Tuesday 5 July 2016

ಆಸ್ತಿ ತೆರಿಗೆ ಪಾವತಿಗೆ ನೂತನ ತಂತ್ರಾಂಶ

ಬೆಂಗಳೂರು: ಮಹಾನಗರ ಪಾಲಿಕೆಯು ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲು ಹೊಸದಾದ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಅದರ ಮೂಲಕ ತೆರಿಗೆ ಪಾವತಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ.‘ಹೊಸದಾಗಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡುವ ಸ್ವತ್ತುಗಳು (2008–16 ಮತ್ತು 2016–17ನೇ ಬ್ಲಾಕ್ ಅವಧಿ) ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ತೆರಿಗೆ ಪಾವತಿಸದಿರುವ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸಲು ಹಾಲಿ ಇರುವ
ತಂತ್ರಾಂಶದಲ್ಲಿ ಅವಕಾಶವಿರಲಿಲ್ಲ. ಹೀಗಾಗಿ ಸದ್ಯದ ತಂತ್ರಾಂಶದಲ್ಲಿ ತಿದ್ದುಪಡಿ ಮಾಡಿ ಲಾಗಿನ್ ಐ.ಡಿ ಮತ್ತು ಪಾಸ್‌ವರ್ಡ್‌ಗಳನ್ನು ನೀಡಲಾಗಿದೆ. ಆಸ್ತಿ ತೆರಿಗೆ ಪಾವತಿಸದಿರುವವರು ಸದರಿ ಲಾಗಿನ್‌ಗಳಲ್ಲೇ ತೆರಿಗೆ ಪಾವತಿಸಬೇಕು’ ಎಂದು ಬಿಬಿಎಂಪಿ ತೆರಿಗೆ ಮತ್ತು  ಆರ್ಥಿಕ ಸ್ಥಾಯಿ ಸಮಿತಿಯು ಸುತ್ತೋಲೆಯಲ್ಲಿ ತಿಳಿಸಿದೆ.

‘ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರುವ 100 ವಾರ್ಡ್‌ಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ಗುರುತಿಸಿ ಅವುಗಳಿಗೆ ಆಸ್ತಿ ತೆರಿಗೆ  ನಿಗದಿಪಡಿಸಿ  ಇ–ಗವರೆನ್ಸ್  ತಂತ್ರಾಂಶದಲ್ಲಿ ಹೊಸ ವಿವರಗಳನ್ನು ಸಲ್ಲಿಸಬೇಕು. ಸಹಾಯಕ ಕಂದಾಯ ಅಧಿಕಾರಿಗಳಿಗೆ ನೀಡಿರುವ ಲಾಗಿನ್‌ನಲ್ಲಿ ಎಲ್ಲವನ್ನೂ ನಮೂದಿಸಬೇಕು’ ಎಂದು ಬಿಬಿಎಂಪಿ ತೆರಿಗೆ ಮತ್ತು  ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್‌ ತಿಳಿಸಿದರು.

‘2008–09 ನೇ ಸಾಲಿನ ನಂತರದಲ್ಲಿ ಆಸ್ತಿ ತೆರಿಗೆ ಪಾವತಿಸದೇ ಇರುವ ಪ್ರಕರಣಗಳಲ್ಲಿ ಸಹ ಸಹಾಯಕ ಕಂದಾಯ ಅಧಿಕಾರಿಗಳ ಮಟ್ಟದಲ್ಲಿ ಆಸ್ತಿ ತೆರಿಗೆ ವಿವರಗಳನ್ನು ನಮೂದಿಸಬೇಕು.  ಹೊಸದಾಗಿ ಸೇರ್ಪಡೆಗೊಂಡಿರುವ ಪ್ರದೇಶಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದು, ಅಂತಹ ಸ್ವತ್ತುಗಳನ್ನು ಗುರುತಿಸಿ ತೆರಿಗೆ ನಿಗದಿಪಡಿಸಲು ಸೂಚನಾ ಪತ್ರವನ್ನು ಹೊರಡಿಸಲಾಗಿದೆ. ಮಾಹಿತಿಗಳನ್ನು ಲಾಗಿನ್‌ಗಳ ಮೂಲಕ ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

No comments:

Post a Comment