ಬೆಂಗಳೂರು: ‘ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್) ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಮೂವರು ಸದಸ್ಯರ ವಿಚಾರಣಾ ಸಮಿತಿ ರಚಿಸಿದ್ದು, ಈ ಸಮಿತಿ ಮೂರು ದಿನಗಳಲ್ಲಿ ವರದಿ ನೀಡಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದರು. ವಿಧಾನ ಪರಿಷತ್ತಿನಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಮರನಾಥ ಪಾಟೀಲ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ‘2013–14 ಹಾಗೂ 14–15ನೇ
ಸಾಲಿನ ಔಷಧಿ ಹಾಗೂ ರಾಸಾಯನಿಕಗಳ ಖರೀದಿ ಬಗ್ಗೆ ಮಹಾಲೇಖಪಾಲರು (ಸಿಎಜಿ) ಆಕ್ಷೇಪ ವ್ಯಕ್ತಪಡಿಸಿದ್ದರು. ಟೆಂಡರ್ ಅವಧಿ ಮುಗಿದ ನಂತರವೂ 7.75 ಕೋಟಿ ಮೊತ್ತದ ಔಷಧಿ ಖರೀದಿ ಮಾಡಲಾಗಿತ್ತು. ಸಂಸ್ಥೆಯಲ್ಲಿ 2015ರ ಮಾರ್ಚ್ ಅಂತ್ಯದವರೆಗೆ ₹27.92 ಕೋಟಿ ನಿಶ್ಚಿತ ಠೇವಣಿ ಇರಿಸಲಾಗಿದೆ ಎಂದು ಅಲ್ಲಿನ ನಿರ್ದೇಶಕರು ಮಾಹಿತಿ ನೀಡಿದ್ದರು. ಆದರೆ, ₹21.16 ಕೋಟಿ ಮೊತ್ತಕ್ಕೆ ಮಾತ್ರ ನಿಶ್ಚಿತ ಠೇವಣಿ ಸ್ವೀಕೃತಿಗಳು ಲಭ್ಯ ಇವೆ. ಉಳಿದ ₹ 6 ಕೋಟಿಗೆ ಲೆಕ್ಕವೇ ಇಲ್ಲ’ ಎಂದರು.
‘ನಿರ್ದೇಶಕರಾಗಿದ್ದ ಡಾ.ವಿ. ಶ್ರೀನಿವಾಸ್ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಜಾಗೃತಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಶ್ರೀನಿವಾಸ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.
‘ಪ್ರಭಾರ ನಿರ್ದೇಶಕರಾಗಿದ್ದ ಡಾ. ಲಕ್ಷ್ಮಿನಾರಾಯಣ ಅವರು ಒಂದು ತಿಂಗಳ ಅವಧಿಯಲ್ಲೇ 9 ಸಹ ಪ್ರಾಧ್ಯಾಪಕರು, 13 ಸಹಾಯಕ ಪ್ರಾಧ್ಯಾಪಕರು, ಮೂವರು ಪ್ರಥಮ ದರ್ಜೆ ಸಹಾಯಕರಿಗೆ ಮುಂಬಡ್ತಿ ನೀಡಿದ್ದರು. ಈ ಎಲ್ಲ ಆದೇಶಗಳನ್ನು ರದ್ದುಪಡಿಸಲಾಗಿದೆ’ ಎಂದರು.
No comments:
Post a Comment