Tuesday, 5 July 2016

ಬಡವರ ಹೆಸರಲ್ಲಿ ಕಾರಜೋಳ ರಾಜಕೀಯ: ತಿಮ್ಮಾಪುರ ಟೀಕೆ

ಬಾಗಲಕೋಟೆ: ಮುಧೋಳ ಮೀಸಲು ಮತಕ್ಷೇತ್ರದಲ್ಲಿ ಡಾ|ಅಂಬೇಡ್ಕರ ಅಭಿವೃದ್ಧಿ ನಿಗಮ ಹಾಗೂ ಭೂಮಿ ಮಂಜೂರಾತಿ ಯೋಜನೆಯಡಿ ಭಾರಿ ಭ್ರಷ್ಟಾಚಾರ ನಡೆದಿದೆ. ಮೃತಪಟ್ಟವರ ಹೆಸರಲ್ಲೂ ಕೊಳವೆ ಬಾವಿ, ಪೈಪ್‌ಲೈನ್‌ ಮಾಡಿಸಲಾಗಿದೆ. ಆದರೆ ಅವು ದಲಿತರ ಭೂಮಿಗೆ ಬದಲಾಗಿ ಅನ್ಯ ಜಾತಿಯ ಪ್ರಭಾವಿಗಳ ಹೊಲಕ್ಕೆ ನೀರೊದಗಿಸುತ್ತಿವೆ ಎಂದು ವಿಧಾನಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಆರೋಪಿಸಿದರು.ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗಾಗಿ ಮೀಸಲಿರುವ ವಿವಿಧ ಯೋಜನೆಗಳು ಮುಧೋಳ ತಾಲೂಕಿನಲ್ಲಿ ಅನ್ಯರ ಪಾಲಾಗುತ್ತಿವೆ. ಇದಕ್ಕೆ ನೇರವಾಗಿ ಆ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಅವರೇ ಹೊಣೆ. ಮೂರು ವರ್ಷಗಳ ಹಿಂದೇ ಭ್ರಷ್ಟಾಚಾರ 
ನಡೆದಿದ್ದು, ಸಮಗ್ರ ತನಿಖೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. 

ಕಾರಜೋಳರಿಂದಲೇ ಹಕ್ಕುಚ್ಯುತಿ: ವಿಧಾನ ಪರಿಷತ್‌ ಸದಸ್ಯನಾಗಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದೇನೆ. ಆ ಸಭೆ ನಡೆಸಿದವರು ತಾಪಂ ಅಧ್ಯಕ್ಷರು. ಆದರೆ ತಾವು ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾಗಿ ಕಾರಜೋಳ ತಪ್ಪು ಮಾಹಿತಿ ನೀಡಿದ್ದಾರೆ. ಶನಿವಾರ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟದ ವೇಳೆಯೂ ಕಾರಜೋಳರು, ನನ್ನ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಿ ರಾಜಕೀಯ ಲಾಭ
ಪಡೆಯಲು ಪ್ರಯತ್ನಿಸಿದ್ದರು. ಆದರೆ ಸಂತ್ರಸ್ತರು ಕೆಟ್ಟ ಪದಗಳಿಂದ ಬೈದು ಅವರನ್ನು ಕಳುಹಿಸಿದ್ದಾರೆ ಎಂದು ಹೇಳಿದರು.

ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗೆ ಕಾರಜೋಳು ಕದ್ದುಮುಚ್ಚಿ ಹೋಗುತ್ತಿದ್ದಾರೆ. ಜಿಲ್ಲಾ-ತಾಲೂಕು ಪಂಚಾಯತ್‌ ಸದಸ್ಯರನ್ನು ಬಿಟ್ಟು ಕಾರ್ಯಕ್ರಮ ಮಾಡುತ್ತಿದ್ದು, ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಹೀಗಾಗಿ ಜಿಲ್ಲಾ- ತಾಲೂಕು ಪಂಚಾಯಿತಿ ಸದಸ್ಯರ ಹಕ್ಕುಚ್ಯುತಿ ಮಾಡಿದವರೇ ಕಾರಜೋಳರು ಎಂದರು. ಜಿಲ್ಲಾ ಉಸ್ತುವಾರಿ ಸಚಿವ, ಎರಡು ಬಾರಿ ಶಾಸಕ ಹಾಗೂ ಈಗ ವಿಧಾನಪರಿಷತ್‌ ಸದಸ್ಯನಾಗಿದ್ದೇನೆ. ಅಲ್ಲದೇ ನಾನೊಬ್ಬ ಕಾನೂನು ಪದವೀಧರ. ಸರ್ಕಾರದ ನೀತಿ-ನಿಯಮ ಹಾಗೂ ಕಾನೂನಿನ ಸ್ಪಷ್ಟ ಅರಿವು ನನಗಿದೆ. ಯಾರ ಹಕ್ಕನ್ನೂ ಕಸಿದುಕೊಳ್ಳುವ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಮಾಡಬೇಡಿ: ಶಾಸಕ ಕಾರಜೋಳರು ಬಡವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸಮಿತಿಗಳಿಗೆ ಅವರು ಅಧ್ಯಕ್ಷರಾಗಿದ್ದು, ಬಿಜೆಪಿ ಬೆಂಬಲಿಗರಲ್ಲದವರು ಯಾವುದೇ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೂ ಮಂಜೂರಾತಿ ಕೊಡುತ್ತಿಲ್ಲ. ಮುಧೋಳ ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಿಂದ ಒಂದೇ ಒಂದು ಆಶ್ರಯ ಮನೆ ಕೊಟ್ಟಿಲ್ಲ. ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರ್ಕಾರದ
ಸೌಲಭ್ಯ ಜನರಿಗೆ ಮುಟ್ಟದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮುಧೋಳ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗರಲ್ಲದ ಯಾವುದೇ ಬಡವರು ಸೌಲಭ್ಯ ಕೇಳಿದರೂ ಕೊಡುವುದಿಲ್ಲ. ಬಡವರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ರಾಜಕೀಯ ಮಾಡುವುದಾದರೆ ಚುನಾವಣೆಯಲ್ಲಿ ಮಾಡಲಿ ಎಂದರು. ಮುಧೋಳ ತಾ.ಪಂ. ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಸದಸ್ಯ ಸಂಗಪ್ಪ ಇಮ್ಮನ್ನವರ, ಪ್ರಮುಖರಾದ ಉದಯಸಿಂಗ್‌ ಪಡತಾರೆ, ಗಣಪತಿ ಮೇತ್ರಿ ಒದ್ದರು. 

No comments:

Post a Comment