ಹೂವಿನಹಡಗಲಿ:ಜು.05. ತಾಲ್ಲೂಕಿನ ಮಾನ್ಯರಮಸಲವಾಡ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯ ಹಾಲನ್ನು ತ್ಯಜಿಸಿ ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ ಬಳಿಕ 12ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಅನೇಕ ವಿದ್ಯಾರ್ಥಿಗಳಲ್ಲಿ ವಾಕರಿಕೆ ಉಂಟಾಗಿದ್ದರಿಂದ ಇದೀಗ 8ರಿಂದ 10ನೇ ತರಗತಿಯ 70ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಲು, ಬಿಸಿಯೂಟ
ನಿರಾಕರಿಸಿ, ಮನೆಯಿಂದಲೇ ಊಟದ ಬಾಕ್ಸ್ ತರುತ್ತಿದ್ದಾರೆ. ಮೊದಲು ಒಳ್ಳೆಯ ಹಾಲು ಕೊಡುತ್ತಿದ್ದರು. ಹಾಗಾಗಿ ಎಲ್ಲರೂ ಸೇವಿಸುತ್ತಿದ್ದೆವು. ಇದೀಗ ಹಾಲು ಕುಡಿದರೆ ಹೊಟ್ಟೆ ನೋವು ಬರುವುದರಿಂದ ಹಾಲು ಕುಡಿಯುವುದನ್ನೇ ಬಿಟ್ಟಿದ್ದೇವೆ. ಬಿಸಿಯೂಟ ನೋಡಿದರೆ ವಾಕರಕಿ ಬರುವುದರಿಂದ ಮನೆಯಿಂದಲೇ ಊಟ ತರುತ್ತಿದ್ದೇವೆ ಎಂದು 9ನೇ ತರಗತಿ ವಿದ್ಯಾರ್ಥಿನಿಯರಾದ ನೇಕಾರ ಪರಿಮಳ, ಸಾವಿತ್ರಿ ಹೇಳಿದರು.
ಬಿಸಿಯೂಟ ಹಾಗೂ ಶಾಲೆಯ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳ ದೂರಿನ ಮೇರೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ವಿಜಯಕುಮಾರ್ ಸೋಮವಾರ ಮಾಧ್ಯಮದವರೊಂದಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳಿಗೆ ಬಡಿಸಲು ಸಿದ್ಧವಾಗಿದ್ದ ಅರೆಬೆಂದ ಅನ್ನ, ಬೇಳೆಕಾಳು, ತರಕಾರಿ ಇಲ್ಲದ ಸಾಂಬಾರು ಸೇವಿಸಿದ ಅವರು, ನಿಮ್ಮ ಮಕ್ಕಳಿಗೆ ಇಂಥ ಆಹಾರ ಕೊಡುತ್ತೀರಾ ಎಂದು ಮುಖ್ಯಶಿಕ್ಷಕ ಮತ್ತು ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಶುಚಿತ್ವ ಇಲ್ಲದ ಅಡುಗೆ ಕೋಣೆ, ಸ್ಟೋರ್ ರೂಂಗೆ ತೆರಳಿ ಪರಿಶೀಲಿಸಿದರು. ಮುಗ್ಗಸು ಹಿಡಿದ ಅಕ್ಕಿ, ಕಲಬೆರಕೆ ತೊಗರಿ ಬೇಳೆ, ಕೊಳೆತ ತರಕಾರಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಿಗೆ ಪೆÇೀನಾಯಿಸಿ ಸ್ಥಳಕ್ಕೆ ಕರೆಯಿಸಿಕೊಂಡರು.
ಬಡ ಮಕ್ಕಳ ಹಸಿದ ಒಡಲು ತುಂಬಿಸಲು ಸರ್ಕಾರ ಉತ್ತಮ ಯೋಜನೆ ರೂಪಿಸಿದೆ. ಆದರೆ, ನಿಮ್ಮ ನಿರ್ಲಕ್ಷ್ಯ ಮತ್ತು ಆಹಾರ ಧಾನ್ಯ ಪೂರೈಸುವ ಗುತ್ತಿಗೆದಾರರ ಧನದಾಹದಿಂದ ಬಡ ಮಕ್ಕಳು ಅನ್ನದಿಂದ ವಂಚಿತರಾಗುತ್ತಿದ್ದಾರೆ ಎಂದು ಪಿ.ವಿಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಗೋದಾಮಿನಿಂದಲೇ ಕಳಪೆ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ. ತರಕಾರಿ ಬೆಲೆ ಗಗನಕ್ಕೇರಿದೆ. ಹಾಗಾಗಿ ಗುಣಮಟ್ಟ ಸುಧಾರಣೆ ನಮ್ಮ ಕೈಲಿಲ್ಲ ಎಂದು ಮುಖ್ಯ ಶಿಕ್ಷಕ ಎಂ.ಧರ್ಮಶೀಲ ಸಬೂಬು ಹೇಳಿದರು.
ನೀವೂ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಶಾಲೆಯಲ್ಲೇ ಊಟ ಮಾಡುವ ರೀತಿಯಲ್ಲಿ ಶುಚಿರುಚಿ ಗುಣಮಟ್ಟದ ಆಹಾರ ತಯಾರಿಸಬೇಕು. ಮಕ್ಕಳು ಉಪಯೋಗಿಸುವ ಶೌಚಾಲಯವನ್ನು ಕೂಡಲೇ ದುರಸ್ತಿಪಡಿಸಬೇಕು. ಇಲ್ಲದಿದ್ದರೆ ತಮ್ಮ ವಿರುದ್ಧ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.
ವಿಜ್ಞಾನ ಪಠ್ಯ ಪುಸ್ತಕ ನೀಡಿಲ್ಲ. ಶಾಲೆಯಲ್ಲಿ ಇಂಗ್ಲಿಷ್, ಹಿಂದಿ, ಗಣಿತ ವಿಷಯ ಶಿಕ್ಷಕರೆ ಇಲ್ಲ. ಪರೀಕ್ಷೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುತ್ತಾರೆ. ನಾವು ನಿರ್ಭೀತವಾಗಿ ಪರೀಕ್ಷೆ ಬರೆಯುವುದಾದರು ಹೇಗೆ ಎಂದು ಪ್ರಶ್ನಿಸಿದ 10ನೇ ತರಗತಿ ವಿದ್ಯಾರ್ಥಿಗಳು, ನಮಗೆ ಬಿಸಿಯೂಟ ಇಲ್ಲದಿದ್ದರೂ ಚಿಂತೆಯಿಲ್ಲ, ವಿಷಯ ಶಿಕ್ಷಕರನ್ನು ನೀಡಿ ಎಂದು ಮನವಿ ಮಾಡಿದರು.
ಶಾಲೆಯ ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಜೆ. ಮಲ್ಲಪ್ಪ, ಕೆಲ ಸಮಸ್ಯೆಗಳ ನಿವಾರಣೆಗೆ ಲಭ್ಯವಿರುವ ಶಾಲಾ ಅನುದಾನ ಬಳಸಿಕೊಳ್ಳುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಿದರು. ಬಿಸಿಯೂಟ, ಶೌಚಾಲಯ, ಪಠ್ಯಪುಸ್ತಕ ಸಮಸ್ಯೆ ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗದುಗಿನ ಮಲ್ಲಣ್ಣ, ಮಂಜುನಾಥ ಮಲ್ಕಿಒಡೆಯರ್, ಮಲ್ಲಿಕಾರ್ಜುನ ಇತರರು ಇದ್ದರು.
No comments:
Post a Comment