ ಕಾನೂನು ಅಸ್ತಿತ್ವಕ್ಕೆ
ಬರಲಿದೆ. ಇದು ಎಲ್ಲಾ ಧರ್ಮ, ಎಲ್ಲಾ ವರ್ಗಗಳಿಗೆ ಸೇರಿದ ಎಲ್ಲರಿಗೂ ಸಮನಾಗಿ ಅನ್ವಯ ಆಗಲಿದೆ. ಸಂವಿಧಾನದ 44ನೇ ಕಲಂನಲ್ಲಿ ಇದು ಸೇರ್ಪಡೆಯಾಗಲಿದೆ.



No comments:

Post a Comment