Tuesday, 5 July 2016

ಪಕ್ಷ ವಿಸರ್ಜಿಸಿ ರಾಜಕೀಯ ಸನ್ಯಾಸ ಸ್ವೀಕರಿಸಿ

ಮಡಿಕೇರಿ:  ಜಿಲ್ಲೆಯಲ್ಲಿ ಎಲ್ಲಾ ಕಾರ್ಯಗಳನ್ನು ಬಿಜೆಪಿ ಶಾಸಕರು ಹಾಗೂ ಸಂಸದರಿಂದ ನಿರೀಕ್ಷಿಸುತ್ತಿರುವ ಜಿಲ್ಲಾ ಕಾಂಗ್ರೆಸ್‌ ನಿಷ್ಕ್ರಿಯವಾಗಿದೆ ಎನ್ನುವುದನ್ನು ಒಪ್ಪಿಕೊಂಡಿರುವುದರಿಂದ ಪದಾಧಿಕಾರಿಗಳು ಪಕ್ಷವನ್ನು ವಿಸರ್ಜಿಸಿ ಸನ್ಯಾಸ ಸ್ವೀಕರಿಸಲಿ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ತಿರುಗೇಟು ನೀಡಿದ್ದಾರೆ.ದೇವಟ್‌ ಪರಂಬು ವಿವಾದಕ್ಕೆ ಸಂಬಂಧಿಸಿದಂತೆ ಶಾಸಕರು ಹಾಗೂ ಸಂಸದರನ್ನು ಟೀಕಿಸುತ್ತಿರುವ ಜಿಲ್ಲಾ ಕಾಂಗ್ರೆಸ್ಸಿಗರಿಗೆ ವಿವಾದವನ್ನು ಬಗೆಹರಿಸಲು
ಅಡ್ಡಿಪಡಿಸಿದವರು ಯಾರು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

 ದೇವಟ್‌ ಪರಂಬು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರು ತಮ್ಮ ಜವಾಬ್ದಾರಿ ಅರಿತು ಪ್ರಯತ್ನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್‌ ಸದಸ್ಯರು ಈ ಕಾರ್ಯವನ್ನು ಮಾಡಬಹುದಾಗಿತ್ತೆಂದು ಅಭಿಪ್ರಾಯಪಟ್ಟ ಸುಬ್ರಮಣ್ಯ ಉಪಾಧ್ಯಾಯ ಕಾಂಗ್ರೆಸ್‌ ಜಿಲ್ಲೆಯಲ್ಲಿ ಕೇವಲ ಅಧಿಕಾರ ಪಡೆಯುವ ಉದ್ದೇಶಕ್ಕಾಗಿಯಷ್ಟೇ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಎಲ್ಲವನ್ನು ಶಾಸಕರು ಹಾಗೂ ಸಂಸದರು ಮಾಡಬೇಕೆಂದು ನಿರೀಕ್ಷಿಸುವ ಜಿಲ್ಲಾ ಕಾಂಗ್ರೆಸ್‌ ನಿಷ್ಕ್ರಿಯ ಎಂಬುವುದನ್ನು ಒಪ್ಪಿಕೊಂಡಿದ್ದು, ಈ ಪಕ್ಷವನ್ನು ವಿಸರ್ಜಿಸುವುದು ಉತ್ತಮ. ಕೈಯಲ್ಲಾಗದ ಕಾಂಗ್ರೆಸ್ಸಿಗರು ಶಾಸಕರು ಹಾಗೂ ಸಂಸದರ ರಾಜೀನಾಮೆಯನ್ನು ಕೇಳುವ ನೈತಿಕತೆಯನ್ನು ಹೊಂದಿಲ್ಲ. ಒಂದು ಕೋಮಿನ ಪರವಾಗಿ ಮಾತನಾಡುವ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ಸೋಮವಾರಪೇಟೆ ಗಲಭೆಯ ಬೆಂಕಿಗೆ ತುಪ್ಪ ಸುರಿದು ಪರಿಸ್ಥಿತಿಯ ದುರ್ಲಾಭ ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.

No comments:

Post a Comment