ಬೆಂಗಳೂರು: ‘ಸತ್ತ ಮೇಲೆ ನರಕಕ್ಕೆ ಹೋದರೆ ಕಾಲು ಕತ್ತರಿಸುತ್ತಾರೆ, ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ ಕುದಿಸುತ್ತಾರೆ, ಚಿತ್ರಹಿಂಸೆ ನೀಡುತ್ತಾರೆ ಎಂದು ನಾವೆಲ್ಲಾ ಚಿಕ್ಕವರಿದ್ದಾಗ ಹಿರಿಯರು ಹೇಳುತ್ತಿದ್ದರು. ನರಕ ನೋಡುತ್ತೇನೋ ಇಲ್ಲವೋ ಎಂದುಕೊಂಡಿದ್ದೆ. ಈಗ ನೇರವಾಗಿ ನರಕಕ್ಕೆ ಬಂದಿಳಿದಿದ್ದೇನೆ. ಹಾಗಂತ ಅಸಹಾಯಕನಾಗಿ, ಅಧೀರನಾಗಿ ಕುಳಿತುಕೊಳ್ಳುವುದಿಲ್ಲ. ಒಂದು ವರ್ಷದ ಒಳಗೆ ಇಲಾಖೆಗೆ ಚಿಕಿತ್ಸೆ ನೀಡುವೆ. ಹೀಗೆ ಸರ್ಕಾರಿ ಆಸ್ಪತ್ರೆಗಳ ದಾರುಣ ಸ್ಥಿತಿಯನ್ನು
ವಿವರಿಸಿದವರು ಆರೋಗ್ಯ ಸಚಿವ ಕೆ.ಆರ್. ರಮೇಶಕುಮಾರ್ ವಿಧಾನ ಪರಿಷತ್ತಿನಲ್ಲಿ ಸೋಮವಾರ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು ಆರೋಗ್ಯ ಇಲಾಖೆಯ ದುರಾಡಳಿತದ ಬಗ್ಗೆ ಮಾಡಿದ ಪ್ರಸ್ತಾಪಕ್ಕೆ ಸುದೀರ್ಘ ಉತ್ತರ ನೀಡಿದರು.
ಆಡಳಿತ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಸರ್ಕಾರವನ್ನು ಟೀಕಿಸುತ್ತಿದ್ದ ರಮೇಶಕುಮಾರ್, ಸಚಿವರಾದ ಮೇಲೂ ಬದಲಾಗಿಲ್ಲ ಎಂಬುದನ್ನು ತೋರಿಸಿದರು.
ನರಕದ ಮಾದರಿ
*ದೇವಸ್ಥಾನದ ಮುಂದೆ ಅಸಹಾಯಕರು, ದರಿದ್ರರು ಭಿಕ್ಷೆ ಬೇಡುತ್ತಾರೆ. ತಾವು ಮಾಡಿದ ಪಾಪ ಕಳೆದು, ಕಾಯಿಲೆ ಬರಬಾರದೆಂದು ಮತ್ತೆ ಕೆಲವು ‘ದರಿದ್ರ’ರು ಭಿಕ್ಷೆ ಹಾಕುತ್ತಾರೆ. ದರಿದ್ರರು ಬೇಡಿ ಸಂಪಾದಿಸಿದ್ದ ಗಂಟನ್ನು ಕದ್ದೊಯ್ಯುವ ಗಂಟುಕಳ್ಳರು ಕೆಲವರಿದ್ದಾರೆ. ಅಂತಹ ಗಂಟುಕಳ್ಳರು ಆರೋಗ್ಯ ಇಲಾಖೆಗೆ ಗಂಟು ಬಿದ್ದಿದ್ದಾರೆ.
*ಹೆರಿಗೆ ಆದ ನಂತರ ಮೂರು ತಿಂಗಳು ತಾಯಿ–ಮಗುವಿನ ಆರೈಕೆಗಾಗಿ ಮಡಿಲು ಕಿಟ್ ನೀಡಲಾಗುತ್ತಿದೆ. ಎಂಥ ಹಣೆಬರಹ ನೋಡಿ, ಕಿಟ್‌ನಲ್ಲಿರುವ ವಸ್ತುಗಳನ್ನು ಕದಿಯವವರಿದ್ದಾರೆ. ಅಂತಹ ಕಳ್ಳರನ್ನು ಹಿಡಿಯುವವರು ಯಾರೂ ಇಲ್ಲ.
*ಅಪಘಾತ ಚಿಕಿತ್ಸಾ ಕೇಂದ್ರಗಳಿಗೆ ಎಲ್ಲಾ ಕಡೆಯೂ ಯಾರೋ ಪುಣ್ಯಾತ್ಮರು ಕಲ್ಲು(ಶಿಲಾನ್ಯಾಸ)ಹಾಕಿದ್ದಾರೆ. ಒಂದೇ ಒಂದು ಕಡೆಯೂ ಆರಂಭವಾಗಿಲ್ಲ. ನಿಜವಾದ ಅರ್ಥದಲ್ಲಿ ಕಲ್ಲು ಹಾಕಿದಂತಾಗಿದೆ. ಕೇಂದ್ರಗಳೇ ಅಪಘಾತಕ್ಕೆ ಸಿಲುಕಿ ಜರ್ಜರಿತವಾಗಿವೆ.
*ಡಯಾಲಿಸಿಸ್ ಕೇಂದ್ರಗಳಲ್ಲಿ ಯಂತ್ರಗಳನ್ನು ಕೆಡಿಸುವವರು ಇದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ, ಎಪಿಎಲ್ ಕುಟುಂಬದವರಿಗೆ ಒಂದು ಬಾರಿ ಡಯಾಲಿಸಿಸ್‌ಗೆ ₹300 ಶುಲ್ಕ ಪಡೆಯಲಾಗುತ್ತಿದೆ. ಖಾಸಗಿ ಕೇಂದ್ರಗಳಲ್ಲಿ ₹1000 ಶುಲ್ಕ ವಿಧಿಸಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳ ಎದುರೇ ಖಾಸಗಿ ಡಯಾಲಿಸಿಸ್ ಕೇಂದ್ರ ಇಟ್ಟುಕೊಂಡವರಿಗೆ ಲಾಭ ಮಾಡಿಕೊಡುವವ ವೈದ್ಯರು, ಸಿಬ್ಬಂದಿಗಳು ಇರುವಾಗ ನತದೃಷ್ಟ ಬಡವರು ಒಂದೋ ಸಾಯಬೇಕು, ಇಲ್ಲವೇ ಖಾಸಗಿ ಕೇಂದ್ರಕ್ಕೆ ದುಡ್ಡು ತೆತ್ತು ಬದುಕಿಯೂ ಸತ್ತಂತಿರಬೇಕು.
*ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಚಿಕಿತ್ಸೆಗೆ ₹1,000 ಶುಲ್ಕ ವಿಧಿಸಿದರೆ ಖಾಸಗಿಯಲ್ಲಿ ₹12,000 ಶುಲ್ಕ ವಿಧಿಸಲಾಗುತ್ತದೆ.
*ತುಮಕೂರು ಆಸ್ಪತ್ರೆಯಲ್ಲಿ ಪಾವಗಡದ ನಾಲ್ವರು ಅಂಧ ಮಹಿಳೆಯರು ಅಳುತ್ತಿದ್ದರು. ಅವರಿಗೆ ಆಸರೆಯಾಗಿದ್ದ ಸೋದರ ಅಪಘಾತಕ್ಕೆ ಈಡಾಗಿದ್ದ. ಆತನನ್ನು ಊರಿಗೆ ಕರೆದೊಯ್ಯಲು ಗಾಯಾಳು ಎಂಬ ದೃಢೀಕರಣ ಪತ್ರ ಬೇಕಿತ್ತು. ಅದನ್ನು ನೀಡಲು ಆಸ್ಪತ್ರೆ ಸಿಬ್ಬಂದಿ ಮೂರು ದಿನದಿಂದ ಸತಾಯಿಸುತ್ತಿದ್ದರಿಂದ ಅವರು ಅಳುತ್ತಿದ್ದರು.
ಯಾಕೆ ಕೊಟ್ಟಿಲ್ಲ ಎಂದು ಕೇಳಿದ್ದಕ್ಕೆ, ಅವರಿಗೆ ಸತಾಯಿಸುತ್ತಿದ್ದ ಗುಮಾಸ್ತನೊಬ್ಬ ಅವರು ಬಂದು ಅರ್ಧಗಂಟೆಯಾಯಿತು ಎಂದು ಹೇಳಿದ. ಪರಿಸ್ಥಿತಿ ಹೀಗೆ ಇದ್ದರೆ ಇದನ್ನು ಸ್ವತಂತ್ರ ಭಾರತ ಎನ್ನಬೇಕೇ?
ಈ ಅವ್ಯವಸ್ಥೆ ಸರಿಪಡಿಸದಿದ್ದರೆ ಸದನ, ಸರ್ಕಾರಕ್ಕೆ ಏನು ಅರ್ಥ ಇದೆ. ಸದನ, ನಾವೆಲ್ಲಾ ಏಕಿರಬೇಕು? ಎಂದು ಪ್ರಶ್ನಿಸಿದರು.
*ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ನಾಲ್ಕು ಕಾಲು, ನಾಲ್ಕು ಕೈ ಇದೆಯೇ? ಅವರೂ ನಮ್ಮಂತೆ ಮನುಷ್ಯರು. ಬಡವರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎಂಬ ಸ್ಥಿತಿ ಬದಲಾಗಬೇಕು. ಶಾಸಕರು, ಸಚಿವರು, ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆರಂಭಿಸಿದರೆ ವ್ಯವಸ್ಥೆ ಸುಧಾರಣೆಯಾಗುತ್ತದೆ.
*ಆಸ್ಪತ್ರೆಗಳು ಕೆಟ್ಟುಹೋಗಿವೆ ಎಂದು ಬೈಯುತ್ತಾ ಕುಳಿತುಕೊಳ್ಳುವುದಿಲ್ಲ. ಕಾಲಕಾಲಕ್ಕೆ ಸದನಕ್ಕೆ ವರದಿ ನೀಡುವೆ.
*ಔಷಧ ಖರೀದಿಗೆ ಪ್ರತ್ಯೇಕ ನೀತಿ ಜಾರಿಗೊಳಿಸುವೆ. ಹೀಗೆ ಭರವಸೆ ನೀಡಿದರು.
‘ಬದ್ಮಾಶ್‌ಗಳಿಗೆ ಬೆಂಬಲ. . .’
‘ನಮ್ಮ ಲೆಟರ್ ಪ್ಯಾಡ್‌ಗಳು, ಅಧಿಕಾರ ಎಲ್ಲವೂ ಸರ್ಕಾರಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಮೆಷಿನ್ ಕೆಡಿಸಿ, ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಲಾಭ ಮಾಡಿಕೊಡುವ ಬದ್ಮಾಶ್‌ಗಳಿಗೆ ಬಡ್ತಿ ಕೊಡಿಸಲು, ವರ್ಗಾವಣೆ ಮಾಡಿಸಲು ಬಳಕೆಯಾಗುತ್ತಿವೆ. ಮತಹಾಕಿ ನಮ್ಮನ್ನು ಗೆಲ್ಲಿಸಿದವರ ನೋವು ಆಲಿಸಲು ಈ ಮಂದಿ ಬಿಡುತ್ತಿಲ್ಲ’ ಎಂದು ಸಚಿವ ರಮೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
‘ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ, ಆಟೋ ಚಾಲಕನೊಬ್ಬ ಓಡಿ ಬಂದು, ನಾಲ್ಕು ತಿಂಗಳಿನಿಂದ ಸ್ಕ್ಯಾನಿಂಗ್ ಮೆಷಿನ್ ಕೆಟ್ಟುಹೋಗಿದೆ. ಗರ್ಭಿಣಿಯರನ್ನು ಬೇರೆ ನರ್ಸಿಂಗ್ ಹೋಮ್‌ಗೆ ಕರೆದುಕೊಂಡು ಹೋದರೆ ಅವರಿಗೆ ದುಬಾರಿಯಾಗುತ್ತಿದೆ ಎಂದು ಹೇಳಿದ.
ವೈದ್ಯಾಧಿಕಾರಿಗೆ ಕೇಳಿದರೆ ನೆದರ್‌ಲ್ಯಾಂಡ್ ನಿಂದ ಬಿಡಿಭಾಗಗಳು ಬರಬೇಕು ಎಂದು ಸಬೂಬು ಹೇಳಿದರು. ಖಾಸಗಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಕಳಿಸಿದರೆ ₹1,000 ಶುಲ್ಕ ವಸೂಲಿ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಮೆಷಿನ್ ಕೆಡಿಸಿದರೆ ಖಾಸಗಿಯವರಿಂದ ಕಾಸು ಗಿಟ್ಟುತ್ತದೆ ಎಂಬ ಆಸೆಯಿಂದ ಹೀಗೆ ಯಂತ್ರಗಳನ್ನು ಕೆಡಿಸುವವರು ಇದ್ದಾರೆ’ ಎಂದರು.
ಲಂಡನ್ ಮಾದರಿ. . .
‘ರಾಯಚೂರಿನಲ್ಲಿ ವೈದ್ಯರು, ದಾದಿಯರು ಚುಚ್ಚುಮದ್ದು ನೀಡುವುದಿಲ್ಲವಂತೆ. ಅಲ್ಲಿ ನಾಲ್ಕನೇ ದರ್ಜೆ ನೌಕರರು ಚುಚ್ಚುಮದ್ದು ನೀಡುತ್ತಾರೆ. ಎಂಥ ವ್ಯವಸ್ಥೆ ಇದೆ ನೋಡಿ’ ಎಂದು ಸಚಿವ ರಮೇಶಕುಮಾರ್ ಹೇಳಿದರು.
ಮಧ್ಯಪ್ರವೇಶಿಸಿದ ಸಭಾನಾಯಕ ಡಾ. ಜಿ. ಪರಮೇಶ್ವರ್, ‘ಲಂಡನ್‌ನಲ್ಲಿ 20 ವರ್ಷ ಶಸ್ತ್ರಚಿಕಿತ್ಸಾ ಘಟಕದಲ್ಲಿ ಕೆಲಸ ಮಾಡಿದ ದಾದಿಯರಿಗೆ ಶಸ್ತ್ರಚಿಕಿತ್ಸೆ ಮಾಡುವ ಅವಕಾಶ ನೀಡಲಾಗುತ್ತಿದೆ. ಆ ಚಿಂತನೆ ನಿಮ್ಮಲ್ಲಿದೆಯೇ’ ಎಂದು ಪ್ರಶ್ನಿಸಿದರು.
ಇದಕ್ಕೆ ನಗುತ್ತಾ ಉತ್ತರಿಸಿದ ರಮೇಶಕುಮಾರ್, ‘ನನ್ನದೇ ಚಿಂತನೆಯಾದರೆ ತೆಗೆದುಕೊಳ್ಳುವ ಕ್ರಮ ಬೇರೆ. ಈಗ ಎಲ್ಲವೂ ನಿಮ್ಮ(ಕೆಪಿಸಿಸಿ ಅಧ್ಯಕ್ಷರು) ಕೈಯಲ್ಲಿದೆ. ನೀವು ನಡೆಸಿದಂತೆ ನಡೆಯುವೆ’ ಎಂದಾಗ ಇಡೀ ಸದನದಲ್ಲಿ ನಗೆ ತೇಲಿತು.
‘ಪರಮೇಶ್ವರ್ ಅವರದ್ದು ವೈದ್ಯ ಕಾಲೇಜಿದ್ದು, ಅಲ್ಲಿ ಅಂತಹ ಪ್ರಯೋಗ ಮಾಡಲಿ’ ಎಂದು ಕಾಂಗ್ರೆಸ್ಸಿನ ಎಚ್.ಎಂ. ರೇವಣ್ಣ ಕಾಲೆಳೆದರು.
*
‘ಸರ್ಕಾರಿ ಆಸ್ಪತ್ರೆಯೆಂಬುದು ದೊಡ್ಡ ವಿಷವರ್ತುಲ. ಅದನ್ನು ಹೇಗೆ ಸುಧಾರಣೆ ಮಾಡುತ್ತೀರಿ. ನೀವು ಏನೇ ಕ್ರಮ ಕೈಗೊಂಡರೂ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ.’
ಕೆ.ಎಸ್. ಈಶ್ವರಪ್ಪ, ಪ್ರತಿಪಕ್ಷ ನಾಯಕ
No comments:
Post a Comment