Thursday 7 July 2016

ವೇತನ ತಾರತಮ್ಯ ಅಧ್ಯಯನಕ್ಕೆ ಸಮಿತಿ

 ಬೀದರ್: ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿನ ಪೊಲೀಸರ ವೇತನ ಹಾಗೂ ಭತ್ಯೆ ಸಂಬಂಧ ತಾರತಮ್ಯ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಐವರು ಹಿರಿಯ ಐಪಿಎಸ್ ಅಧಿಕಾರಿಗಳುಳ್ಳ ವಿಶೇಷ ಸಮಿತಿ ರಚಿಸಿದೆ. ಬೀದರ್ ಮೂಲದವರಾದ ಕರ್ನಾಟಕ ಪೊಲೀಸ್ ನೇಮಕಾತಿ (ರಿಕ್ರೂಟ್​ವೆುಂಟ್) ಎಡಿಜಿಪಿ ರಾಘವೇಂದ್ರ ಔರಾದಕರ್ ಅವರನ್ನು ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ
ಸಭೆಯಲ್ಲಿ ಪೊಲೀಸರ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಈ ಸಭೆ ನಿರ್ಣಯದಂತೆ ಕರ್ನಾಟಕ ಹಾಗೂ ಇತರೆ ರಾಜ್ಯಗಳ ಪೊಲೀಸರ ವೇತನ ಹಾಗೂ ಭತ್ಯೆಯಲ್ಲಿರುವ ತಾರತಮ್ಯದ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಿ

ಸರ್ಕಾರ ಇದೀಗ ಆದೇಶ ಹೊರಡಿಸಿದೆ. ಕಳೆದ ತಿಂಗಳು ರಾಜ್ಯದಲ್ಲಿ ಪೊಲೀಸರು ಪ್ರತಿಭಟನೆ ನಡೆಸಲು ಮುಂದಾದ ಬೆಳವಣಿಗೆ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೆಎಸ್​ಆರ್​ಪಿ ಎಡಿಜಿಪಿ ಕಮಲ್ ಪಂತ್, ಸಿಐಡಿ ಎಡಿಜಿಪಿ ಸಿ.ಎಚ್.ಪ್ರತಾಪರೆಡ್ಡಿ, ಸಿಐಡಿ ಐಜಿಪಿ ಹೇಮಂತ ನಿಂಬಾಳ್ಕರ್ ಸದಸ್ಯರಾಗಿದ್ದಾರೆ. ಹೆಡ್​ಕ್ವಾರ್ಟರ್ ಐಜಿಪಿ ಡಾ.ಕೆ.ರಾಮಚಂದ್ರರಾವ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಮಿತಿ ಸಮಗ್ರ ಅಧ್ಯಯನ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಸೂಚಿಸಲಾಗಿದೆ.

ಪೊಲೀಸರ ವೇತನ ಹಾಗೂ ಭತ್ಯೆ ಅಸಮಾನತೆ ಕುರಿತಂತೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ತಕ್ಷಣದಿಂದಲೇ ಸಮಿತಿ ಕಾರ್ಯಪ್ರವೃತ್ತವಾಗಲಿದ್ದು, ಸರ್ಕಾರ ಸೂಚಿಸಿದ ಕಾಲಮಿತಿಯೊಳಗೆ ವರದಿ ಸಲ್ಲಿಸಲಾಗುವುದು.

ರಾಘವೇಂದ್ರ ಔರಾದಕರ್, ಎಡಿಜಿಪಿ ಹಾಗೂ ಸಮಿತಿ ಅಧ್ಯಕ್ಷ

No comments:

Post a Comment