Tuesday, 5 July 2016

ವಿಯಟ್ನಾಂನಲ್ಲಿ ವಿಶ್ವ ದಾಖಲೆ ಬರೆದ ಕೊಡಗಿನ ಚೆರಿಯಮನೆ ಸಂತೋಷ್

ಮಡಿಕೇರಿ: ಕೊಡಗಿನ ಮೂಲದ ಚೆರಿಯಮನೆ ಸಂತೋಷ್ ನೇತೃತ್ವದ ತಂಡ ವಿಯಟ್ನಾಂನಲ್ಲಿ ಸತತ 7,777 ಆವರ್ತ ಸೂರ್ಯ ನಮಸ್ಕಾರಗಳನ್ನು ಮಾಡಿ, ಪ್ರತಿ ಆವರ್ತದಲ್ಲಿ 10 ಯೋಗಾಸನಗಳಂತೆ ಒಟ್ಟು 77,770 ಆಸನಗಳನ್ನು ನಿರಂತರವಾಗಿ 60 ಗಂಟೆ 06 ನಿಮಿಷ 06 ಸೆಕೆಂಡ್ ಮಾಡುವ ಮೂಲಕ ವಿಶ್ವ ದಾಖಲೆಯ ಸಾಧನೆ ಮಾಡಿದ್ದಾರೆ.ಈ ಹಿಂದೆ ಭಾರತದ ಯೋಗರಾಜ್ ಸತತ 40 ಗಂಟೆ 15 ನಿಮಿಷಗಳ ಯೋಗಾಸನದ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇದನ್ನು
ನೇಪಾಳದ ಯೋಗ ಶಿಕ್ಷಕ ಉತ್ತಮ್ ಯೋಗಿ ಅವರು 50 ಗಂಟೆ 15 ನಿಮಿಷಗಳ ಕಾಲ ಯೋಗ ಮಾಡುವುದರ ಮೂಲಕ ಹಳೆಯ ದಾಖಲೆಯನ್ನು ಅಳಿಸಿದ್ದರು. ಇದೀಗ ಚೆರಿಯಮನೆ ಸಂತೋಷ್ ಈ ಇಬ್ಬರ ದಾಖಲೆಯನ್ನು ಮುರಿದಿದ್ದಾರೆ.

ಯೋಗದ ಮಹತ್ವವನ್ನು ಕೇವಲ ಶಿಕ್ಷಕನಾಗಿ ಕಲಿಸಲು ವಿದೇಶಕ್ಕೆ ಹೋದ ಇವರು, ಯೋಗದ ಮಹತ್ವವನ್ನು ಅಲ್ಲಿಯ ಸರ್ಕಾರವೇ ಮನಗಾಣುವಂತೆ ಮಾಡಿ ಯೋಗ ಶಿಕ್ಷಣಕ್ಕೆ ಒತ್ತುಕೊಡಲು ಕಾರಣರಾದರು. ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪಡೆದು ಇಂಜಿಯನಿಯರಿಂಗ್ ಶಿಕ್ಷಣಕ್ಕಾಗಿ ಹೊರಟು ಒಂದೇ ವರ್ಷಕ್ಕೆ ಮೊಟಕುಗೊಳಿಸಿ ಯೋಗದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. ಕನಕಪುರದ ಸಮೀಪ ಶಾಂತಿಧಾಮಕ್ಕೆ ಸೇರಿ ಯೋಗ ಶಿಕ್ಷಕರಾಗಿ ತನ್ನ ಪ್ರತಿಭೆಯನ್ನು ಕೆಲಕಾಲ ಸವೆಸಿ ನಂತರ ಮೈಸೂರಿನ ವೇದವ್ಯಾಸ ಪ್ರತಿಷ್ಠಾನದ ವೇದ ಗುರು ರಾಘವೇಂದ್ರ ಪೈ ಅವರ ಮಾರ್ಗದರ್ಶನದ ಮೂಲಕ ವಿಯಟ್ನಾಂಗೆ ಹೊರಟರು.

ಅಲ್ಲಿ ಕೇವಲ ಮೂರೇ ವರ್ಷಗಳಲ್ಲಿ ತನ್ನ ಯೋಗದ ಮೂಲಕ ಸಂಸ್ಥೆಯೊಂದರ ಸ್ಥಾಪನೆಗೆ ಕಾರಣರಾದರು. ವಿಯಟ್ನಾಂನಲ್ಲಿ ಓಂ ಯೋಗಾ ವೆಲ್ನೆಸ್ ಹಬ್ ಎಂಬ ಸಂಸ್ಥೆಯ ಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಯಟ್ನಾಂ ಪ್ರಧಾನಿಯೇ ಇವರನ್ನು ಮೆಚ್ಚಿ ಪ್ರಶಂಸೆ ನೀಡಿದ್ದಾರೆ. ಇವರ ಸಾಧನೆಯ ಮುಂದುವರೆದ ದಾಖಲೆಯ ಆಯಾಮಗಳಾಗಿ ಏಷ್ಯ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗಳೂ ಅವರ ಜೋಳಿಗೆಯಲ್ಲಿವೆ. ಅನೇಕ ಸಾಧನೆಗಳನ್ನು ಭವಿಷ್ಯದಲ್ಲಿ ಮಾಡಲು ಹೊರಟಿರುವ ಸಂತೋಷ್ ಕುಮಾರ್ ನಮ್ಮ ರಾಜ್ಯದ ಸೆಲೆಬ್ರಿಟಿಗಳಾದ ಯಡಿಯೂರಪ್ಪ ಮುಂತಾದವರಿಗೆ ಯೋಗ ಶಿಕ್ಷಣವನ್ನು ಕಲಿಸಿದ್ದಲ್ಲದೆ, ದಸರಾ ಆನೆಗಳನ್ನು ಸಾಕುವ ಕಾವಾಡಿಗಳಿಗೂ ಯೊಗಶಿಕ್ಷಣದ ಮಹತ್ವವನ್ನು ತಿಳಿಸಿದ್ದಾರೆ. 

ಮೈಸೂರು ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಅನೇಕ ಯೋಗ ಪ್ರದರ್ಶನಗಳನ್ನು ಇವರು ನೀಡಿದ್ದಾರೆ. ವಿಯಾಟ್ನಾಂನ ಭಾಷೆ, ಸಂಸ್ಕೃತಿಯೊಂದಿಗೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಯೋಗವನ್ನು ಸಮೀಕರಿಸಿದ್ದಾರೆ. ಸಂತೋಷ್ ಕುಮಾರ್ ಅವರ ತಂದೆ ಚೆರಿಯಮನೆ ಆನಂದ್ ಹಾಗೂ ತಾಯಿ ಎಸ್.ಎಂ.ದೇವಕಿಯವರು ಕುಶಾಲನಗರ ಸಮೀಪ ಬಸವನಹಳ್ಳಿಯಲ್ಲಿ ನೆಲೆಸಿದ್ದಾರೆ.

No comments:

Post a Comment