Tuesday 5 July 2016

ಶಾಲೆಗಳಿಗೆ ಪೀಠೋಪಕರಣ ವಿತರಣೆ – ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

 ಚಾಮರಾಜನಗರ .ಜು.5-ಜಿಲ್ಲೆಯ ಶಾಲೆಗಳಿಗೆ ಪೀಠೋಪಕರಣ ಮತ್ತು ಶಾಲಾ ಕಟ್ಟಡಕ್ಕೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅದ್ಯಕ್ಷ ಕೆ.ಪಿ.ಸದಾಶಿವಮೂರ್ತಿ ಸೂಚಿಸಿದರು.ಅವರು ಜಿ.ಪಂ. ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳಿಗೂ ಶಿಕ್ಷಕರು ಹಾಗೂ ಪೀಠೋಪಕರಣ,
ಕುಡಿಯುವ ನೀರು, ಶೌಚಾಲಯ ಅಗತ್ಯ ಕಟ್ಟಡಗಳ ವ್ಯವಸ್ಥೆ ಮಾಡಲಾಗಿದೆಯೇ ಎಂದು ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಉತ್ತಮ ಗುಣಮಟ್ಟದ ಪೀಠೋಪಕರಣಗಳನ್ನು ತುರ್ತಾಗಿ ಖರೀದಿಸಿ ಶಾಲೆಗಳಿಗೆ ಒದಗಿಸುವಂತೆ ಯೋಜನಾ ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ ರವರಿಗೆ ಸೂಚನೆ ನೀಡಿದರು.

ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ನಿಗಧಿತ ಅನುದಾನವು ಒಟ್ಟು 3356.17 ಇದ್ದು, ರಾಷ್ಟ್ರೀಯ ಕಾರ್ಯಕ್ರಮದಡಿ ಪ್ರಾಥಮಿಕ ಶಿಕ್ಷಣಕ್ಕೆ 2671.97 ಲಕ್ಷ, ಗುತ್ತಿಗೆ ಆಧಾರದ ಶಿಕ್ಷಕರ ಸಂಭಾವನೆ-3.00 ಲಕ್ಷ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ 7.20 ಲಕ್ಷ, ಖಾಸಗಿ ಪ್ರೌಢಶಾಲೆಗಳಿಗೆ ಸಹಾಯಾನುದಾನ-594.00 ಲಕ್ಷ, ಧನಸಹಾಯ ಮತ್ತು ಫೀಜಿನ ಮರುಪಾವತಿ (ಆಂಗ್ಲೋ ಇಂಡಿಯನ್ ವಿದ್ಯಾರ್ಥಿಗಳನ್ನೋಳಗೊಂಡಂತೆ) ಮತ್ತು ವಿದ್ಯಾವಿಕಾಸಕ್ಕೆ-30.00 ಲಕ್ಷ ಹಾಗೂ ಸೇರ್ಪಡೆ ಮತ್ತು ಮಾರ್ಪಾಡು-25.00 ಲಕ್ಷ, ಸಾಮಾಗ್ರಿಗಳ ಸರಬರಾಜು-25.00 ಲಕ್ಷ ಒಟ್ಟು ನಿಗಧಿತ ಅನುದಾನ ರೂ.3356.17 ಲಕ್ಷಗಳು ನಿಗಧಿ ಮಾಡಲಾಗಿದೆ ಎಂದು ತಿಳಿಸಿದರು.

ಶಾಲೆಗಳ ಬಿಸಿಯೂಟ ಕಾರ್ಯಕ್ರಮದಲ್ಲಿ 1ನೇ ತರಗತಿಯಿಂದ 5ನೇ ತರಗತಿಯ ಮಕ್ಕಳಿಗೆ ಒಂದು ಮಗುವಿಗೆ ಪ್ರತಿದಿನಕ್ಕೆ 3.76 ಪೈಸೆಯಂತೆ ಹಾಗೂ 6ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಒಂದು ಮಗುವಿಗೆ 5.35 ಪೈಸೆಯಂತೆ ನಿಗಧಿಯಾರುತ್ತದೆ. ಮತ್ತು ಕ್ಷೀರ ಭಾಗ್ಯ ಯೋಜನೆಯಲ್ಲಿ ಪ್ರತಿ ಮಗುವಿಗೆ 5.18 ಪೈಸೆಯಂತೆ ವಾರದಲ್ಲಿ ಮೂರು ದಿನಗಳು ಮಾತ್ರ ಮಕ್ಕಳಿಗೆ ಹಾಲನ್ನು ಕೊಡುವುದಾಗಿ ತಿಳಿಸಿದರು.

ಬಿಸಿಯೂಟ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 60% ಹಾಗೂ ರಾಜ್ಯ ಸರ್ಕಾರದಿಂದ 40% ರಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು. ಅಕ್ಕಿ, ಬೇಳೆ, ಎಣ್ಣೆ ಎಲ್ಲಾ ಸಾಮಾಗ್ರಿಗಳನ್ನು ಕೆ.ಎಫ್.ಸಿ. ಯಿಂದ ಟೆಂಡರ್ ಮೂಲಕ ಪಡೆಯಾಗುವುದು, ಹಾಗೂ ಕೆ.ಎಂ.ಎಫ್.ನಿಂದ ಹಾಲಿನ ಪುಡಿಯನ್ನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸದಸ್ಯ ಕೆ.ಎಸ್. ಮಹೇಶ್ ಮಾತನಾಡಿ, ಬಿಸಿಯೂಟ ಯೋಜನೆಯಡಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಅಡುಗೆ ಮಾಡುವ ಕೊಠಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಇಲಾಖಾಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ಡಿ. ಲೇಖಾ, ರತ್ನಮ್ಮ, ಜಯಂತಿ, ಜೆ. ಯೋಗೇಶ್, ಮರುಗದಮಣಿ, ಉಪಕಾರ್ಯದರ್ಶಿ ಮುನಿರಾಜಪ್ಪ ಹಾಗು ಅಧಿಕಾರಿಗಳು ಭಾಗವಹಸಿದ್ದರು.

2 comments: