ಕಾಪು, ಜು.೫- ರಂಜಾನ್ ತಿಂಗಳಲ್ಲಿ ದಾನ ಮಾಡುವುದು ಮುಸ್ಲಿಮರ ಸಂಪ್ರದಾಯ. ಅದರಂತೆ ಕಟಪಾಡಿಯ ಮುಸ್ಲಿಂ ಮಹಿಳೆಯರೊಬ್ಬರು ನಿನ್ನೆ ಹಿಂದೂ ಬಂಧುಗಳಿಗೆ ಅನ್ನದಾನ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.ಕಟಪಾಡಿಯ ಮೈಮುನಾ ರಹಮತುಲ್ಲಾ ಎಂಬವರು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಹಿಂದೂ ಬಾಂಧವರಿಗೆ ಅನ್ನದಾನ ಹಾಗೂ ವಸ್ತ್ರದಾನ ಮಾಡಿದರು. ಈ ಹಿಂದೆ ಕೂಡ ಮೈಮುನಾ ಅವರು ಕ್ಷೇತ್ರದಲ್ಲಿ ಐದು ಬಾರಿ ಅನ್ನದಾನ ಮಾಡಿದ್ದರು. ಈ ಬಾರಿ ರಂಝಾನ್
ತಿಂಗಳಲ್ಲಿ ಅನ್ನದಾನ ಮಾಡುವ ಸಂಕಲ್ಪ ಮಾಡಿದ್ದರು. ಅನ್ನದಾನಕ್ಕೂ ಮುನ್ನ ದೇವಳದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಳ್ಗೊಂಡರು. ಸುಮಾರು ೪೦೦ ಮಂದಿ ಭಕ್ತರು ಪಾಲ್ಗೊಂಡ ಈ ಅನ್ನದಾನ ಕಾರ್ಯದಲ್ಲಿ ದೇವಳದ ಅರ್ಚಕ ದೇವದಾಸ್ ಶಾಂತಿ, ಅಧ್ಯಕ್ಷ ಅಶೋಕ್ ಸುವರ್ಣ, ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಉಪಾಧ್ಯಕ್ಷರಾದ ರತ್ನಾಕರ್ ಅಂಚನ್, ರಾಘು ಕೋಟ್ಯಾನ್ ಮುಂತಾದವರು ಪಾಲ್ಗೊಂಡಿದ್ದರು.
ಹಸಿವಿಗೆ ಜಾತಿ-ಧರ್ಮವಿಲ್ಲ: ಮೈಮುನಾ
ಅನ್ನದಾನ ನೀಡುತ್ತಿರುವ ಬಗ್ಗೆ ಮೈಮುನಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಆರ್ಥಿಕ ಮುಗ್ಗಟ್ಟಿನ ಸಂದರ್ಭ ವಿಶ್ವನಾಥ ಕ್ಷೇತ್ರ ಭಕ್ತರೊಬ್ಬರ ಸಲಹೆಯಂತೆ ದೇವಾಲಯದಲ್ಲಿ ಅನ್ನದಾನದ ಹರಕೆ ಹೊತ್ತಿದ್ದೆ. ಹರಕೆ ಹೇಳಿದಂತೆ ಮನೆ ಮಾರಾಟವಾಗಿ ಬಳಿಕ ಅನ್ನದಾನ ಮಾಡಿದ್ದೆ. ಹಸಿವಿಗೆ ಜಾತಿ-ಧರ್ಮ ಇಲ್ಲ. ಹಸಿದವರಿಗೆ ಅನ್ನ ನೀಡುವುದೇ ನಮ್ಮ ಮೊದಲ ಧರ್ಮ. ವಿಶ್ವನಾಥ ಕ್ಷೇತ್ರದಲ್ಲಿ ನಾನು ನಿರ್ವಹಿಸಿದ ಕಾರ್ಯ ನನ್ನ ಮನಸ್ಸಿಗೆ ಖುಷಿ ನೀಡಿದೆ ಎಂದು ಅವರು ತಿಳಿಸಿದರು.
No comments:
Post a Comment