ಬೆಂಗಳೂರು: ‘ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳು ಅಕ್ರಮವಾಗಿ ಆನ್‌ಲೈನ್ ಹಾಗೂ ದೂರಶಿಕ್ಷಣ ಕೋರ್ಸ್‌ಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ವಂಚಿಸಿದ್ದು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿ ಶಿಫಾರಸು ಮಾಡಿದೆ.ಸಮಿತಿ ಅಧ್ಯಕ್ಷ ಗೊ. ಮಧುಸೂಧನ್ ವರದಿಯನ್ನು ವಿಧಾನ ಪರಿಷತ್ತಿನಲ್ಲಿ ಸೋಮವಾರ ಮಂಡಿಸಿದರು. ಮೈಸೂರು ವಿವಿ ಹಾಗೂ ಮುಕ್ತ ವಿವಿಗಳ ಕುಲಪತಿಗಳ
ಕ್ರಮದಿಂದ ಸದನದ ಹಕ್ಕುಚ್ಯುತಿ ಆಗಿದೆ ಎಂದು ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಇತರರು 2015ರಲ್ಲಿ ಗಮನ ಸೆಳೆದಿದ್ದರು. ಬಳಿಕ ಸಮಿತಿಯನ್ನು ರಚಿಸಲಾಗಿತ್ತು.
ಮೈಸೂರು ವಿಶ್ವವಿದ್ಯಾಲಯ 15,650 ವಿದ್ಯಾರ್ಥಿಗಳಿಗೆ ವಂಚಿಸಿದೆ. ದೇಶದ ವಿವಿಧ ಕಡೆಗಳಲ್ಲಿ ಇರುವ 129 ಆನ್‌ಲೈನ್ ಹಾಗೂ ದೂರಶಿಕ್ಷಣ ಶಿಕ್ಷಣ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಅನಧಿಕೃತವಾಗಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳನ್ನು ನೀಡಲಾಗಿದೆ. ತನ್ನ ಭೌಗೋಳಿಕ ಪರಿಮಿತಿಯನ್ನು ಮೀರಿ ಕೋರ್ಸ್‌ಗಳನ್ನು ನಡೆಸಿದೆ. ಇದಕ್ಕೆ ಯುಜಿಸಿ, ಎಐಸಿಟಿಇ ಅಥವಾ ಎಂಸಿಐ ಅನುಮತಿ ಪಡೆದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅದೇ ಮಾದರಿಯಲ್ಲಿ ಮುಕ್ತ ವಿಶ್ವವಿದ್ಯಾಲಯವು ದೇಶ ವಿದೇಶದ ವಿವಿಧ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡು ಅಮೆರಿಕ, ನೇಪಾಳ ಮತ್ತಿತರ ಕಡೆಗಳಲ್ಲಿ ಅನಧಿಕೃತವಾಗಿ ಶೈಕ್ಷಣಿಕ ಚಟುವಟಿಕೆ ನಡೆಸಿದೆ. ಬಿ.ಇ., ಬಿಟೆಕ್, ಎಂ.ಇ., ಎಂಟೆಕ್, ಡಿಪ್ಲೊಮಾ, ವೈದ್ಯಕೀಯ, ಅರೆವೈದ್ಯಕೀಯ (ಯೋಗ, ಆಯುರ್ವೇದ, ಯುನಾನಿ, ಹೋಮಿಯೊಪಥಿ, ಫಿಸಿಯೋಥೆರಪಿ) ಹಾಗೂ ಎಂಬಿಎ ಕೋರ್ಸ್‌ಗಳನ್ನು 3.25 ಲಕ್ಷ ವಿದ್ಯಾರ್ಥಿಗಳಿಗೆ ನೀಡಿದೆ. ಇಲ್ಲಿ ಎಐಸಿಟಿಯು ಹಾಗೂ ಎಂಸಿಐ ಒಪ್ಪಿಗೆ ಪಡೆದಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹತೆಗೆ ಚೆಲ್ಲಾಟ ಆಡಿದೆ ಎಂದೂ ವರದಿ ತಿಳಿಸಿದೆ.
ಎರಡೂ ವಿವಿಗಳ ಈ ಕೋರ್ಸ್‌ಗಳನ್ನು ರದ್ದುಪಡಿಸಲು ಉನ್ನತ ಶಿಕ್ಷಣ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ನಿರ್ದೇಶನ ನೀಡಿದೆ. ಈ ವಿಚಾರದಲ್ಲಿ ಈವರೆಗೆ ಉನ್ನತ ಶಿಕ್ಷಣ ಇಲಾಖೆ ನಿಷ್ಕ್ರೀಯತೆ ತೋರಿದೆ ಎಂದೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
No comments:
Post a Comment