ಕೋಲಾರ: ತಾಲೂಕಿನ ಹುತ್ತೂರು ಹೋಬಳಿ ಹೊಳಲಿ ಹೊಸೂರು ಮತ್ತು ಹುತ್ತೂರು ಗ್ರಾಮಗಳಲ್ಲಿ ಡಿಸಿಸಿ ಬ್ಯಾಂಕ್ನ ಜನಪ್ರಿಯ ಮಹಿಳೆಯರ ಮಡಿಲು ತುಂಬುವ ಸಾಲ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಚಾಲನೆ ನೀಡಿದರು.
ಎರಡೂ ಗ್ರಾಮಗಳ ನಾಲ್ಕು ಮಹಿಳಾ ಸಂಘಗಳಿಗೆ ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿ ದರದ 33 ಲಕ್ಷ ರೂ. ಸಾಲ ವಿತರಿಸಲಾಯಿತು. ಮಹಿಳೆಯರು ಲಾಭದಾಯಕ ಚಟುವಟಿಕೆಗಳಿಗೆ ಬಳಸಿಕೊಂಡು ಸ್ವಾವಲಂಬಿ ಜೀವನದ ಜತೆಗೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ಒದಗಿಸುತ್ತಿರುವ 100ರೂ. ಗೆ ಕೇವಲ 33ಪೈಸೆ ಬಡ್ಡಿ ದರದ ಸಾಲ ಬೇರೆ ಯಾವ ಬ್ಯಾಂಕಿನಲ್ಲೂ ಸಿಗಲು ಸಾಧ್ಯವಿಲ್ಲ. ಈಗಿನ ಸಾಲ ಸದ್ಬಳಕೆ ಮಾಡಿಕೊಂಡು ಮುಂದೆ ಇನ್ನೂ ಹೆಚ್ಚು ಸಾಲ ಪಡೆಯಲು ಅರ್ಹತೆ ದೊರಕಿಸಿಕೊಳ್ಳಬೇಕು. ನಿಮ್ಮ ಉಳಿತಾಯದ ಹೂಡಿಕೆಯನ್ನೂ ಇದೇ ಬ್ಯಾಂಕಿನಲ್ಲಿ ಇರಿಸಿ ಸಂಸ್ಥೆಯನ್ನು ಸದೃಢಗೊಳಿಸಬೇಕು ಎಂದು ಕರೆ ನೀಡಿದರು.
ಗ್ರಾಪಂ ಅಧ್ಯಕ್ಷರು ಇಡೀ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಮಹಿಳಾ ಸಂಘಗಳನ್ನು ಭೇಟಿ ಮಾಡಿ ಸಾಲ ಪ್ರಮಾಣದ
ಮಾಹಿತಿ ಪಡೆಯಲು ವಾಹನ ವ್ಯವಸ್ಥೆ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಮಹಿಳಾ ಸಂಘಗಳು ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹರಿಸಿದರೆ ಅವರು ಕೇಳಿದಷ್ಟು ಸಾಲ ನೀಡಲು ಸಿದ್ಧ, ಬಡ್ಡಿಯ ಶೋಷಣೆಯಿಂದ ಹೊರ ಬಂದು ಸ್ವಾವಲಂಬನೆಯ ಬದುಕು ಸಾಧನೆಗೆ ಅನುಕೂಲವಾಗುವಂತೆ ಸಾಲ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಇತರೆ ಸಂಸ್ಥೆಗಳಂತೆ ಮಹಿಳೆಯರನ್ನು ಬ್ಯಾಂಕಿಗೆ ಅಲೆಸುವುದಿಲ್ಲ, ನೇರವಾಗಿ ನಗದು ಹಣವನ್ನು ಬಹಿರಂಗವಾಗಿ ಎಲ್ಲರ ಎದುರಿನಲ್ಲೇ ವಿತರಿಸಲಾಗುವುದು. ಸಾಲಕ್ಕಾಗಿ ದಲ್ಲಾಳಿಗಳ ಅಥವಾ ಕಮೀಷನ್ ನೀಡುವ ಅಗತ್ಯವಿಲ್ಲ ಎಂದು ನುಡಿದರು.
ಬ್ಯಾಂಕ್ನಿಂದ ಬಂಗಾರಪೇಟೆ ತಾಲೂಕಿನ ಪ್ರತಿ ಗ್ರಾಮದ ಮಹಿಳಾ ಸಂಘಕ್ಕೂ 20 ಲಕ್ಷರೂ. ಸಾಲ ನೀಡಲಾಗುವುದು ಎಂದು ಭರವಸೆ ನೀಡಿದರು.ಬ್ಯಾಂಕ್ ನಿರ್ದೇಶಕರಾದ ಹೊಳಲಿ ಪ್ರಕಾಶ್, ನಾಗನಾಳ ಸೋಮಣ್ಣ, ದಯಾನಂದ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಮನಿರಾಜು, ಜಿಪಂ ಸದಸ್ಯೆ ಮುನಿಲಕ್ಷ್ಮಮ್ಮ, ಗ್ರಾಪಂ ಸದಸ್ಯರಾದ ಮಂಜುಳಾ ಮುನಿರಾಜು, ಕೋಟೆ ನಾರಾಯಣಸ್ವಾಮಿ, ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಸೀಸಂದ್ರ ಗೋಪಾಲಗೌಡ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
No comments:
Post a Comment